ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಪ್ರಾರ್ಥನಾ ಸ್ಥಳಗಳು, ಜನರ ಮೇಲೆ ಹೆಚ್ಚಿದ ದಾಳಿ: ಬ್ಲಿಂಕೆನ್‌

Last Updated 3 ಜೂನ್ 2022, 3:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಜನರು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಹೆಚ್ಚಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್‌ ಪ್ರಸ್ತಾಪಿಸಿದ್ದು, ಜಗತ್ತಿನಾದ್ಯಂತ ಧಾರ್ಮಿಕ ಸ್ವತಂತ್ರದ ಪರವಾಗಿ ಅಮೆರಿಕ ನಿಲ್ಲುತ್ತದೆ ಎಂದಿದ್ದಾರೆ.

ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಚೀನಾ ಸೇರಿ ಏಷ್ಯಾದ ಇತರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದಾಗಿ ಹೇಳಿದ್ದಾರೆ.

ಗುರುವಾರ ಅಂತರರಾಷ್ಟ್ರೀಯ ಧಾರ್ಮಿಕ ಸ್ವತಂತ್ರದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಬ್ಲಿಂಕೆನ್‌, 'ಜಗತ್ತಿನಾದ್ಯಂತ ಧಾರ್ಮಿಕ ಸ್ವತಂತ್ರದ ಪರವಾಗಿ ಅಮೆರಿಕ ಮುಂದುವರಿಯಲಿದೆ. ಆ ಬಗ್ಗೆ ಇತರೆ ರಾಷ್ಟ್ರಗಳ ಸರ್ಕಾರಗಳು, ಸಂಸ್ಥೆಗಳು, ನಾಗರಿಕ ಸಮಾಜದೊಂದಿಗೆ ಕೈಜೋಡಿಸುವುದು ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

ಧಾರ್ಮಿಕ ಸ್ವತಂತ್ರ ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರ ಹಕ್ಕುಗಳಿಗೆ ಎದುರಾಗಿರುವ ಅಪಾಯಗಳ ಕುರಿತು ವರದಿ ಒಳಗೊಂಡಿದೆ ಎಂದಿರುವ ಅವರು, 'ಉದಾಹರಣೆಗೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಹಾಗೂ ವಿವಿಧ ನಂಬಿಕೆಗಳನ್ನು ಒಳಗೊಂಡಿರುವ ಭಾರತದಲ್ಲಿ ಜನರ ಮೇಲೆ ಮತ್ತು ಪ್ರಾರ್ಥನಾ ಸ್ಥಳಗಳಲ್ಲಿ ದಾಳಿಗಳು ಹೆಚ್ಚಿವೆ. ವಿಯೆಟ್ನಾಂನಲ್ಲಿ ದಾಖಲಾಗದ ಧಾರ್ಮಿಕ ಸಮುದಾಯಗಳ ಸದಸ್ಯರ ಮೇಲೆ ಆಡಳಿತ ವರ್ಗವು ಕಿರುಕುಳ ನೀಡುತ್ತಿದೆ; ನೈಜೀರಿಯಾದಲ್ಲಿ ಜನರು ತಮ್ಮ ನಂಬಿಕೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ಅವರನ್ನು ಶಿಕ್ಷಿಸಲು ಅಲ್ಲಿನ ಹಲವು ರಾಜ್ಯ ಸರ್ಕಾರಗಳು ಧರ್ಮ ನಿಂದನೆ ಮತ್ತು ಮಾನಹಾನಿ ನಿಗ್ರಹ ಕಾನೂನುಗಳನ್ನು ಬಳಸಿಕೊಳ್ಳುತ್ತಿವೆ' ಎಂದಿದ್ದಾರೆ.

ಚೀನಾದಲ್ಲಿ ಇತರೆ ಧರ್ಮಗಳನ್ನು ಅನುಸರಿಸುತ್ತಿರುವವರ ಮೇಲೆ ಚೀನಾ ಕಮ್ಯುನಿಸ್ಟ್ ಪಾರ್ಟಿ ಆಡಳಿತವು ತೀವ್ರ ಕಿರುಕುಳ ನೀಡುತ್ತಿದೆ. ಬೌದ್ಧರು, ಕ್ರಿಶ್ಚಿಯನ್ನರು, ಮುಸ್ಲಿಮರು ಹಾಗೂ ಟಾವೊಯಿಸ್ಟ್‌ ಪ್ರಾರ್ಥನಾ ಸ್ಥಳಗಳನ್ನು ನಾಶ ಮಾಡಲಾಗುತ್ತಿದೆ. ಟಿಬೆಟ್‌ ಬೌದ್ಧರು, ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಪಾಲನ್‌ ಗಾಂಗ್‌ ಅನುಯಾಯಿಗಳಿಗೆ ಉದ್ಯೋಗದಲ್ಲಿ ಮತ್ತು ವಾಸ್ತವ್ಯದಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಬ್ಲಿಂಕೆನ್‌ ಉಲ್ಲೇಖಿಸಿದ್ದಾರೆ.

ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಸ್ವತಂತ್ರವು ಕುಸಿದಿದೆ. ಮಹಿಳೆಯರು ಮತ್ತು ಮಕ್ಕಳ ಮೂಲಭೂತ ಹಕ್ಕುಗಳಾದ ಶಿಕ್ಷಣ, ಉದ್ಯೋಗ ಹಾಗೂ ಸಮಾಜದಲ್ಲಿ ಬೆರೆಯುವುದನ್ನು ಧರ್ಮದ ಹೆಸರಿನಲ್ಲಿ ನಿರ್ಬಂಧಿಸಲಾಗಿದೆ. ಈ ನಡುವೆ ಧಾರ್ಮಿಕ ಅಲ್ಪ ಸಂಖ್ಯಾತರ ವಿರುದ್ಧ ಐಎಸ್ಐಎಸ್‌–ಕೆ ಹಿಂಸಾತ್ಮಕ ದಾಳಿ ನಡೆಸುತ್ತಿದೆ.

ಪಾಕಿಸ್ತಾನದಲ್ಲಿ ಧರ್ಮ ನಿಂದನೆಯ ಆರೋಪಗಳ ಮೇಲೆ 2021ರಲ್ಲಿ ಪಾಕಿಸ್ತಾನ ಕೋರ್ಟ್‌ಗಳು ಕನಿಷ್ಠ 16 ಜನರಿಗೆ ಮರಣದಂಡನೆ ನೀಡಿವೆ ಎಂದು ಬ್ಲಿಂಕೆನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT