ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೊಂದು ವಿಜ್ಞಾನಿಯ ಚಿತ್ರ

Last Updated 15 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಚಿಕ್ಕಬಳ್ಳಾಪುರದ ನಾಗಾರ್ಜುನ ಪದವಿ ಕಾಲೇಜಿನ ಪ್ರಾಧ್ಯಾಪಕ ಅಜಿತ್ ಕೌಂಡಿನ್ಯ ರೇಖಾಚಿತ್ರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ಮೂಡಿಸುವಲ್ಲಿ ನಿಸ್ಸೀಮರು.

ಎಡಗೈಯಲ್ಲಿ ಮೊಬೈಲು ಹಿಡಿದು, ಅದರಲ್ಲಿ ಮೂಡಿರುವ ವಿಜ್ಞಾನಿಯೊಬ್ಬರ ಚಿತ್ರವನ್ನು ತದೇಕಚಿತ್ತದಿಂದ ನೋಡುತ್ತಾ, ಬಲಗೈಯಿಂದ ಕಂಪ್ಯೂಟರ್ ಪರದೆಯ ಮೇಲೆ ಅಜಿತ್ ಕೌಂಡಿನ್ಯ ರೇಖಾಚಿತ್ರಗಳನ್ನು ಮೂಡಿಸುತ್ತಿದ್ದರು. ಕಡಿಮೆ ಗೆರೆಗಳಲ್ಲಿಯೇ ವಿಜ್ಞಾನಿಯ ಚಿತ್ರ ಸುಂದರವಾಗಿ ಮೂಡುತ್ತಿತ್ತು.

ಅಜಿತ್ ಅವರನ್ನು ವಿಜ್ಞಾನಿಗಳ ಚಿತ್ರ ರಚನೆಯ ಕುರಿತು ಕೇಳಿದಾಗ, ‘ಹೊಸ ವರ್ಷ ಬರುತ್ತಿದ್ದಂತೆಯೇ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ನಾನು ಪ್ರತಿ ದಿನ ಒಬ್ಬೊಬ್ಬ ವಿಜ್ಞಾನಿಯ ಚಿತ್ರವನ್ನು ರಚಿಸಬೇಕೆಂದು ತೀರ್ಮಾನಿಸಿದ್ದೇನೆ. ಆ ದಿನ ಆ ವಿಜ್ಞಾನಿಯ ಹುಟ್ಟಿದ ದಿನವಾಗಿರಬೇಕು ಎಂಬ ನಿಬಂಧನೆಯಿಟ್ಟುಕೊಂಡಿದ್ದೇನೆ. 365 ದಿನಗಳು 365 ವಿಜ್ಞಾನಿಗಳ ಚಿತ್ರಗಳನ್ನು ರಚಿಸಿ “ವಿಜ್ಞಾನಿ ವರ್ಷ” ಆಚರಿಸಬೇಕೆಂದಿದ್ದೇನೆ’ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ ನಿವಾಸಿಯಾದ ಅಜಿತ್ ಕೌಂಡಿನ್ಯ ಅವರ ಮಾತುಗಳನ್ನು ಕೇಳಿದಾಗ ಅವರು ವೃತ್ತಿಪರ ಚಿತ್ರಗಾರರು ಎಂದೆನಿಸುವುದು ಸಹಜ. ಆದರೆ ಅವರು ನಾಗಾರ್ಜುನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಬೆಳಿಗ್ಗೆ ಕಾಲೇಜಿಗೆ ಹೊರಟರೆ ಮನೆಗೆ ಹಿಂದಿರುಗುವುದು ಕತ್ತಲಾದ ನಂತರವೇ. ಆದರೂ ಚಿತ್ರಕಲೆ, ಕಂಪ್ಯೂಟರ್ ಡಿಸೈನಿಂಗ್ ಅವರ ಆಸಕ್ತಿ. ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಪುಸ್ತಕಗಳ ಮುಖಪುಟ ವಿನ್ಯಾಸ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪುಸ್ತಕಗಳಿಗೆ ರೇಖಾಚಿತ್ರಗಳನ್ನು ರಚಿಸಿರುವ ಅಜಿತ್, ಕೆಲ ಮಾಸ ಪತ್ರಿಕೆಗಳಿಗೆ ಕಾನ್ಸೆಪ್ಟ್ ಆರ್ಟ್(ರೇಖಾ ಚಿತ್ರಗಳು) ರಚಿಸಿದ್ದಾರೆ. ಹಲವಾರು ಸಂಸ್ಥೆಗಳಿಗೆ ಲೋಗೋ ವಿನ್ಯಾಸ, ಟಿ-ಶರ್ಟ್ ವಿನ್ಯಾಸ ಕೂಡ ಮಾಡಿಕೊಟ್ಟಿದ್ದಾರೆ. 2015 ರಲ್ಲಿ ಭೂತಾನ್ ದೇಶದ ಎನ್.ಡಬ್ಲ್ಯು.ಸಿ.ಸಿ ಯಲ್ಲಿ ಇವರ ಡಿಜಿಟಲ್ ಚಿತ್ರಗಳ ಪ್ರದರ್ಶನ ನಡೆದಿತ್ತು. ಕೆಲವು ಶಾಲಾ ಕಾಲೇಜುಗಳಲ್ಲಿ ಪುಸ್ತಕ ಮುಖಪುಟ ವಿನ್ಯಾಸಗಳ ಪೋಸ್ಟರ್ ಪ್ರದರ್ಶನ ಹಾಗೂ ಉಪನ್ಯಾಸ ನೀಡುವ ಮೂಲಕ ಈ ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿದ್ದಾರೆ.

‘ಪುಸ್ತಕಗಳ ಮುಖಪುಟ ರೂಪಿಸುವಾಗ ಲೇಖಕರೊಬ್ಬರ ಚಿತ್ರವನ್ನು ಬರೆಯಬೇಕಾಯ್ತು. ಪ್ರಯತ್ನಪಟ್ಟೆ, ಚೆನ್ನಾಗಿ ಮೂಡಿಬಂತು. ಅದೇ ಗುಂಗಿನಲ್ಲಿದ್ದಾಗ ನಮ್ಮ ದೇಶದ ಹಲವು ಸಾಧಕರ ಚಿತ್ರ ರಚಿಸುವ ಮನಸ್ಸಾಯಿತು. ಹಾಗೆ ಬರೆದ ಮೊದಲ ಚಿತ್ರ ವಿಕ್ರಮ್ ಸಾರಾಬಾಯ್ ಅವರದ್ದು. ಕಮಲಾ ಸಹೋನಿ, ಶಕುಂತಲಾ ದೇವಿ, ಹಿಮಾದಾಸ್ ಮುಂತಾದವರ ಚಿತ್ರಗಳನ್ನು ರಚಿಸಿ ಅವರ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ. ಉತ್ತಮ ಪ್ರತಿಕ್ತಿಯೆ ವ್ಯಕ್ತವಾಯಿತು.

“ಅಭಯ ಮಹಿಳಾ ವೇದಿಕೆ”ಯವರು ಈ ಬಾರಿ ಒಂದು ಕ್ಯಾಲೆಂಡರ್ ಹೊರತಂದಿದ್ದಾರೆ. ಅದರಲ್ಲಿ ಪ್ರತಿಯೊಂದು ದಿನವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಜನ್ಮದಿನವಾಗಿದ್ದು, ಅವರ ಚಿತ್ರ ಮತ್ತು ಒಂದು ಸಾಲಿನ ಪರಿಚಯವಿದೆ. ಅದನ್ನು ನೋಡಿದ ಕ್ಷಣವೇ ನನ್ನಲ್ಲಿ “ವಿಜ್ಞಾನಿ ವರ್ಷ”ದ ಆಲೋಚನೆ ಸ್ಪಷ್ಟವಾಯಿತು. ಪ್ರತಿ ದಿನ ಒಬ್ಬೊಬ್ಬ ವಿಜ್ಞಾನಿಯ ಚಿತ್ರ ರಚಿಸಿ ಅವರ ಕುರಿತಾಗಿ ಸಂಕ್ಷಿಪ್ತ ಮಾಹಿತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪ್ರಕಟಿಸತೊಡಗಿದೆ. ಇದನ್ನು ಗಮನಿಸಿದ ಟೆಕ್ ಕನ್ನಡ ಎಂಬ ವಿಜ್ಞಾನಕ್ಕೆ ಮೀಸಲಾದ ಕನ್ನಡದ ವೆಬ್‌ಸೈಟ್‌ನವರು ನಾವು ಕೂಡ ಇದನ್ನು ಪ್ರಕಟಿಸಬಹುದಾ ಎಂದು ಕೇಳಿದರು. ಧಾರಾಳವಾಗಿ ಪ್ರಕಟಿಸಿ, ನನ್ನ ಉದ್ದೇಶ ವಿಜ್ಞಾನಿಗಳು ಮತ್ತು ಅವರ ಸಾಧನೆ ಹೆಚ್ಚು ಜನರನ್ನು ತಲುಪಬೇಕು ಎನ್ನುವುದಾಗಿದೆ ಎಂದು ಹೇಳಿದೆ’ ಎಂದು ಅಜಿತ್ ತಮ್ಮ “ವಿಜ್ಞಾನಿ ವರ್ಷ” ಪ್ರಾರಂಭವಾದ ಬಗೆಯನ್ನು ವಿವರಿಸಿದರು.

ಮುಂದೆ, ವರ್ಷ ಮುಗಿದ ಮೇಲೆ ಏನು ಮಾಡುವಿರಿ ಎಂದು ಪ್ರಶ್ನಿಸಿದಾಗ, ‘365 ವಿಜ್ಞಾನಿಗಳ ಚಿತ್ರಗಳನ್ನು ಮತ್ತು ಅವರ ಸಾಧನೆಯನ್ನು ಪುಸ್ತಕ ರೂಪದಲ್ಲಿ ತರಬೇಕೆಂಬ ಆಲೋಚನೆಯಿದೆ. ಅದನ್ನು ಪ್ರಿಂಟ್ ಮಾಡಿಸಿ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶವಿದೆ’ ಎಂದು ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT