ಶುಕ್ರವಾರ, ಆಗಸ್ಟ್ 12, 2022
24 °C

ಯೋಶಿಹಿದೆ ಸುಗಾ ಜಪಾನ್‌ನ ನೂತನ ಪ್ರಧಾನಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೊಕಿಯೊ: ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಯೋಶಿಹಿದೆ ಸುಗಾ (71) ಜಪಾನ್ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರಿಗೆ ಹಲವು ವರ್ಷಗಳಿಂದ ಆಪ್ತರಾಗಿರುವ ಹಾಗೂ ಸರ್ಕಾರದ ನೀತಿ ನಿರೂಪಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಪುಟದ ಮಾಜಿ ಮುಖ್ಯ ಕಾರ್ಯದರ್ಶಿ ಯೋಶಿಹಿದೆ ಸುಗಾ ಅವರನ್ನು ಜಪಾನ್‌ ಸಂಸತ್ತು ಬುಧವಾರ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿತು.

ಇದಕ್ಕೂ ಮುನ್ನ ಬುಧವಾರ ಸಂಸತ್ತಿನ ಕೆಳಮನೆಯಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆಯಲ್ಲಿ ಒಟ್ಟು 462 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಯೋಶಿಹಿದೆ ಸುಗಾ ಅವರು 314 ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಆಯ್ಕೆಯಾದರು. ’ಫಲಿತಾಂಶದ ಪ್ರಕಾರ, ಯೋಶಿಹಿದೆ ಸುಗಾ ಅವರನ್ನು ಜಪಾನ್‌ನ ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲು ಸಂಸತ್ತು ನಿರ್ಧರಿಸಿದೆ’ ಎಂದು ಸಂಸತ್ತಿನ ಕೆಳಮನೆಯ ಸಭಾಧ್ಯಕ್ಷ ತಡೆಮೂರಿ ಶಿಮಾ ಪ್ರಕಟಿಸಿದರು.

ಪ್ರಸ್ತುತ ಸಂಸತ್ತಿನಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಪೂರ್ಣ ಬಹುಮತ ಹೊಂದಿದೆ. ಸೆಪ್ಟೆಂಬರ್ 14ರಂದು ಸುಗಾ ಅವರು ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷರಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದರು. ಅಧ್ಯಕ್ಷಗಾದಿಗಾಗಿ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಾಜಿ ವಿದೇಶಾಂಗ ಸಚಿವ ಮತ್ತು ಮಾಜಿ ರಕ್ಷಣಾ ಸಚಿವರು ಸುಗಾ ವಿರುದ್ಧ ಸ್ಪರ್ಧಿಸಿದ್ದರು.

ಶಿಂಜೊ ಅಬೆ ಅವರು ಅನಾರೋಗ್ಯದ ಕಾರಣ ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಉತ್ತರಾಧಿಕಾರಿಯ ಆಯ್ಕೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.