ಸೋಮವಾರ, ಜನವರಿ 20, 2020
25 °C

ಗಿನ್ನಿಸ್‌: ವಿಭಿನ್ನ ದಾಖಲೆಗಳ ನೋಟ

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಗಿನ್ನಿಸ್‌ ವಿಶ್ವದಾಖಲೆ ಪುಸ್ತಕಕ್ಕೆ ಪ್ರತಿವರ್ಷ ಹಲವು ದಾಖಲೆಗಳು ಸೇರ್ಪಡೆಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಅಚ್ಚರಿಪಡುವಂತೆ ಮಾಡಿವೆ. ಈವರೆಗೆ ಯಾರೂ ಮುರಿಯದ ದಾಖಲೆಗಳನ್ನು ಆಯ್ಕೆ ಮಾಡಿ ‘ಗಿನ್ನಿಸ್‌ ವರ್ಲ್ಡ್ ರೆಕಾರ್ಡ್‌ 2020’ ಹೆಸರಿನ ಪುಸ್ತಕ ಪ್ರಕಟಿಸಲಾಗಿದೆ. ಭಾರತೀಯರು ನಿರ್ಮಿಸಿದ ಕೆಲವು ದಾಖಲೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಪೃಥ್ವಿರಾಜ್.

ಕೇಶ ರಾಶಿ

ಗುಜರಾತಿನ 17 ವರ್ಷದ ನಿಲಾನ್ಷಿ ಪಟೇಲ್ ಅವರ ಕೂದಲನ್ನು ನೋಡುವುದಕ್ಕೆ ನಿತ್ಯ ಯಾರಾದರೂ ಒಬ್ಬರು ಅವರ ಮನೆ ಮುಂದೆ ನಿಲ್ಲುತ್ತಾರೆ. ಕಾರಣ ಇವರು ತಮ್ಮ ತಲೆಗೂದಲನ್ನು
5 ಅಡಿ 7 ಇಂಚುಗಳಷ್ಟು ಉದ್ದ ಬೆಳೆಸಿದ್ದಾರೆ. ಕೂದಲನ್ನು ಬಾಚಿಕೊಳ್ಳುವುದಕ್ಕೆ ನಿತ್ಯ ಒಂದು ಗಂಟೆ, ಒಣಗಿಸಿಕೊಳ್ಳುವುದಕ್ಕೆ ನಿತ್ಯ ಅರ್ಧಗಂಟೆ ಮೀಸಲಿಡುತ್ತಾ ತಮ್ಮ ಕೇಶರಾಶಿಯನ್ನು ಜತನದಿಂದ ಕಾಪಾಡುತ್ತಿದ್ದಾರೆ. ಅತಿ ಉದ್ದ ತಲೆಗೂದಲು ಬೆಳೆಸಿರುವ ಟಿನೇಜರ್ ಆಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸುಮಾರು 11 ವರ್ಷಗಳ ಕಾಲ ಶ್ರಮಪಟ್ಟು ಒಮ್ಮೆಯೂ ಕತ್ತರಿಸದೇ ಕೂದಲನ್ನು ಬೆಳೆಸಿದ್ದಾರೆ.

‘ಚಿಕ್ಕವಳಾಗಿದ್ದಾಗ ಒಮ್ಮೆ ಕೂದಲು ಕತ್ತರಿಸಿದ್ದರು, ನನಗೆ ಅದು ಚೆನ್ನಾಗಿ ಕಾಣಲಿಲ್ಲ. ಅಂದಿನಿಂದ ಕೂದಲು ಕತ್ತರಿಸ ಬಾರದು ಎಂದು ನಿರ್ಧರಿಸಿದೆ. ಆಗಿನಿಂದ ನನ್ನ ಕೂದಲ ಆರೈಕೆಯಲ್ಲಿ ತಾಯಿ ಕೂಡ ನೆರವಾಗುತ್ತಿದ್ದಾರೆ. ಹೀಗಾಗಿಯೇ ಇಷ್ಟು ಉದ್ದದ ಕೂದಲು ಬೆಳೆಸಲು ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ.

‘ನೀಳ ಕೂದಲು ಇದ್ದರೆ, ಹಲವು ಸಮಸ್ಯೆಗಳು, ಆರೈಕೆ ಮಾಡುವುದು ಕಷ್ಟ ಎಂದು ನನ್ನ ಸ್ನೇಹಿತರು ಹೇಳುತ್ತಾರೆ. ಆದರೆ ನನಗೆ ಎಂದಿಗೂ ಕಷ್ಟ ಎನಿಸಿಲ್ಲ. ಇಷ್ಟಪಟ್ಟು ಕೂದಲು ಬೆಳೆಸುತ್ತಿದ್ದಾನೆ’ ಎಂದು ಸಂತೋಷದಿಂದಲೇ ಹೇಳುತ್ತಾರೆ.

ಸ್ಟ್ರಾ ಮ್ಯಾನ್‌

ಐರನ್‌ ಮ್ಯಾನ್, ಸೂಪರ್ ಮ್ಯಾನ್‌, ಸ್ಪೈಡರ್‌ ಮ್ಯಾನ್‌ ಬಗ್ಗೆ ನಮಗೆ ಗೊತ್ತಿದೆ. ಅವರಂತೆಯೇ ಸ್ಟ್ರಾ ಮ್ಯಾನ್ ಎಂದು ಖ್ಯಾತಿ ಗಳಿಸಿದ್ದಾರೆ ಕರಾಟೆ ನಟರಾಜ್. ಸದಾ ಸ್ಟ್ರಾಗಳೊಂದಿಗೆ ಒಂದಿಲ್ಲೊಂದು ಕಸರತ್ತು ಮಾಡುವ ಇವರು ತಮಿಳುನಾಡಿನ ಸೇಲಂನವರು. ಅತಿ ಹೆಚ್ಚು ಸ್ಟ್ರಾಗಳನ್ನು ಒಮ್ಮೆಗೆ ಬಾಯಲ್ಲಿ ತುರುಕಿಕೊಂಡು ಗಿನ್ನಿಸ್‌  ವಿಶ್ವದಾಖಲೆ ನಿರ್ಮಿಸಿದ್ದಾರೆ. 2018ರ ಆಗಸ್ಟ್ 25ರಂದು ಅರ್ಧ ಸೆಂಟಿಮೀಟರ್ ವ್ಯಾಸವಿರುವ ಸುಮಾರು 650 ಸ್ಟ್ರಾಗಳನ್ನು ಬಾಯಲ್ಲಿ ತುರುಕಿಕೊಂಡಿದ್ದರು.

ಬುಗುರಿಯ ವೇಗ

ದೆಹಲಿಯ ನೃತ್ಯ ಕಲಾವಿದ ವಿಕಾಸ್‌ ಕುಮಾರ್‌ ಅವರು ಬುಗುರಿ ತಿರುಗಿದಂತೆಯೇ ದೇಹವನ್ನು ತಿರುಗಿಸಬಲ್ಲರು. ಪಂಡಿತ್ ಬಿರ್ಜು ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಕಥಕ್‌ ನೃತ್ಯದಲ್ಲಿ ಪ್ರಾವಿಣ್ಯ ಗಳಿಸಿರುವ ಇವರು, 2017ರ ಡಿಸೆಂಬರ್‌ 16ರಂದು 60 ಸೆಕೆಂಡ್‌ಗಳಲ್ಲಿ 120 ಬಾರಿ ಗಿರಕಿ ಹೊಡೆದು ಗಿನ್ನಿಸ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಕಥಕ್‌ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

ಉಕ್ಕಿನಂತಹ ಉದರ

ಮುಂಬೈ ವಾಸಿ ಪಂಡಿತ್ ದಯಾಗುಡೆ ಅವರಿಗೆ ಸಾಹಸಗಳನ್ನು ಮಾಡುವುದೆಂದರೆ ಇಷ್ಟ. ಭಾರಿ ತೂಕದ 121 ಬೈಕ್‌ಗಳನ್ನು ಒಂದರ ಹಿಂದೆ ಒಂದರಂತೆ ತಮ್ಮ ಹೊಟ್ಟೆ ಮೇಲೆ ಹತ್ತಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.  2016ರ ಆಗಸ್ಟ್‌ 28ರಂದು ನಿರ್ಮಿಸಿದ ಈ ದಾಖಲೆ ಇಂದಿಗೂ ಅವರ ಹೆಸರಲ್ಲೇ ಇದೆ. ಇವರ ಉದರದ ಮೇಲೆ ಹರಿದ ಬೈಕ್‌ಗಳ ಸರಾಸರಿ ತೂಕ 257 ಕೆ.ಜಿ.

ರೂಬಿಕ್ಸ್ ಮೂವ್ಸ್‌

ತಮಿಳುನಾಡಿನ ಚೆನ್ನೈ ನಗರದ ಆರ್ಮುಗಂ ಮತ್ತು ಮುಂಬೈನ ನಿಖಿಲ್‌ ಸೋರ್ಸ್‌ ಅವರಿಗೆ ರೂಬಿಕ್ಸ್ ಕ್ಯೂಬ್ಸ್ ಎಂದರೆ ಎಲ್ಲಿಲ್ಲದ ಮೋಜು. ಎಂತಹ ಕಷ್ಟದ ಕ್ಯೂಬ್ ಸಮಸ್ಯೆ ಆದರೂ ನಿಮಿಷಗಳಲ್ಲಿ ಪರಿಹರಿಸುತ್ತಾರೆ.

ಆರ್ಮುಗಂ ಸೈಕಲ್ ತುಳಿಯುತ್ತಲೇ 1,010 ಪಸಲ್‌ಗಳನ್ನು ಪರಿಹರಿಸಿದ್ದಾರೆ. ಕೇವಲ ಆರು ಗಂಟೆ ಏಳು ನಿಮಿಷಗಳ ಅವಧಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ದಾಖಲೆ ನಿರ್ಮಿಸುವಾಗ ಇವರು 12ನೇ ತರಗತಿಯಲ್ಲಿ ಓದುತ್ತಿದ್ದರು. ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿಕೊಳ್ಳದೇ, ಹವ್ಯಾಸವನ್ನೂ ಬಿಡದೇ, ಎರಡನ್ನೂ ಸರಿದೂಗಿಸಿಕೊಂಡು ಸಾಧನೆ ಮಾಡಿದ್ದಾರೆ. ಇಂತಹ ಮತ್ತಷ್ಟು ಸಾಧನೆಗಳನ್ನು ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂಬುದು ಅವರ ಅಭಿಲಾಷೆ.

ನಿಖಿಲ್ ಸಹ ಕ್ಯಾಸ್ಟರ್‌ ಬೋರ್ಡ್‌ ಮೇಲೆ ಚಲಿಸುತ್ತಾ 151 ಪಸಲ್‌ಗಳನ್ನು ಪರಿಹರಿಸಿದ್ದಾರೆ. ಇವರ ಈ ಸಾಧನೆ ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಎರಡು ದಾಖಲೆಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. 3X3 ಕ್ಯೂಬ್‌ಗಳನ್ನು ಕೇವಲ 10ರಿಂದ 12 ಸೆಕೆಂಡುಗಳಲ್ಲಿ ಪರಿಹರಿಸಬಲ್ಲರು.

ಸುತ್ತಿಗೆಯಂತಹ ಕೈ

ಕೇರಳದ ಕೊಟ್ಟಾಯಂನ ಅಭಿಷ್‌ ಅವರ ಸಾಹಸವನ್ನು ನೋಡಿದರೆ ಅವರ ಕೈ ಸುತ್ತಿಗೆಯೇನೊ ಎಂದು ಭಾಸವಾಗಬಹುದು. ಸಾಮಾನ್ಯರು ತೆಂಗಿನಕಾಯಿಗಳನ್ನು ಕಲ್ಲಿಗೆ ಒಡೆದು ಹೋಳು ಮಾಡುವುದಕ್ಕೆ ಎರಡು ಮೂರು ಬಾರಿ ಬಡಿಯುತ್ತಾರೆ, ಇವರು ತಮ್ಮ ಕೈಯಿಂದಲೇ ಕೇವಲ 60 ಸೆಕೆಂಡುಗಳಲ್ಲಿ 122 ತೆಂಗಿನಕಾಯಿಗಳನ್ನು ಒಡೆದು ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ. 2017ರಲ್ಲಿ ನಿರ್ಮಿಸಿದ ಈ ದಾಖಲೆಯನ್ನು ಈವರೆಗೆ ಯಾರೂ ಮುರಿದಿಲ್ಲ.

32 ವರ್ಷದ ಅಭಿಷ್‌ ಅವರಿಗೆ ಇನ್ನೂ ಇಂತಹ ಹಲವು ದಾಖಲೆಗಳನ್ನು ನಿರ್ಮಿಸಬೇಕೆಂಬ ಬಯಕೆ ಇದೆಯಂತೆ. ಒಂದು ನಿಮಿಷದಲ್ಲಿ 140 ತೆಂಗಿನಕಾಯಿಗಳನ್ನು ಒಡೆದು ದಾಖಲೆ ಮಾಡುವ ಯೋಚನೆಯಲ್ಲಿ ಅವರು ಇದ್ದಾರೆ. ಸದ್ಯ ಅವರು ಕೇರಳ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2015ರಲ್ಲಿ 60 ಸೆಕೆಂಡ್‌ಗಳಲ್ಲಿ 136 ತೆಂಗಿನಕಾಯಿಗಳನ್ನು ಒಡೆದು ಲಿಮ್ಕಾ ಬುಕ್‌ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲೂ ಸ್ಥಾನ ಪಡೆದಿದ್ದಾರೆ. 15 ವರ್ಷದವರಾಗಿದ್ದಾಗಲೇ ಇದಕ್ಕಾಗಿ ತರಬೇತಿ ಪಡೆಯುತ್ತಿರುವ ಅವರು ಕೈಗಳನ್ನು ದೃಢವಾಗಿಸಿಕೊಳ್ಳಲು ನಿತ್ಯ ಕಸರತ್ತು ಮಾಡುತ್ತಾರೆ.

2018ರ ಮಾರ್ಚ್‌ನಲ್ಲಿ ಒಂದು ಸೆಕೆಂಡ್‌ನಲ್ಲಿ 3 ತೆಂಗಿನಕಾಯಿಗಳನ್ನು ಒಡೆದು ದಾಖಲೆ ನಿರ್ಮಿಸಿದ್ದರು. ‘ಫಿಟ್‌ನೆಸ್‌ ಮತ್ತು ಮಾನಸಿಕ ಏಕಾಗ್ರತೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)