ಶನಿವಾರ, ಮಾರ್ಚ್ 25, 2023
28 °C
ಹವಾಮಾನ ವೈಪರೀತ್ಯದ ವಿರುದ್ಧದ ಜಾಗತಿಕ ಹೋರಾಟ

ಪ್ರಧಾನಿ ಮೋದಿ ನಾಯಕತ್ವ ಶ್ಲಾಘಿಸಿದ ಬೋರಿಸ್ ಜಾನ್ಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಹವಾಮಾನ ವೈಪರೀತ್ಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

‘ವಿಪತ್ತು ಸ್ಥಿತಿಸ್ಥಾಪಕತ್ವ ಮೂಲಸೌಕರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಬುಧವಾರ ಅಂತರರಾಷ್ಟ್ರೀಯ ವರ್ಚ್ಯುವಲ್ ಸಂವಾದ’ದಲ್ಲಿ (ಸಿಡಿಆರ್‌ಐ) ಮಾತನಾಡಿದ ಬೋರಿಸ್ ಜಾನ್ಸನ್, ಕಾರ್ಯಕ್ರಮ ಆಯೋಜಿಸಿದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು. ಸಂವಾದಕ್ಕೆ ಮೋದಿ ಚಾಲನೆ ನೀಡಿದರು.

‘ಹವಾಮಾನ ವೈಪರೀತ್ಯದ ವಿರುದ್ಧ ಜಾಗತಿಕ ಹೋರಾಟದಲ್ಲಿ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುವ ಸಾಧ್ಯತೆಗಳ ಕುರಿತ ಮೋದಿ ಅವರ ಕಲ್ಪನೆ ಅದ್ಭುತವಾದದ್ದು’ ಎಂದು ಬಣ್ಣಿಸಿದ ಅವರು, ಈ ವಿಚಾರದಲ್ಲಿ ಬ್ರಿಟನ್ ಮತ್ತು ಭಾರತ ಒಗ್ಗೂಡಿ ಪರಸ್ಪರ ಹೆಚ್ಚಿನ ಗುರಿ ಸಾಧಿಸುವ ಬಗ್ಗೆ ಹಾಗೂ ಹವಾಮಾನ ವೈಪರೀತ್ಯದಿಂದ ಬಳಲುತ್ತಿರುವ ಸಣ್ಣ ದ್ವೀಪಗಳಂಥ ರಾಷ್ಟ್ರಗಳನ್ನು ಬೆಂಬಲಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.

‘ಜಾಗತಿಕ ಸಮುದಾಯದ ಸುಸ್ಥಿರ ಭವಿಷ್ಯಕ್ಕಾಗಿ ಉಭಯ ರಾಷ್ಟ್ರಗಳು ಹಂಚಿಕೆಯ ದೃಷ್ಟಿಕೋನ ಹೊಂದಿವೆ. ಈ ನಿಟ್ಟಿನಲ್ಲಿ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಲು ನಾನು ಎದುರುನೋಡುತ್ತಿದ್ದೇನೆ’ ಎಂದೂ ಬೋರಿಸ್ ಜಾನ್ಸನ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. 

‘ಸಿಡಿಆರ್‌ಐ ಒಕ್ಕೂಟದ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ. ಈ ನಿಟ್ಟಿನಲ್ಲಿ ಬ್ರಿಟನ್ ಕೂಡಾ ಸಹಭಾಗಿತ್ವ ಹೊಂದಿರುವುದು ಹೆಮ್ಮೆಯ ಸಂಗತಿ. ಒಕ್ಕೂಟವು 28 ದೇಶಗಳು ಮತ್ತು ಸಂಸ್ಥೆಗಳೊಂದಿಗೆ ಸಹಿ ಹಾಕಿರುವುದು ಸಂತಸದ ಸಂಗತಿ’ ಎಂದರು.

‘ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ನಾವು ಸ್ಥಿತಿಸ್ಥಾಪಕತ್ವ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ. ನಮ್ಮ ಸಮುದಾಯಗಳನ್ನು ಸುರಕ್ಷಿತವಾಗಿಡಲು ನಾವು ಅವಲಂಬಿಸಿರುವ ಮೂಲಸೌಕರ್ಯಗಳನ್ನು ಸೂಕ್ತವಾದ ರೀತಿಯಲ್ಲಿ ಸಿದ್ಧಪಡಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಿಡಿಆರ್‌ಐನಲ್ಲಿ ಭಾರತ ಮತ್ತು ಬ್ರಿಟನ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹವಾಮಾನ ವೈಪರೀತ್ಯ ಎದುರಿಸುತ್ತಿರುವ ಸಣ್ಣ ರಾಷ್ಟ್ರಗಳ ಬೆಂಬಲಕ್ಕೆ ನಿಂತಿವೆ.

ಏಪ್ರಿಲ್ ಕೊನೆಯ ವಾರದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು