ಬುಧವಾರ, ಏಪ್ರಿಲ್ 21, 2021
23 °C
ಭ್ರಷ್ಟಾಚಾರ ಕುರಿತ ’ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್‌ 2020’ ವರದಿಯ ಪ್ರತಿಪಾದನೆ

ಭ್ರಷ್ಟಾಚಾರ ಮತ್ತು ಕೊರೊನಾ ನಿರ್ವಹಣೆ ಹೊಣೆಗಾರಿಕೆಗೆ ನಿಕಟ ಸಂಬಂಧ: ಸಮೀಕ್ಷೆ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್: ಭ್ರಷ್ಟಾಚಾರ ಮತ್ತು ಕೊರೊನಾ ಪರಿಸ್ಥಿತಿ ನಿರ್ವಹಣೆಯ ಹೊಣೆಗಾರಿಕೆಗೂ ನಿಕಟ ಸಂಬಂಧವಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಲ್ಲದೆ, ಕಡಿಮೆ ಭ್ರಷ್ಟಾಚಾರ ಮತ್ತು ಹಣಕಾಸು, ಆರೋಗ್ಯ ಕ್ಷೇತ್ರದ ಸವಾಲು ಎದುರಿಸುವಲ್ಲಿ ಸುಸ್ಥಿತಿಯಲ್ಲಿರುವ ದೇಶಗಳು ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿವೆ ಎಂದೂ ಸಮೀಕ್ಷೆ ಪ್ರತಿಪಾದಿಸಿದೆ.

ಭ್ರಷ್ಟಾಚಾರ ವಿರೋಧಿ ಸಂಘಟನೆಯು ಗುರುವಾರ ಬಿಡುಗಡೆ ಮಾಡಿದ ವಾರ್ಷಿಕ ಅಧ್ಯಯನ ವರದಿ ಈ ಅಂಶಕ್ಕೆ ಒತ್ತುನೀಡಿದೆ. ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್‌ 2020 ಭ್ರಷ್ಟಾಚಾರ ಅಂದಾಜು ಸೂಚ್ಯಂಕವು, ಸಾರ್ವಜನಿಕ ಕ್ಷೇತ್ರಗಳಲ್ಲಿ ಇರುವ ಭ್ರಷ್ಟಾಚಾರ ಸ್ವರೂಪವನ್ನು ಪರಿಣತರು, ಸಂಬಂಧಿಸಿದ ಜನರ ಅಭಿಪ್ರಾಯಗಳನ್ನು ಆಧರಿಸಿ ದಾಖಲಿಸಲಿದೆ.

ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ನೀತಿ ನಿಯಮಗಳ ಪರಿಧಿಯಲ್ಲೇ ಹೆಚ್ಚಿನ ಜನರಿಗೆ ಆರೋಗ್ಯ ಸೇವಾಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ಪ್ರಮುಖವಾಗಿ ಅಭಿಪ್ರಾಯಪಡಲಾಗಿದೆ.

‘ಕೋವಿಡ್–19 ಕೇವಲ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದ ಬಿಕ್ಕಟ್ಟು ಅಷ್ಟೇ ಅಲ್ಲ’ ಎಂದು ಟ್ರಾನ್ಸ್‌ಪರೆನ್ಸಿ ಸಂಸ್ಥೆಯ ಮುಖ್ಯಸ್ಥ ಡೆಲಿಯಾ ಫೆರಿರಾ ರುಬಿಯೊ ಹೇಳುತ್ತಾರೆ. ‘ಮುಖ್ಯವಾಗಿ ಇದೊಂದು ಭ್ರಷ್ಟಾಚಾರದ ಬಿಕ್ಕಟ್ಟು. ಇದನ್ನು ನಿಭಾಯಿಸುವಲ್ಲಿ ನಾವು ಪ್ರಸ್ತುತ ವಿಫಲರಾಗಿದ್ದೇವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಈ ವರ್ಷದ ಸೂಚ್ಯಂಕ ಆಧರಿಸಿದ ವರದಿಯ ಅನುಸಾರ, ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತಾವಧಿಯಲ್ಲಿ ಅಮೆರಿಕದ ಸಾಧನೆ ಕಳಪೆಯಾಗಿದೆ. ‘ಶೂನ್ಯ’ ಅಂಕವು ಅತ್ಯಧಿಕ ಭ್ರಷ್ಟಾಚಾರ ಮತ್ತು ’100’ ಅಂಕಗಳು ಶುದ್ಧವಾದ ಆಡಳಿತವನ್ನು ಬಿಂಬಿಸಲಿದೆ ಎಂಬ ಮಾನದಂಡವಿದ್ದ ಸೂಚ್ಯಂಕದಲ್ಲಿ ಟ್ರಂಪ್ ಆಡಳಿತವು 67 ಅಂಕಗಳನ್ನು ಗಳಿಸಿದೆ.

ಅಂದರೆ, ಅಮೆರಿಕ ಈ ಅಂಕಗಳನ್ನು ಕುರಿತ ಭ್ರಷ್ಟಾಚಾರ ಮತ್ತು ಕೋವಿಡ್‌ ನಿರ್ವಹಣೆ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದ್ದು, ಇದೇ ಸ್ಥಾನದಲ್ಲಿ ಚಿಲಿ ದೇಶವೂ ಇದೆ. ಇದರ ನಂತರ ವಿವಿಧ ಪಾಶ್ಚಿಮಾತ್ಯ ದೇಶಗಳಿವೆ. 2019ರಲ್ಲಿ ಅಮೆರಿಕದ ಸ್ಥಾನ 69 ಆಗಿದ್ದರೆ, 2018ರಲ್ಲಿ 71 ಹಾಗೂ 2017ರಲ್ಲಿ 75 ಆಗಿತ್ತು.

ಹಿತಾಸಕ್ತಿಗಳ ತಿಕ್ಕಾಟ ಮತ್ತು ಕಚೇರಿಯಲ್ಲಿ ಪರಸ್ಪರ ನಿಂದನೆ ಹೆಚ್ಚಿನ ಪ್ರಮಾಣವಿತ್ತು. ಸುಮಾರು 1 ಟ್ರಿಲಿಯನ್‌ ಡಾಲರ್ ಮೊತ್ತದ ಕೋವಿಡ್–19 ಪರಿಹಾರ ಪ್ಯಾಕೇಜ್‌ ಗಂಭೀರವಾದ ಪ್ರಶ್ನೆಗಳು ಮೂಡಲೂ ಕಾರಣವಾಯಿತು ಎಂದು ಬರ್ಲಿನ್ ಮೂಲದ ಟ್ರಾನ್ಸ್‌ಪರೆನ್ಸಿ ಸಂಸ್ಥೆಯ ವರದಿ ತಿಳಿಸಿದೆ.

ವಿಶ್ವದಾದ್ಯಂತ ಭ್ರಷ್ಟಾಚಾರ ಮತ್ತು ಕೊರೊನಾ ಸೋಂಕು ಕುರಿತ ಸಂಬಂಧ ಭಿನ್ನವಾಗೇನೂ ಇರಲಿಲ್ಲ. ಉದಾರಣೆಗೆ ಉರುಗ್ವೆ 71 ಅಂಕಗಳನ್ನು ಪಡೆದು 21ನೇ ಸ್ಥಾನದಲ್ಲಿದೆ. ಇದು, ಆರೋಗ್ಯ ಹಾಗೂ ಸಾಂಕ್ರಾಮಿಕ ರೋಗ ಸಮೀಕ್ಷೆ ಕುರಿತು  ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಕೊರೊನಾ ಅಲ್ಲದೆ, ವಿವಿಧ ಸಾಂಕ್ರಾಮಿಕ ರೋಗಳ ನಿರ್ವಹಣೆಗೆ ಒತ್ತು ನೀಡಿತ್ತು.

ಇದಕ್ಕ ವಿರೋಧಾಭಾಸ ಎಂಬಂತೆ ಬಾಂಗ್ಲಾದೇಶ 26 ಅಂಕ ಪಡೆದಿದ್ದು, ಪಟ್ಟಿಯಲ್ಲಿ 146ನೇ ಸ್ಥಾನದಲ್ಲಿದೆ. ಈ ದೇಶದ ಆರೋಗ್ಯ ಕ್ಷೇತ್ರದ ಮೇಲೆ ಕಡಿಮೆ ಹೂಡಿಕೆ ಮಾಡಿದೆ. ಆರೋಗ್ಯ ಕ್ಲಿನಿಕ್‌ನಲ್ಲಿ ಲಂಚ ಮತ್ತು ದುರ್ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಇತ್ತು. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿಯೂ ಭ್ರಷ್ಟಾಚಾರ, ಅವ್ಯವಹಾರ ಕಾಣಿಸಿಕೊಂಡಿತ್ತು.

ಸೂಚ್ಯಂಕದಲ್ಲಿ ಡೆನ್ಮಾರ್ಕ್‌ ಮತ್ತು ನ್ಯೂಜಿಲೆಂಡ್‌ ಪ್ರಥಮ ಸ್ಥಾನದಲ್ಲಿ ಇದ್ದು, ಕಡಿಮೆ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಇವುಗಳು ಒಟ್ಟು 88 ಅಂಕ ಗಳಿಸಿವೆ. ನಂತರದ ಸ್ಥಾನದಲ್ಲಿ 85 ಅಂಕಗಳೊಂದಿಗೆ ಫಿನ್ಲೆಂಡ್, ಸಿಂಗಪುರ, ಸ್ವಿಟ್ಜರ್‌ಲೆಂಡ್‌, ಸ್ವೀಡನ್‌ ಇದ್ದರೆ, ನಾರ್ವೆ ಆ ನಂತರ ಸ್ಥಾನದಲ್ಲಿ 84 ಅಂಕ ಪಡೆದಿದೆ. ಬಳಿಕ 82 ಅಂಕಗಳೊಂದಿಗೆ ನೆದರ್‌ಲೆಂಡ್ಸ್‌, 80 ಅಂಕಗಳೊಂದಿಗೆ ಜರ್ಮನಿ ಮತ್ತು ಲಕ್ಸೆಂಬರ್ಗ್‌ ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು