ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆರ್ನೊಬಿಲ್‌ ಸ್ಥಾವರದಲ್ಲಿ ವಿಕಿರಣ ಸೋರಿಕೆ ಸಾಧ್ಯತೆ; ಉಕ್ರೇನ್ ಎಚ್ಚರಿಕೆ

Last Updated 9 ಮಾರ್ಚ್ 2022, 16:10 IST
ಅಕ್ಷರ ಗಾತ್ರ

ಎಲ್ವೀವ್‌, ವಿಯೆನ್ನಾ: ಉಕ್ರೇನ್‌ನ ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದಿಂದ ವಿಕಿರಣ ಸೋರಿಕೆಯಾಗುವ ಅಪಾಯವಿದೆ ಎಂದು ಉಕ್ರೇನ್‌ನ ಸರ್ಕಾರಿ ಪರಮಾಣು ಕಂಪನಿ ಎನರ್‌ಗೋಟಮ್ ಬುಧವಾರ ಎಚ್ಚರಿಸಿದೆ.

ಅಲ್ಲದೆಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರ ತುರ್ತಾಗಿ ದುರಸ್ತಿ ಮಾಡಿಕೊಡಲು ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ ರಷ್ಯಾಗೆ ಉಕ್ರೇನ್ ಮನವಿ ಮಾಡಿದೆ.

ರಷ್ಯಾ ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ನಂತರ, ರಷ್ಯಾ ಪಡೆಗಳು ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡಿವೆ. ಈ ಸ್ಥಳದಲ್ಲಿ ಕದನ ನಡೆಯುತ್ತಿರುವುದರಿಂದ ಸ್ಥಾವರ ಸಂಪರ್ಕ ಕಳೆದುಕೊಂಡಿರುವ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗವನ್ನು ತಕ್ಷಣವೇ ಸರಿಪಡಿಸುವುದು ಅಸಾಧ್ಯ. ಇದರಿಂದ ಬಳಕೆಯಾದ ಅಣು ಇಂಧನ ತಂಪಾಗಿಸಲು ಸಾಧ್ಯವಾಗದಂತಾಗಿದೆ ಎಂದು ಅದು ಹೇಳಿದೆ.

‘ಚೆರ್ನೋಬಿಲ್‌ನಲ್ಲಿ ಸುಮಾರು 20,000 ಬಳಕೆ ಮಾಡಿದ ಇಂಧನ ಅಸೆಂಬ್ಲಿಗಳು ಇದ್ದು, ವಿದ್ಯುತ್‌ ಸಂಪರ್ಕ ಇಲ್ಲದೇ ಇವುಗಳನ್ನು ಈಗ ತಣ್ಣಗಿಡುವುದು ಅಸಾಧ್ಯ. ಅವುಗಳ ಉಷ್ಣತೆಯಿಂದ ಪರಿಸರಕ್ಕೆ ವಿಕಿರಣ ಸೋರಿಕೆಯಾಗಬಹುದು. ಈ ವಿಕಿರಣಗಳು ಮೋಡದಲ್ಲಿ ಸೇರಿ ಗಾಳಿಯಲ್ಲಿ ಉಕ್ರೇನ್, ಬೆಲಾರಸ್, ರಷ್ಯಾ ಹಾಗೂ ಯುರೋಪ್‌ನಾದ್ಯಂತ ಪಸರಿಸಬಹುದು’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

‘ಸ್ಥಾವರದಲ್ಲಿ 210 ಸಿಬ್ಬಂದಿ ಇದ್ದಾರೆ. ವಿದ್ಯುತ್ ಇಲ್ಲದೆ, ಸ್ಥಾವರದಲ್ಲಿನ ವಾತಾಯನ ವ್ಯವಸ್ಥೆಗಳು ಸಹ ಕಾರ್ಯನಿರ್ವಹಿಸುವುದಿಲ್ಲ. ಇದು ಅಪಾಯಕಾರಿ ಪ್ರಮಾಣದ ವಿಕಿರಣಕ್ಕೆ ಸಿಬ್ಬಂದಿಯನ್ನು ಒಡ್ಡುತ್ತದೆ’ ಎಂದು ಎನರ್ಗೋಟಮ್ ಆತಂಕ ವ್ಯಕ್ತಪಡಿಸಿದೆ.

ಸ್ಥಾವರ ಸ್ಥಗಿತ:

ರಷ್ಯಾ ಪಡೆಗಳ ವಶಕ್ಕೆ ಸಿಕ್ಕ ನಂತರ ಚೆರ್ನೊಬಿಲ್‌ ಅಣು ವಿದ್ಯುತ್ ಸ್ಥಾವರವು ಐಎಇಎಗೆ ದತ್ತಾಂಶ ಕಳುಹಿಸುವುದನ್ನು ಸ್ಥಗಿತಗೊಳಿಸಿದೆ ಎಂದು ವಿಶ್ವಸಂಸ್ಥೆಯ ಅಣು ಶಕ್ತಿ ಏಜೆನ್ಸಿ (ಐಎಇಎ) ಹೇಳಿದೆ.

ಸ್ಥಾವರವು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ಅಣು ವಸ್ತುಗಳ ನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್‌ನ ಪರಮಾಣು ನಿಯಂತ್ರಕದ ಮಾಹಿತಿ ಉಲ್ಲೇಖಿಸಿ, ಐಎಇಎ ಐಎಇಎ ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT