ಗುರುವಾರ , ಸೆಪ್ಟೆಂಬರ್ 24, 2020
27 °C
ಬಿಜೆಪಿ ಮುಖಂಡ ಈಶ್ವರಪ್ಪ ಬಳಿ ವಿಜಯಪುರ ಲೋಕಸಭಾ ಚುನಾವಣೆ ಮಾಡಲ್ಲ ಎಂದ ಬಸನಗೌಡ

ಜಿಗಜಿಣಗಿ ವಿರುದ್ಧ ಯತ್ನಾಳ ಅಸಮಾಧಾನ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

ಜಿಲ್ಲೆಯಲ್ಲಿನ ಬರ ಅಧ್ಯಯನಕ್ಕಾಗಿ ಬುಧವಾರ ರಾಜ್ಯ ಬಿಜೆಪಿಯಿಂದ ಭೇಟಿ ನೀಡಿದ್ದ, ಪಕ್ಷದ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್‌ ಅವರನ್ನು ಯತ್ನಾಳ ತಮ್ಮ ನಿವಾಸಕ್ಕೆ ಉಪಾಹಾರದ ಔತಣಕ್ಕೆ ಆಹ್ವಾನಿಸಿದ್ದರು.

ಇದೇ ಸಂದರ್ಭ ಪಕ್ಷದ ಕೆಲ ಪದಾಧಿಕಾರಿಗಳು, ತಮ್ಮ ಬೆಂಬಲಿಗರಿಗೂ ಆಹ್ವಾನ ನೀಡಿದ್ದರು. ಎಲ್ಲರ ಸಮ್ಮುಖವೇ ಈಶ್ವರಪ್ಪ, ರವಿಕುಮಾರ್‌ ತಮ್ಮ ಮನೆಗೆ ಬರುತ್ತಿದ್ದಂತೆ, ಬಸನಗೌಡ ಜಿಲ್ಲೆಯಲ್ಲಿನ ವಿದ್ಯಮಾನಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದರು. ಇದೇ ಸಂದರ್ಭ ಜಿಗಜಿಣಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಉಪಾಹಾರ ಸೇವನೆಗೂ ಮುನ್ನವೇ ಬಸನಗೌಡ ಜಿಲ್ಲೆಯಲ್ಲಿನ ಪಕ್ಷದೊಳಗಿನ ವಿದ್ಯಮಾನ ಪ್ರಸ್ತಾಪಿಸಿದರು. ಜಿಗಜಿಣಗಿ ಚುನಾವಣೆ ನಾನು ಮಾಡಲ್ಲ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಸಹವಾಸವೇ ನನಗೆ ಬೇಡ. ನನ್ನನ್ನು ಬೇರೆ ಕಡೆ ನಿಯೋಜಿಸಿ ಎಂದು ಈಶ್ವರಪ್ಪಗೆ ತಿಳಿಸಿದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಈಶ್ವರಪ್ಪ, ನಿಮ್ಮಿಬ್ಬರ ಜಗಳದಿಂದ ಜಿಲ್ಲೆಯಲ್ಲಿ ಬಿಜೆಪಿ ಬಡವಾಗುತ್ತಿದೆ. ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಇಬ್ಬರು ಒಂದೆಡೆ ಕುಳಿತು, ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಿ. ಕಾರ್ಯಕರ್ತರ ಆತ್ಮವಿಶ್ವಾಸ ಕದಲದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಸನಗೌಡ ಇದಕ್ಕೊಪ್ಪಲಿಲ್ಲ. ರಾಜ್ಯದಲ್ಲಿ ಬಿಜೆಪಿ ಎಂದರೇ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ಕೆ.ಎಸ್‌.ಈಶ್ವರಪ್ಪ. ಇದೀಗ ಅನಂತಕುಮಾರ್ ನಮ್ಮಿಂದ ದೂರವಾದರು. ಉಳಿದ ಹಿರಿಯರು ಎಂದರೇ ನೀವಿಬ್ಬರೇ. ನೀವೇ ಆದಷ್ಟು ಬೇಗ ಇಲ್ಲಿನ ಗೊಂದಲ ಪರಿಹರಿಸಲು ಯತ್ನಿಸಿ ಎಂದು ಈಶ್ವರಪ್ಪ ಅವರಿಗೆ ಯತ್ನಾಳ ಹೇಳಿದರು’ ಎಂದು ಚರ್ಚೆಯ ಸಂದರ್ಭ ಉಪಸ್ಥಿತರಿದ್ದ ಬಿಜೆಪಿ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೋಕಸಭಾ ಚುನಾವಣೆಯ ಚರ್ಚೆ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ, ಜಿಲ್ಲಾ ಪಂಚಾಯ್ತಿ ರಾಜಕಾರಣದ ಕುರಿತಂತೆಯೂ ಚರ್ಚೆ ನಡೆಯಿತು. ಈ ಸಂದರ್ಭ ಬಸನಗೌಡ ಮಹಾನಗರ ಪಾಲಿಕೆ ಚುನಾವಣೆಯಲ್ಲಾದ ಮುಖಭಂಗ ಪ್ರಸ್ತಾಪಿಸಿದರು. ಮತ ಹೊಂದಿದ್ದ ಜಿಗಜಿಣಗಿ, ಅರುಣ ಶಹಾಪುರ ಗೈರಾದ ಬಗ್ಗೆ ಗಮನ ಸೆಳೆದರು.

ಎಲ್ಲರೂ ಸೇರಿ ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಸುಲಭವಾಗಿ ಅಧಿಕಾರ ಪಡೆಯಬಹುದು. ಯಾರಾದರೂ ಒಬ್ಬರೂ ‘ಕೈ’ ಹಿಡಿದರೆ ಮತ್ತದೇ ಮುಖಭಂಗ ಅನುಭವಿಸಬೇಕಾಗುತ್ತದೆ. ಆದ್ದರಿಂದ ವರಿಷ್ಠರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಿಲ್ಲೆಯ ಮುಖಂಡರಲ್ಲಿ ಒಮ್ಮತ ಮೂಡಿಸಿ ಎಂಬ ಸಲಹೆ ಈ ಸಂದರ್ಭ ವ್ಯಕ್ತವಾಯಿತು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಮುಖಂಡರೊಬ್ಬರು ಸಭೆಯಲ್ಲಿನ ಚರ್ಚೆಯ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು