ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಹಿಂಬಾಗಿಲ ಮೂಲಕ ಮಾತುಕತೆ ನಡೆಯುತ್ತಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
‘ಮಾತುಕತೆಯು ಫಲಿತಾಂಶ ಆಧಾರಿತವಾಗಿದ್ದಾಗ ಮಾತ್ರ ಹಿಂಬಾಗಿಲಿನ ರಾಜತಾಂತ್ರಿಕತೆ ಅಪೇಕ್ಷಣೀಯವಾದುದು. ಈ ಕ್ಷಣದಲ್ಲಿ ಅಂತಹ ಯಾವುದೇ ಬೆಳವಣಿಗೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ಸೆನೆಟ್‌ಗೆ (ಮೇಲ್ಮನೆ) ತಿಳಿಸಿದರು.
‘ಪಾಕಿಸ್ತಾನವು ಗಡಿಯಲ್ಲಿ ಯಾವಾಗಲೂ ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಇದೀಗ ಗಡಿಯಾಚೆಗಿನ ಹಗೆತನ (ಭಾರತದ ಕಡೆಯಿಂದ) ಒಂದು ವಿಶಿಷ್ಟ ರೀತಿಯಲ್ಲಿದೆ’ ಎಂದು ಖಾರ್ ಹೇಳಿದರು.
ಮೇ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಗೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮತ್ತು ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ಅವರನ್ನು ಆಹ್ವಾನಿಸಲಾಗಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಕೆಲವೇ ದಿನಗಳ ನಂತರ ಖಾರ್ ಈ ಹೇಳಿಕೆ ನೀಡಿದರು.
ಎಸ್‌ಸಿಒ ಸಭೆಗೆ ಆತಿಥೇಯ ಭಾರತದ ಆಹ್ವಾನವನ್ನು ಪಾಕಿಸ್ತಾನ ಸ್ವೀಕರಿಸಿದ್ದು ಅದನ್ನು ಪರಿಶೀಲಿಸಲಾಗುತ್ತಿದೆ. ಆ ಸಭೆಯಲ್ಲಿ ಭಾಗವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಲೋಚ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.