ಶನಿವಾರ, ಜನವರಿ 25, 2020
28 °C

ಕ್ಯೂಆರ್‌ ಕೋಡ್‌ಕಂಡಲ್ಲಿ ಸ್ಕ್ಯಾನ್ ಮಾಡದಿರಿ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಜನರನ್ನು ಮೋಸ ಮಾಡಲು ವಂಚಕರು ಸದಾ ಹೊಸ ದಾರಿ ಹುಡುಕುತ್ತಿರುತ್ತಾರೆ. ಸದ್ಯಕ್ಕೆ ಅವರು ಕಂಡುಕೊಂಡಿರುವ ಮಾರ್ಗವೇ ಕ್ಯೂಆರ್ ಕೋಡ್.

ಇದನ್ನೂ ಓದಿ: ಟೆಲಿಗ್ರಾಂ ಆ್ಯಪ್‌‌ ಬಗ್ಗೆ ಅರಿಯಿರಿ

ಪಾನಿಪುರಿ ಅಂಗಡಿಯಿಂದ ಹಿಡಿದು ಮಾಲ್‌ಗಳವರೆಗೆ ಎಲ್ಲೆಡೆಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವ ಸೌಲಭ್ಯ ಇದೆ. ಆನ್‌ಲೈನ್ ಪಾವತಿ, ಹಣ ವರ್ಗಾವಣೆಗೂ ಕ್ಯೂಆರ್ ಕೋಡ್ ಬಳಕೆಯಾಗುತ್ತಿದೆ. ಸ್ಮಾರ್ಟ್ ಫೋನ್ ಹೊಂದಿರುವವರಿಗೆ ಈ ಕೋಡ್ ಬಳಸುವ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಫೋನ್‌ನಲ್ಲಿಯೇ ಆ್ಯಪ್ ಸಹ ಇನ್‌ಬಿಲ್ಟ್ ಆಗಿರುತ್ತದೆ. ಇದಕ್ಕೂ ಮುನ್ನ ಕ್ಯೂಆರ್ ಕೋಡ್‌ ಎಂದರೇನು ಎಂದು ತಿಳಿಯೋಣ.

ಏನಿದು ಕ್ಯೂಆರ್‌ ಕೋಡ್‌?

ಕ್ವಿಕ್ ರೆಸ್ಪಾನ್ಸ್‌ (ಕ್ವಿಕ್ ರೀಡ್). ಅತ್ಯಂತ ಕಡಿಮೆ ಸಮಯದಲ್ಲಿ ಜಾಲತಾಣಕ್ಕೆ ಪ್ರವೇಶಿಸಲು ಇದು ಉಪಯುಕ್ತ. ಡಿಜಿಟಲ್ ರೂಪದಲ್ಲಿ ಹಣ ಪಾವತಿಸುವಾಗ ಬ್ಯಾಂಕ್ ಖಾತೆ ಸಂಖ್ಯೆ, ಇತ್ಯಾದಿ ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಕೋಡ್ ಸ್ಕ್ಯಾನ್ ಮಾಡಿ ಪಾವತಿಸಬೇಕಾಗಿರುವ ಮೊತ್ತ ಟೈಪ್ ಮಾಡಿ ಕಳುಹಿಸಬಹುದು.

ಮೋಸ ಹೋಗುವುದು ಹೇಗೆ?

ವಂಚಕರು ಕ್ಯೂಆರ್ ಕೋಡ್ ಕಳುಹಿಸುವ ಮೂಲಕ ಜನರ ಹಣ ದೋಚಲಾರಂಭಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡುತ್ತಿದ್ದಂತೆಯೇ ನಕಲಿ ಜಾಲತಾಣಕ್ಕೆ ಕರೆದೊಯ್ಯುತ್ತದೆ. ಅಲ್ಲಿ ವೈಯಕ್ತಿಕ ಮಾಹಿತಿಗಳು ಅಂದರೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ, ಸಿವಿವಿ (ಕಾರ್ಡ್‌ನ ಹಿಂಭಾಗದಲ್ಲಿ ಇರುವ ಸುರಕ್ಷಿತವಾದ ಮೂರು ಸಂಖ್ಯೆ) ಖಾತೆದಾರನ ಹೆಸರು, ಕಾರ್ಡ್ ಅವಧಿ ಮುಕ್ತಾಯವಾಗುವ ದಿನಾಂಕ ನೀಡುವಂತೆ ಕೇಳಲಾಗುತ್ತದೆ. ಅಷ್ಟನ್ನೂ ನೀಡಿದರೆ ಆ ಬಳಿಕ ಖಾತೆಯಿಂದ ಹಣ ಕದಿಯಲಾರಂಭಿಸುತ್ತಾರೆ.

ಕೆಲವು ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಮೊಬೈಲ್‌ಗೆ ಮಾಲ್‌ವೇರ್ ಡೌನ್‌ಲೋಡ್ ಆಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಹೀಗೆ ಮಾಡುವ ಮೂಲಕ ಫೋನ್‌ನಲ್ಲಿ ಇರುವ ಮಾಹಿತಿಗಳನ್ನು ಕದಿಯುವ ಮತ್ತು ವಂಚಕ ಜಾಹೀರಾತುಗಳನ್ನು ನೀಡುವ ಕೃತ್ಯ ಎಸಗಲಾಗುತ್ತದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಉಪಯುಕ್ತವಾಗುವಂತೆ ನೀಡಿರುವ ಕ್ಯೂಆರ್ ಕೋಡ್‌ಗಳನ್ನೇ ವಂಚನೆಗೆ ಬಳಸಲಾಗುತ್ತಿದೆ’ ಎಂದು ವರದಿಗಳು ಹೇಳಿವೆ. ವಂಚಕರು ತಮ್ಮ ಕೋಡ್ ಅನ್ನು ಅದರ ಮೇಲೆ ಅಂಟಿಸುತ್ತಿದ್ದಾರೆ. ಅದು ನಕಲಿ ಎಂದು ಅನ್ನಿಸುವುದೇ ಇಲ್ಲ. ಏಕೆಂದರೆ ಅದು ಒಂದು ರೀತಿಯ ಚಿತ್ರದಂತೆ ಮಾತ್ರ ಕಾಣಿಸುತ್ತದೆ. ಕ್ಯೂಆರ್ ಕೋಡ್ ಸೃಷ್ಟಿಸುವುದು ಬಹಳ ಸುಲಭ. ಈ ಕಾರಣಕ್ಕಾಗಿಯೇ ವಂಚನೆ ನಡೆಯುತ್ತಿದೆ.

ಪರಿಹಾರ ಮಾರ್ಗಗಳೇನು?

ಸುಮ್ಮನೆ ಕಂಡ, ಕಂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ. ಸ್ಕ್ಯಾನ್ ಮಾಡುವ ಮುನ್ನ ಅದು ಯಾವುದಕ್ಕೆ ಸಂಬಂಧಿಸಿದ್ದು ಎಂದು ನೋಡಿ. ಗೋಡೆ ಅಥವಾ ಎಲ್ಲಾದರೂ ಬರೀ ಕ್ಯೂಆರ್ ಕೋಡ್ ಅಂಟಿಸಿದ್ದರೆ ಅದನ್ನು ಕುತೂಹಲಕ್ಕೂ ಸ್ಕ್ಯಾನ್ ಮಾಡಬೇಡಿ. ಯಾವ ಉದ್ದೇಶಕ್ಕಾಗಿ ಅದನ್ನು ಅಂಟಿಸಲಾಗಿದೆ ಎನ್ನುವುದನ್ನು ಅಲ್ಲಿ ಉಲ್ಲೇಖಿಸಿದ್ದರೆ ಮಾತ್ರವೇ ಬಳಸಿ.

ಸಾರ್ವಜನಿಕ ಸ್ಥಳಗಳಲ್ಲಿ ಸ್ಕ್ಯಾನ್‌ ಮಾಡಲು ಇಟ್ಟಿರುವ ಕ್ಯೂಆರ್‌ ಕೋಡ್‌ ಮೇಲೆ ಅದೇ ರೀತಿ ಕಾಣುವ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ. ಹಾಗೆ ಮಾಡುವ ಮೂಲಕ ಬಳಕೆದಾರರ ಬ್ಯಾಂಕಿಂಗ್‌ ಮಾಹಿತಿಗಳನ್ನು ಪಡೆದು ಮೋಸ ಮಾಡಲಾಗುತ್ತಿದೆ. ಹೀಗಾಗಿ ಸ್ಕ್ಯಾನ್ ಮಾಡುವ ಮುಂಚೆ ಕೈಯಲ್ಲಿ ಮುಟ್ಟಿ ನೋಡಿದರೆ, ಸ್ಟಿಕ್ಕರ್ ಅಂಟಿಸಿರುವುದೇ ಅಥವಾ ನಿಜವಾಗಿರುವುದೇ ಎನ್ನುವುದು ಕಂಡುಕೊಳ್ಳಬಹುದು. ಸ್ಟಿಕ್ಕರ್ ಆಗಿದ್ದರೆ ಬಳಸಬೇಡಿ.

ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೊಬೈಲ್ ಕ್ಯಾಮೆರಾವನ್ನೇ ಕ್ಯೂಆರ್ ಕೋಡ್ ಸ್ಕ್ಯಾನರ್ ಆಗಿ ಬಳಸಬಹುದು. ಇದರಿಂದ ಬೇಗ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷಿತವಾದ ಆ್ಯಪ್‌ ಬಳಸಿ. ಉದಾಹರಣೆಗೆ: Snap, QR Pal ಬಳಸಬಹುದು. ಈ ರೀತಿಯ ಆ್ಯಪ್‌ಗಳನ್ನು ಬಳಸುವುದರಿಂದ ಅದು ಪಾವತಿ ಆಯ್ಕೆ ಇರುವ ಜಾಲತಾಣಕ್ಕೆ ಕರೆದೊಯ್ಯುತ್ತದೆ. ಆಗ ನೀವು ಸರಿಯಾದ ಜಾಲತಾಣದಲ್ಲಿದ್ದೀರಾ ಎಂದು ಪರಿಶೀಲಿಸಿಕೊಳ್ಳಬಹುದು.

ನೆನಪಿಡಿ: ಅಪರಿಚಿತರು ಕಳುಹಿಸುವ ಕ್ಯೂಆರ್‌ ಕೋಡ್‌ ತೆರೆಯಬೇಡಿ. 

ಪೇಟಿಎಂ ಕೆವೈಸಿ ಹೆಸರಲ್ಲಿ ವಂಚನೆ

ಕೆಲವು ದಿನಗಳಿಂದ ಪೇಟಿಎಂ ವಂಚನೆ ಹೆಚ್ಚಾಗಿದೆ. ಕೆವೈಸಿ ಅಪ್‌ಡೇಟ್‌ ಮಾಡದೇ ಇದ್ದರೆ ಪೇಟಿಎಂ ಖಾತೆ ಬ್ಲಾಕ್‌ ಮಾಡುವುದಾಗಿ ಎಸ್ಎಂಎಸ್ ಕಳುಹಿಸಲಾಗುತ್ತಿದೆ. ಕೆವೈಸಿ ಪುನರ್ ದೃಢೀಕರಣ ಮಾಡುವುದಾಗಿ ಹೇಳಿ ಕರೆ ಮಾಡಲಾಗುತ್ತಿದೆ. ಅದಕ್ಕಾಗಿ AnyDesk, TeamViewer, QuickSupport ಇತ್ಯಾದಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಲು ಸೂಚನೆ ನೀಡಲಾಗುತ್ತದೆ. ಆ ವೇಳೆ ಇನ್‌ಸ್ಟಾಲ್‌ ಮಾಡಲು ಕೇಳಲಾಗುವ ಪರ್ಮಿಷನ್‌ಗೆ ಒಪ್ಪಿಗೆ ಸೂಚಿಸುವಂತೆ ಕೇಳುತ್ತಾರೆ. ಇನ್‌ಸ್ಟಾಲ್‌ ಆದ ಬಳಿಕ 9 ಸಂಖ್ಯೆಯ ಅಡ್ರೆಸ್ ಕೋಡ್‌ ಜನರೇಟ್‌ ಆಗುತ್ತದೆ. ಅದನ್ನು ಪಡೆದು ನಿಮ್ಮ ಮೊಬೈಲ್‌ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಾಗುತ್ತದೆ. 

ನಿಮ್ಮ ಕೆವೈಸಿ ಅಪ್‌ಡೇಟ್‌ ಆಗಿದೆ ಎನ್ನುವ ಎಸ್‌ಎಂಎಸ್‌ ಕಳುಹಿಸಿ, ಕ್ಯಾಷ್‌ಬ್ಯಾಕ್‌ ಅಥವಾ ಕೊಡುಗೆಗಳನ್ನು ಪಡೆಯುತ್ತಿರಿ ಎನ್ನುವ ಸಂದೇಶದೊಂದಿಗೆ ಒಂದು ಲಿಂಕ್‌ ಬರುತ್ತದೆ. ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡುವುದರಿಂದ ಬಳಕೆದಾರನ ಬ್ಯಾಂಕ್‌ ಖಾತೆಯ ಮಾಹಿತಿ ಸೋರಿಕೆಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಮುನ್ನೆಚ್ಚರಿಕೆ ಇರಲಿ

ಪೇಟಿಎಂ ಕಳುಹಿಸುವ ಮೆಸೇಜ್‌ನಲ್ಲಿ ನೀಡುವ ಲಿಂಕ್‌ ಕೇವಲ ಕೆವೈಸಿ ಅಪ್‌ಡೇಟ್‌ ಮಾಡಲು ಒಂದು ಅವಧಿ ನಿಗದಿಪಡಿಸಲು ಆಗಿರುತ್ತದೆ. ಅಥವಾ ಸ್ಥಳೀಯವಾಗಿ ಇರುವ ಪೇಟಿಎಂನ ಕೆವೈಸಿ ಪಾಯಿಂಟ್‌ಗೆ ಭೇಟಿ ನೀಡಲಷ್ಟೆ.

ಬಳಕೆದಾರ ಇರುವ ಸ್ಥಳಕ್ಕೆ ಪ್ರತಿನಿಧಿಯನ್ನು ಕಳುಹಿಸಿ ಕೆವೈಸಿ ಅಪ್‌ಡೇಟ್‌ ಮಾಡುವ ಪ್ರಕ್ರಿಯೆಯನ್ನು ಪೇಟಿಎಂ ಕೈಗೊಳ್ಳುತ್ತಿದೆ. ಅಧಿಕೃತ ಕೆವೈಸಿ ಪಾಯಿಂಟ್‌ಗಳಿಗೆ ಭೇಟಿ ನೀಡಿಯೂ ಅಪ್‌ಡೇಟ್ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)