ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈಶೆನ್‌’ ಚಂಡಮಾರುತಕ್ಕೆ ಜಪಾನ್‌ ತತ್ತರ

ವಾರದಲ್ಲಿ ಬಾಧಿಸಿದ ಎರಡನೇ ನೈಸರ್ಗಿಕ ವಿಕೋಪ
Last Updated 6 ಸೆಪ್ಟೆಂಬರ್ 2020, 7:51 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ನ ದಕ್ಷಿಣ ಭಾಗಕ್ಕೆ ಭಾನುವಾರ ಪ್ರಬಲ ‘ಹೈಶೆನ್‌’ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮನೆಗಳ ಚಾವಣಿ ಹಾರಿ ಹೋಗಿದ್ದರೆ, ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಜನರು ಪರದಾಡಿದರು.

ವಾರದ ಅಂತರದಲ್ಲಿ ಎರಡನೇ ಸಲ ಜಪಾನ್‌ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಎನ್‌ಎಚ್‌ಕೆ ವಾಹಿನಿ ವರದಿ ಮಾಡಿದೆ.

ಬಿರುಗಾಳಿ ಸಮೇತ ಭಾರಿ ಮಳೆ ಬೀಳಲಿದೆ. ತಲೆ ಮೇಲೆ ಬಕೆಟ್‌ನಿಂದ ನೀರು ಸುರಿದ ರೀತಿಯಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸುರಕ್ಷಿತ ಸ್ಥಳಕ್ಕೆ ತೆರಳಬೇಕು, ಆಹಾರ ಮತ್ತು ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಜನರಿಗೆ ಸೂಚನೆಯನ್ನೂ ನೀಡಲಾಗಿದೆ.

ಜಪಾನ್‌ನ ವಾಯವ್ಯ ಭಾಗದಲ್ಲಿರುವ ಕ್ಯೂಶು ದ್ವೀಪದಲ್ಲಿನ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುವ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿದ್ದಾರೆ.ದ್ವೀಪದ ಒಕಿನಾವಾ, ಕ್ಯೂಶು ಹಾಗೂ ಕಾಗೋಶಿಮಾದ ಆಡಳಿತಾಧಿಕಾರಿಗಳು 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.

ಸುರಕ್ಷಿತ ಸ್ಥಳಗಳತ್ತ ತೆರಳುತ್ತಿದ್ದರೂ,ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವತ್ತಲೂ ಜನರು ಗಮನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಹಾನಿ: ಕಳೆದ ವಾರ ಅಪ್ಪಳಿಸಿದ್ದ ಮೇಸಕ್‌ ಚಂಡಮಾರುತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಪಾನ್‌ ಮತ್ತೊಂದು ಚಂಡಮಾರುತ ಹೊಡೆತಕ್ಕೆ ಸಿಲುಕಿದೆ.

ದಕ್ಷಿಣ ಪ್ರದೇಶದಲ್ಲಿಯೇ ಅಪಾರ ಹಾನಿಗೆ ಕಾರಣವಾಗಿದ್ದ ಈ ಚಂಡಮಾರುತದಷ್ಟೇ ಹೈಶೆನ್‌ ಪ್ರಬಲವಾಗಿದೆ ಎಂದು ತಜ್ಞರು ಹೇಳಿದ್ದಾರೆ. ನ್ಯೂಜಿಲೆಂಡ್‌ನಿಂದ 5,800 ಹಸುಗಳನ್ನು ಹೊತ್ತ, 43 ಸಿಬ್ಬಂದಿ ಇದ್ದ ಸರಕು ಸಾಗಣೆ ಹಡಗು ಮೇಸಕ್‌ ಹೊಡೆತದಿಂದಾಗಿ ಮುಳುಗಿತ್ತು. ಸಿಬ್ಬಂದಿ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು. ಅಷ್ಟರಲ್ಲೇ ಹೈಶೆನ್‌ನ ರುದ್ರನರ್ತನದ ಪರಿಣಾಮ ರಕ್ಷಣಾ ಕಾರ್ಯವನ್ನು ಮೊಟಕುಗೊಳಿಸಲಾಯಿತು.

‘ಸಮುದ್ರ ದೇವತೆ’ಯ ರುದ್ರನರ್ತನ...

‘ಹೈಶೆನ್‌’ ಎಂಬುದು ಚೀನಿ ಭಾಷೆಯ ಪದ. ಸಮುದ್ರ ದೇವತೆ ಎಂಬುದು ಈ ಪದದ ಅರ್ಥ. ಈ ಚಂಡಮಾರುತ ಗಂಟೆಗೆ 162 ಕಿ.ಮೀ. ವೇಗದಲ್ಲಿ ಬೀಸುವ ಕಾರಣ, ಪರಿಣಾಮವೂ ಭೀಕರವಾಗಿರಲಿದೆ ಎಂದು ಜಪಾನ್‌ ಹವಾಮಾನ ಸಂಸ್ಥೆ ತಿಳಿಸಿದೆ.

ಇದು ಪ್ರಬಲ ಚಂಡಮಾರುತ. ಹೆಚ್ಚು ಪ್ರದೇಶಕ್ಕೆ ವಿಸ್ತಾರಗೊಂಡು, ಭಾರಿ ಪ್ರಮಾಣದ ಹಾನಿಯನ್ನೂ ಮಾಡಬಲ್ಲದು ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT