ಗುರುವಾರ , ಅಕ್ಟೋಬರ್ 6, 2022
26 °C
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಗೆ ಪುಟಿನ್‌ ಗೈರು

ಶತ್ರು ಸೇನೆ ದ್ವಿಗುಣವಾದರೂ ಗೆಲುವು ನಮ್ಮದೇ: ಝೆಲೆನ್‌ಸ್ಕಿ ಪ್ರತಿಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ (ಎಪಿ/ಎಎಫ್‌ಪಿ): ಆಕ್ರಮಣ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕು ಎಂದು ವಿಶ್ವ ನಾಯಕರನ್ನು ಒತ್ತಾಯಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಯುದ್ಧದ ಪ್ರಯತ್ನ ದ್ವಿಗುಣಗೊಳಿಸುವ ಮಾಸ್ಕೊ ನಿರ್ಧಾರದ ಹೊರತಾಗಿಯೂ ನಮ್ಮ ನೆಲದ ಪ್ರತಿ ಇಂಚು ಪ್ರದೇಶವನ್ನು ಮರಳಿ ಗೆಲ್ಲುತ್ತೇವೆ’ ಎಂದು ಪ್ರತಿಜ್ಞೆ ಮಾಡಿದರು.

ಮೀಸಲು ಯೋಧರನ್ನು ಸೇರಿಸಿಕೊಂಡು ಸೇನೆಯನ್ನು ಭಾಗಶಃ ಸನ್ನದ್ಧಗೊಳಿಸಲು ಪುಟಿನ್‌ ಬುಧವಾರ ಆದೇಶಿಸಿದ ಕೆಲವೇ ಗಂಟೆಗಳ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ವಿಡಿಯೊ ಮೂಲಕ ಝೆಲೆನ್‌ಸ್ಕಿ ಮಾತನಾಡಿದರು.

‘ಯುದ್ಧ ಕೊನೆಗೊಳಿಸಲು ಮಾತುಕತೆಗೆ ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ಸಿದ್ಧವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸೇನೆಯ ಮರುಸಂಯೋಜಿಸುವ ಘೋಷಣೆ ಹೊರಡಿಸಿದ್ದಾರೆ. ಏನೇ ಆದರೂ ನಮ್ಮ ರಾಷ್ಟ್ರ ಮೇಲುಗೈ ಸಾಧಿಸಲಿದೆ’ ಎಂದು ಹೇಳಿದರು.

ಚಳಿಗಾಲ ಮುಗಿದ ನಂತರ ಉಕ್ರೇನ್‌ನಲ್ಲಿ ಹೊಸ ಆಕ್ರಮಣ ನಡೆಸಲು ಬಯಸಿರುವ ಮಾಸ್ಕೊ ತನ್ನ ಪಡೆಗಳನ್ನು ಸನ್ನದ್ಧಗೊಳಿಸುತ್ತಿದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯಲ್ಲಿ ರಷ್ಯಾ ಹೊಂದಿರುವ ವೀಟೊ ಅಧಿಕಾರವನ್ನು ರದ್ದುಪಡಿಸಬೇಕು ಎಂದು ಝೆಲೆನ್‌ಸ್ಕಿ ಅವರು ವಿಶ್ವ ನಾಯಕರಲ್ಲಿ ಒತ್ತಾಯಿಸಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಭಾಷಣವೂ ಉಕ್ರೇನ್‌ ಯುದ್ಧವನ್ನೇ ಕೇಂದ್ರೀಕರಿಸಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭದ್ರತಾ ಮಂಡಳಿ ಸಭೆಯಲ್ಲಿ ಭಾಗವಹಿಸಲಿಲ್ಲ.  

‘ಭಾರತ, ಉಕ್ರೇನ್‌ಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಏಕಿಲ್ಲ’
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಜಪಾನ್, ಬ್ರೆಜಿಲ್ ಮತ್ತು ಉಕ್ರೇನ್‌ ರಾಷ್ಟ್ರಗಳಿಗೆ ಕಾಯಂ ಸ್ಥಾನ ಏಕಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ವಿಡಿಯೊ ಮೂಲಕ ಉದ್ದೇಶಿ ಮಾಡಿರುವ ಭಾಷಣದಲ್ಲಿ ಝೆಲೆನ್‌ಸ್ಕಿ ಈ ಪ್ರಶ್ನೆ ಎತ್ತಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸುಧಾರಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಯಾವುದೇ ಪರಿಹಾರವಾಗಿಲ್ಲ. ಈ ಬಗ್ಗೆ ಉಕ್ರೇನ್ ಧ್ವನಿ ಎತ್ತುತ್ತದೆ. ರಷ್ಯಾ ಎಂದಾದರೂ ಇಂತಹ ಬೇಡಿಕೆ ಇಟ್ಟಿದೆಯಾ? ರಷ್ಯಾಕ್ಕೆ ಯಾವುದೋ ಕಾರಣದಿಂದಾಗಿ ಭದ್ರತಾ ಮಂಡಳಿಯ ಕಾಯಂ ಸ್ಥಾನ ಸಿಕ್ಕಿದೆ. ಆದರೆ ಯಾವ ಕಾರಣಕ್ಕಾಗಿ ಭಾರತ, ಜಪಾನ್, ಬ್ರೆಜಿಲ್, ಟರ್ಕಿ, ಜರ್ಮನಿ ಮತ್ತು ಉಕ್ರೇನ್‌ಗೆ ಕಾಯಂ ಸ್ಥಾನವಿಲ್ಲ. ಈ ಸಮಸ್ಯೆ ಬಗೆಹರಿಸುವ ದಿನ ಬರಲಿದೆ ಎಂದು ಝೆಲೆನ್‌ಸ್ಕಿ ಹೇಳಿದರು.

ಪುಟಿನ್‌ ಮಿತ್ರನಿಗಾಗಿ 200 ಉಕ್ರೇನ್‌ ಕೈದಿಗಳ ಬಿಡುಗಡೆ  
ರಷ್ಯಾದ ವಶದಲ್ಲಿದ್ದ ಮರಿಯುಪೊಲ್‌ ರಕ್ಷಕ ಯೋಧರನ್ನು ಬಂಧಮುಕ್ತಗೊಳಿಸಲು ಉಕ್ರೇನ್‌ ಗುರುವಾರ ಯುದ್ಧ ಕೈದಿಗಳ ವಿನಿಮಯ ಘೋಷಿಸಿತು. ಸೌದಿ ಅರೆಬಿಯಾ ಮತ್ತು ಟರ್ಕಿಯೆ ಮಧ್ಯಸ್ಥಿಕೆಯಲ್ಲಿ ಪುಟಿನ್‌ ಅವರ ಆಪ್ತಮಿತ್ರ, ರಷ್ಯಾ ಪರವಿರುವ ವಿರೋಧ ಪಕ್ಷದ ನಾಯಕ ವಿಕ್ಟರ್‌ ಮೆಡ್ವೆಡ್‌ಚುಕ್ ಮತ್ತು ಪ್ರಮುಖ 55 ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೆ ಪ್ರತಿಯಾಗಿ, ಮರಿಯುಪೊಲ್‌ನ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರದಲ್ಲಿ ಸೆರೆ ಹಿಡಿದಿದ್ದ 215 ಮಂದಿ ಉಕ್ರೇನ್‌ ಯೋಧರು ಮತ್ತು ಇತರ ವಿದೇಶಿ ಪ್ರಜೆಗಳನ್ನು ರಷ್ಯಾ ಪಡೆ ಹಸ್ತಾಂತರಿಸಿತು. ಯುದ್ಧ ಆರಂಭವಾದ ನಂತರ ವಿಕ್ಟರ್‌ ಮೆಡ್ವೆಡ್‌ಚುಕ್ ಉಕ್ರೇನ್‌ನಿಂದ ತೊರೆಯಲು ಯತ್ನಿಸಿದ್ದರು. ಅವರನ್ನು ವಶಕ್ಕೆ ಪಡೆದು ಉಕ್ರೇನ್‌ ಸರ್ಕಾರ ಗೃಹ ಬಂಧನದಲ್ಲಿರಿಸಿತ್ತು.

‘ನಾನು ಸಾಯಲು ಬಯಸೆನು’
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸೇವೆ ಸಲ್ಲಿಸುವುದನ್ನು ತಪ್ಪಿಸಿಕೊಳ್ಳಲು ರಷ್ಯಾದಿಂದ ಸಾವಿರಾರು ಜನರು ಪಲಾಯನ ಮಾಡುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳ ಜತೆಗೆ ಬಗಲಲ್ಲಿ ಒಂದು ಸಣ್ಣ ಚೀಲ ಹಿಡಿದುಕೊಂಡು ಅರ್ಮೇನಿಯಾಗೆ ಹಾರಿದ ಡಿಮಿಟ್ರಿ ಎಂಬಾತ. ‘ನಾನು ಯುದ್ಧಕ್ಕೆ ಹೋಗಲು ಸಿದ್ಧನಿಲ್ಲ. ಈ ಪ್ರಜ್ಞಾಶೂನ್ಯ ಯುದ್ಧದಲ್ಲಿ ನಾನು ಸಾಯಲು ಬಯಸುವುದಿಲ್ಲ. ಇದು ಭ್ರಾತೃ ಹತ್ಯೆಯ ಯುದ್ಧ’ ಎಂದು ಸುದ್ದಿಸಂಸ್ಥೆಯ ಪ್ರತಿನಿಧಿಗೆ ತಿಳಿಸಿದ್ದಾರೆ.

ಸೇನೆಯ ಭಾಗಶಃ ಸನ್ನದ್ಧತೆಗೆ ಪುಟಿನ್ ಅವರು ಆದೇಶಿಸಿದ ಕೆಲವೇ ಸಮಯದಲ್ಲಿ ರಷ್ಯಾದಿಂದ ಪಲಾಯನ ಮಾಡುತ್ತಿರುವವರಿಂದಾಗಿ ವಿದೇಶಗಳಿಗೆ ಹೊರಟ ವಿಮಾನಗಳು ಕ್ಷಿಪ್ರಗತಿಯಲ್ಲಿ ಭರ್ತಿಯಾಗುತ್ತಿವೆ. ದೇಶದ ಗಡಿಗಳಲ್ಲಿ ನಾಗರಿಕರ ನಿರ್ಗಮನವೂ ಗಣನೀಯ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಅಲ್ಲದೇ, ದೇಶದಾದ್ಯಂತ ಅಪರೂಪಕ್ಕೆ ನಡೆದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರನ್ನು ರಷ್ಯಾ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. 

*
ನಮ್ಮ ಇಡೀ ಪ್ರದೇಶದಲ್ಲಿ ರಾಷ್ಟ್ರ ಧ್ವಜವನ್ನು ಮತ್ತೆ ಹಾರಿಸಬಹುದು. ಇದನ್ನು ‌ನಮ್ಮ ಸೇನಾ ಶಕ್ತಿಯಿಂದ ಸಾಧಿಸಬಹುದು. ಆದರೆ, ಇದಕ್ಕೆ ನಮಗೆ ಸಮಯಬೇಕು
– ಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

 ಪ್ರಮುಖಾಂಶಗಳು

* ಉಕ್ರೇನ್‌ನಲ್ಲಿ ಯುದ್ಧ ತೀವ್ರಗೊಳಿಸಲು ಸೇನೆಯ ಭಾಗಶಃ ಸನ್ನದ್ಧತೆಗೆ ಪುಟಿನ್‌ ನೀಡಿದ ಆದೇಶ ಖಂಡಿಸಿರುವ ಜಿ7 ವಿದೇಶಾಂಗ ಸಚಿವರಿಂದ ರಷ್ಯಾ ವಿರುದ್ಧ ಮತ್ತಷ್ಟು ಹೊಸ ನಿರ್ಬಂಧಗಳನ್ನು ಮುಂದುವರಿಸುವ ಘೋಷಣೆ  

* ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತೀವ್ರ ಟೀಕಾ ಪ್ರಹಾರ ನಡೆಸಲು ಯೋಜಿಸಿವೆ. ರಷ್ಯಾ ಕ್ರಮವನ್ನು ಬಲವಾಗಿ ಖಂಡಿಸುವಂತೆ ಇತರ ರಾಷ್ಟ್ರಗಳಿಗೂ ಒತ್ತಾಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು