ಬುಧವಾರ, ಆಗಸ್ಟ್ 17, 2022
27 °C

ತಾಯಿಯ ಹೋರಾಟದಿಂದ ನನ್ನ ಕನಸು ನನಸು: ನೀರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ನಾನು ಬಾಸ್ಟನ್‌ನಲ್ಲಿ ಬೆಳೆದೆ. ನನಗಾಗ ಐದು ವರ್ಷ. ನನ್ನ ತಂದೆ–ತಾಯಿ ವಿಚ್ಛೇದನ ಪಡೆದ ನಂತರ ನನ್ನನ್ನು ಮತ್ತು ತಂಗಿಯನ್ನು ಬೆಳೆಸಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆಯ ದೃಢ ನಿರ್ಧಾರ, ಹೋರಾಟದ ಫಲವಾಗಿ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ’

ಅಮೆರಿಕದ  ‘ನಿರ್ವಹಣೆ ಮತ್ತು ಬಜೆಟ್‌’ ನಿರ್ದೇಶಕಿಯಾಗಿ ನಾಮ ನಿರ್ದೇಶನಗೊಂಡಿರುವ ಭಾರತ ಮೂಲದ ಅಮೆರಿಕನ್‌ ನೀರಾ ಟಂಡನ್‌ ಅವರ ಮಾತುಗಳಿವು.

‘ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ತಾಯಿಯಂತೆಯೇ ನನ್ನ ತಾಯಿ ಮಾಯಾ ಸಹ ಭಾರತದಲ್ಲಿ ಜನಿಸಿದರು. ಉತ್ತಮ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಇಲ್ಲಿಗೆ ಬರುವ ಲಕ್ಷಾಂತರ ಜನರಂತೆ ನನ್ನ ತಾಯಿಯೂ ಅಮೆರಿಕಕ್ಕೆ ಬಂದರು. ಆದರೆ, ಬದುಕು ಕಟ್ಟಿಕೊಂಡ ಹಾದಿ ಮಾತ್ರ ಸುಗಮವಾಗಿರಲಿಲ್ಲ’ ಎಂದು ನೀರಾ ಹೇಳಿದರು.

ವಿಲ್ಮಿಂಗ್ಟನ್‌ನಲ್ಲಿರುವ, ನಿಯೋಜಿತ ಅಧ್ಯಕ್ಷ ಬೈಡನ್‌ ಅವರ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಚ್ಛೇದನದ ನಂತರ ಸರ್ಕಾರ ಒದಗಿಸುವ ವಿವಿಧ ಸೌಲಭ್ಯಗಳ ನೆರವಿನಿಂದಲೇ ನಮ್ಮ ಕುಟುಂಬ ಎರಡು ವರ್ಷಗಳ ಕಾಲ ದಿನಗಳನ್ನು ದೂಡಿತು. ನಂತರ ಟ್ರಾವೆಲ್‌ ಏಜೆಂಟ್‌ ಉದ್ಯೋಗಕ್ಕೆ ಸೇರಿಕೊಂಡ ನನ್ನ ತಾಯಿ, ನಮಗೆ ಉತ್ತಮ ಶಿಕ್ಷಣ ಕೊಡಿಸಿದಳು’ ಎಂದು ವಿವರಿಸಿದರು.

‘ಇಂದು ನಾನು ಇಂತಹ ಉನ್ನತ ಸ್ಥಾನಕ್ಕೇರಿದ್ದೇನೆಂದರೆ ಅದು ನನ್ನ ತಾಯಿ ನೀಡಿದ ಕಾಣಿಕೆ. ಈ ದೇಶ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ, ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳು ಕಾರಣ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು