ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಸಂಸತ್ ವಿಸರ್ಜನೆ ಪ್ರಕರಣ ‘ಸುಪ್ರೀಂ’ನಲ್ಲಿ ವಿಚಾರಣೆ ಶುರು

ಇಮ್ರಾನ್‌ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕಾರ ಹಾಗೂ ಸಂಸತ್ ವಿಸರ್ಜನೆ ಪ್ರಕರಣ ವಿಚಾರಣೆ
Last Updated 4 ಏಪ್ರಿಲ್ 2022, 17:53 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪ್ರಧಾನಿ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸ್ವೀಕೃತಿಗೆ ನಕಾರ ಹಾಗೂ ಪಾಕಿಸ್ತಾನದ ಸಂಸತ್ ವಿಸರ್ಜನೆ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ದಿನದ ಮಟ್ಟಿಗೆ ಮುಂದೂಡಿದೆ.

ಮುಖ್ಯನ್ಯಾಯಮೂರ್ತಿ ಉಮರ್ ಅತಾ ಬಂದಿಯಾಲ್ ನೇತೃತ್ವದ ವಿಸ್ತೃತ ಪೀಠವು ವಿಚಾರಣೆ ನಡೆಸುತ್ತಿದೆ. ಉಪ ಸ್ಪೀಕರ್ ಖಾಸಿಂ ಸೂರಿ ಅವರು ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಬಳಿಕ ಪ್ರಕರಣವು ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿದೆ.

ಅಧ್ಯಕ್ಷ ಆರಿಫ್ ಅಲ್ವಿ, ಸುಪ್ರೀಂ ಕೋರ್ಟ್ ವಕೀಲರ ಸಂಘ ಹಾಗೂ ಎಲ್ಲ ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಪ್ರತಿವಾದಿಗಳು. ಉಪ ಸ್ಪೀಕರ್ ಹೊರಡಿಸಿರುವ ಆದೇಶ ಕುರಿತಂತೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಪರ ವಕೀಲರು ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು.

ಪೂರ್ಣಪೀಠ ರಚಿಸುವಂತೆ ಪ್ರತಿಪಕ್ಷಗಳು ಇರಿಸಿದ ಬೇಡಿಕೆಯನ್ನು ಮುಖ್ಯನ್ಯಾಯಮೂರ್ತಿ ತಿರಸ್ಕರಿಸಿದರು. ವಿಚಾರಣೆಯನ್ನು ಮುಕ್ತಾಯಗೊಳಿಸುವ ಮುನ್ನ ಎಲ್ಲ ರಾಜಕೀಯ ಪಕ್ಷಗಳ ವಾದ ಆಲಿಸುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಕೆಲವು ಉಲ್ಲಂಘನೆಗಳಾಗಿವೆ ಎಂದು ಅವರು ವಿಚಾರಣೆ ವೇಳೆ ಹೇಳಿದರು ಎಂದು ‘ಡಾನ್’ ಸುದ್ದಿಮಾಧ್ಯಮ ವರದಿ ಮಾಡಿದೆ. ಗೊತ್ತುವಳಿಯನ್ನು ಮತಕ್ಕೆ ಹಾಕುವ ಮುನ್ನ ಚರ್ಚೆ ನಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಈ ನಿಯಮ ಪಾಲನೆಯಾಗಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.

ಆದೇಶ ನೀಡುವ ಉಪ ಸ್ಪೀಕರ್ ಅವರ ಸಾಂವಿಧಾನಿಕ ಅಧಿಕಾರದ ಬಗ್ಗೆ ನ್ಯಾಯಮೂರ್ತಿ ಅಖ್ತರ್ ಅವರು ಸಂದೇಹ ವ್ಯಕ್ತಪಡಿಸಿದರು. ‘ನನ್ನ ಪ್ರಕಾರ, ಸ್ಪೀಕರ್‌ಗೆ ಮಾತ್ರ ಇಂತಹ ಆದೇಶ ನೀಡುವ ಅಧಿಕಾರವಿದೆ. ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ ಉಪ ಸ್ಪೀಕರ್‌ಗೆಸದನವನ್ನು ನಡೆಸುವ ಅಧಿಕಾರವಷ್ಟೇ ಇರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಪಕ್ಷಗಳ ಪರ ಹಾಜರಿದ್ದ ವಕೀಲ ಫಾರೂಕ್ ಎಚ್. ನಯೆಕ್ ಅವರು ಸೋಮವಾರವೇ ತೀರ್ಪು ಪ್ರಕಟಿ
ಸುವಂತೆ ಮನವಿ ಮಾಡಿದರು. ಆದರೆ ಆತುರವಾಗಿ ತೀರ್ಪು ಪ್ರಕಟಿಸಲು ಆಗುವು
ದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ದೇವಸ್ಥಾನ ಮರು ನಿರ್ಮಾಣಕ್ಕೆ ಆದೇಶಿಸಿದ್ದ ಗುಲ್ಜಾರ್‌

ಇಮ್ರಾನ್ ಖಾನ್ ಅವರು ಉಸ್ತುವಾರಿ ಪ್ರಧಾನಮಂತ್ರಿ ಹುದ್ದೆಗೆ ಸೂಚಿಸಿರುವ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹಮದ್ ಅವರು2019ರ ಡಿಸೆಂಬರ್‌ನಿಂದ 2022ರ ಫೆಬ್ರುವರಿವರೆಗೆ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿದ್ದರು. ಪನಾಮಾ ದಾಖಲೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಇವರು ಇದ್ದರು. ಪ್ರಮುಖ ತೀರ್ಪುಗಳು ಹಾಗೂ ಸರ್ಕಾರ, ಅಧಿಕಾರಿಗಳ ವಿರುದ್ಧ ನಿಷ್ಠುರ ಹೇಳಿಕೆಗಳಿಂದ ಗುಲ್ಜಾರ್ ಅವರು ಹಲವು ಬಾರಿ ಸುದ್ದಿಯಲ್ಲಿದ್ದರು.

ವಾಯವ್ಯ ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದ ದೇವಸ್ಥಾನವನ್ನು ಮರು ನಿರ್ಮಾಣ ಮಾಡುವಂತೆ ಗುಲ್ಜಾರ್ ಅವರು ಆದೇಶಿಸಿದ್ದರು. ದೇವಸ್ಥಾನ ಮರು ನಿರ್ಮಾಣಕ್ಕೆ ತಗಲುವ ವೆಚ್ಚವನ್ನುಪಾಕಿಸ್ತಾನಕ್ಕೆ ಅಂತರ
ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡಿದ ಈ ಘಟನೆಗೆ ಕಾರಣರಾದವರಿಂದ ವಸೂಲಿ ಮಾಡುವಂತೆಯೂ ಅವರು ಸೂಚಿಸಿದ್ದರು.

ಅವಿಶ್ವಾಸದಲ್ಲಿ ಇಮ್ರಾನ್‌ಗೆ ಸೋಲು: ಪ್ರತಿಪಕ್ಷಗಳ ಘೋಷಣೆ

ಸೋಮವಾರ ಪ್ರತ್ಯೇಕ ಅಧಿವೇಶನ ನಡೆಸಿದಪಾಕಿಸ್ತಾನದ ವಿರೋಧ ಪಕ್ಷಗಳು, ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ ಎಂದು ಘೋಷಿಸಿದ ನಾಟಕೀಯ ಬೆಳವಣಿಗೆ ಸೋಮವಾರ ನಡೆಯಿತು.

ಪಾಕಿಸ್ತಾನದ ಸಂಸತ್ತನ್ನು ಅಧ್ಯಕ್ಷ ಅಲ್ವಿ ಅವರು ವಿಸರ್ಜಿಸಿದ ಬೆನ್ನಲ್ಲೇ ಅಧಿವೇಶನ ನಡೆಸಿದ ಪ್ರತಿಪಕ್ಷಗಳು, 197 ಮತಗಳ ಅಂತರದಿಂದ ಇಮ್ರಾನ್ ಅವರು ಸೋಲುಂಡಿದ್ದಾರೆ ಎಂದು ಪ್ರಕಟಿಸಿವೆ. ಸಚಿವಾಲಯದ ಸಿಬ್ಬಂದಿ ಅನುಪಸ್ಥಿತಿ ಇದ್ದರೂ, ತಾವು ನಡೆಸಿದ ಕಾರ್ಯಕಲಾಪ ‘ಕಾನೂನುಬದ್ಧ’ ಎಂದು ಪ್ರತಿಪಕ್ಷಗಳು ಘೋಷಿಸಿದವು.

ಪ್ರತಿಪಕ್ಷಗಳು ನಡೆಸಿದ ಪ್ರತ್ಯೇಕ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಹಾಗೂ ಪಿಎಂಎಲ್–ಎನ್‌ ಅಧ್ಯಕ್ಷ ಶಹಬಾಜ್ ಶರೀಫ್ ಅವರು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಪರವಾಗಿ ಆಡಳಿತಾರೂಢ ಪಾಕಿಸ್ತಾನ್ ತೆಹ್ರಿಕ್–ಇ–ಇನ್ಸಾಫ್ ಪಕ್ಷದ 22 ಭಿನ್ನಮತೀಯರು ಮತ ಹಾಕಿದರು. ಪಿಎಂಎಲ್–ಎನ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಮುರ್ತಾಜಾ ಜಾಎದ ಅಬ್ಬಾಸಿ ಅವರುಅಧಿಕಾರಿಗಳ ಅನುಪಸ್ಥಿತಿಯಲ್ಲಿ, ನಿರ್ಣಯದ ಪರ ಮತ ಹಾಕಿದವರ ಹೆಸರನ್ನು ನಮೂದಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT