ಮಂಗಳವಾರ, ಫೆಬ್ರವರಿ 25, 2020
19 °C

Valentine Day | ಹೃದಯದೊಡೆಯನೇ ಪತಿಯಾದಾಗ ಜೀವನ ಸ್ವರ್ಗ

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಅಂದು ಡಿ. 13 ನನ್ನ ಫೋನ್ ರಿಂಗಣಿಸಿತು. ಹೊಸ ನಂಬರ್ ನಿಂದ ಫೋನ್ ಬಂದಾಗ ಬಹಳ ಸಂತಸದಿಂದ ಫೋನ್ ರಿಸೀವ್ ಮಾಡಿದೆ. ಕಾರಣ ನಮ್ಮ ಗುಂಪಿನಲ್ಲಿದ್ದ ಯಾವುದೇ ಹುಡುಗಿಯರಿಗೆ ಫೋನ್ ಬಂದರೆ ಬೇರೆಯವರನ್ನು ಕಿಚಾಯಿಸಿ, ಮಜಾ ಮಾಡುತ್ತಿದ್ದೆವು. ಯಾವುದೋ ಬಕ್ರ ಇರಬೇಕು ಅಂತ ಫೋನ್ ರಿಸೀವ್ ಮಾಡಿದೆ. ಆ ಕಡೆಯಿಂದ 'ಹಲೋ ನಾನು ಸಂತೋಷಕುಮಾರ ಹೊಸಹಟ್ಟಿ' ಎಂದರು.

ಆ ಊರು ಪಕ್ಕದ ಊರಾಗಿದ್ದರಿಂದ ಸ್ವಲ್ಪ ಎಚ್ಚರಿಕೆಯಿಂದಲೇ ಮಾತನಾಡಿದೆ. ಫೋನ್ ಮಾಡಿದ ಅವರು ನನ್ನ ಬಗ್ಗೆ ಸಂಪೂರ್ಣ ವಿಚಾರಿಸಿದರು. ನಂತರ ಫೋನ್ ಕಟ್.

ಇಷ್ಟಕ್ಕೇ ಸುಮ್ಮನಾಗಲಿಲ್ಲ, ದಿನಕ್ಕೆ ಒಂದು ಬಾರಿ ಮಾತಾಡುತ್ತಿದ್ದೆವು. ಕ್ರಮೇಣ ನಾನು ಅವರೊಂದಿಗೆ ಹರಟೆ ಹೊಡೆಯುವುದು ಹೆಚ್ಚಾಯಿತು. ಏನಿಲ್ಲವೆಂದರೂ ದಿನಕ್ಕೆ 5-6 ಗಂಟೆ ಕರೆಗಾಗಿಯೇ ಸಮಯ ಮೀಸಲಿರುಸುತ್ತಿದೆ. ಹೀಗೆ ನಮ್ಮ ಹರಟೆ, ಇಷ್ಟ ಕಷ್ಟಗಳು ಮುಂದುವರೆಯುತ್ತಿದ್ದವು. ಸಮಯ ಕಳೆಯುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ.

ಫೆ. 5 ರಂದು ಮಾತು ಮುಂದುವರಿದು ಆತ ಇದ್ದಕ್ಕಿದಂತೆ 'ನೀನಂದ್ರೆ ನಂಗಿಷ್ಟ ನನ್ನ ಮದುವೆ ಆಗ್ತೀಯಾ' ಎಂದರು. ಒಳ್ಳೆಯ ಸ್ನೇಹಿತನಾಗಿದ್ದವ ಪತಿಯಾಗುವ ಇಚ್ಚೆ ವ್ಯಕ್ತಪಡಿಸಿದಾಗ ಮನಸ್ಸಲ್ಲಿ ಏನೋ ತಲ್ಲಣ. ಮನಸ್ಸಲ್ಲಿ ನೂರೆಂಟು ಯೋಚನೆಗಳು. ಪ್ರೀತಿ ಮಾಡುವುದು ತಪ್ಪು ಎಂಬ ಮನೋಭಾವ ಇತ್ತು. ಜೀವನದಲ್ಲಿ ಮೊದಲ ಬಾರಿಗೆ ಹೀಗಾಗಿದ್ದು, ಈ ವಿಷಯವನ್ನೆಲ್ಲಾ ಮನಸ್ಸು ಬಿಚ್ಚಿ ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದೆನಿಸುತ್ತಿತ್ತು.

ನಾಲ್ಕು ದಿನಗಳ ಬಳಿಕ ಕರೆ ಮಾಡಿ ನನ್ನ ಮನದಲ್ಲಿದ್ದ ಗೊಂದಲವನ್ನೆಲ್ಲ ಅವನ ಮುಂದಿಟ್ಟೆ. ನನಗೆ 3 ತಿಂಗಳ ಕಾಲಾವಕಾಶ ಬೇಕು ಎಂದೆ. ಆತ ನಿನ್ನಿಷ್ಟ, ಕೆಲಕಾಲ ನಿಧಾನವಾಗಿ ಯೋಚನೆ ಮಾಡಿ, ಒಳ್ಳೆಯ ನಿರ್ಧಾರ ತಗೋ. ಜೊತೆಗೆ ನಾನೊಬ್ಬ ಒಳ್ಳೆಯ ಹುಡುಗ ನಿನ್ನನ್ನು ಮಹಾರಾಣಿಯ ಹಾಗೆ ನೋಡಿಕೊಳ್ಳುವೆ.

ನನ್ನ ಪ್ರೀತಿಯಲ್ಲಿ ಯಾವುದೇ ಮೋಸವಿಲ್ಲ, ನನ್ನ ಪ್ರೀತಿ ಒಪ್ಪಿಗೆಯಾದರೇ ಫೋನ್ ಮಾಡು. ಅಲ್ಲಿವರೆಗೂ ಕಾಯುತ್ತಿರುವೆ, ನಿನ್ನ ಬಿಟ್ಟು ಬೇರೆ ಯಾವ ಕನ್ಯೆಯನ್ನು ಮದುವೆಯಾಗಲ್ಲ ಎಂದ. ಕೂಡಲೇ ಫೋನ್ ಸ್ವಿಚ್ ಆಫ್ ಆಯ್ತು.

ಆತನ ಮಾತು, ಗುಣ, ನಡವಳಿಕೆ ಸರಿ ಇರಬಹುದು ಎಂದೆನಿಸಿತು. ಆತನನ್ನು ನಾನು ಒಮ್ಮೆಯೂ ನೋಡಿರಲಿಲ್ಲ. ಒಂದು ಬಾರಿ ನೋಡಿ ಚೆನ್ನಾಗಿದ್ದರೇ ಒಪ್ಪಿದರಾಯಿತು ಎಂಬ ಇಂಗಿತ ಆತನ ಮುಂದೆ ವ್ಯಕ್ತಪಡಿಸಿದೆ. ಆತ ಎದುರು ಮಾತಾಡದೆ ಸಮ್ಮತಿಸಿದ. ಮನಸ್ಸಿಗೆ ನೆಮ್ಮದಿ ಸಿಕ್ಕಂತಾಯ್ತು. ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆಯಲು ಶುರುವಾಯಿತು. ಒಂದೆರಡು ದಿನ ಕಳೆದ ನಂತರ ನಾವಿಬ್ಬರೂ ನಮ್ಮೂರಿನ ರಸ್ತೆಯಲ್ಲಿ ಭೇಟಿಯಾದೆವು.

ನಾವು ಭೇಟಿಯಾದ ಸಂಗತಿ ತುಂಬಾ ಸ್ವಾರಸ್ಯಕರ. ಆತನಿಗೆ ನನ್ನ ತಾಯಿಯ ಪರಿಚಯವಿದೆ. ಆದರೆ, ಅವರೇ ನನ್ನ ತಾಯಿ ಎಂದು ಆತನಿಗೆ ಗೊತ್ತಿಲ್ಲ. ನಾನು ನನ್ನಮ್ಮ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಅವನೂ ಅದೇ ಮಾರ್ಗವಾಗಿ ನನ್ನನ್ನು ನೋಡಲು ನಮ್ಮನೆಗೆ ಬರುತ್ತಿದ್ದ. ನಮ್ಮನ್ನು ಆತನೇ ಬೈಕ್‌ನಲ್ಲಿ ಡ್ರಾಪ್ ಮಾಡಿ, ನಮ್ಮನೆ ಮುಂದೆ ಗಾಡಿ ನಿಲ್ಲಿಸಿ ನನಗೆ ಮೆಸೇಜ್ ಮಾಡಿದ. ಕೂಡಲೇ ನಾನು ಮನೆಯಲ್ಲಿರುವುದಾಗಿ ಆತನಿಗೆ ಪ್ರತಿಕ್ರಿಯಿಸಿದೆ. ಆಗ ಆತ ಮನೆಗೆ ಬಂದ. ನಾನು ಭಯದಿಂದ ನೋಡಿದೆ. ಅದು ಸಂಪೂರ್ಣವಾಗಿ ಅಲ್ಲ. ನಂತರ ನನ್ನ ಹೃದಯದಲ್ಲಿದ್ದ ಪ್ರೀತಿ ಹೆಮ್ಮರವಾಗಿ ಬೆಳೆಯಲು ಆರಂಭಿಸಿತು.

ಕೂಡಲೇ ಫೆ. 12 ರಂದು ಆತನಿಗೆ ಪತ್ನಿಯಾಗಲು ಸಮ್ಮತಿಸಿದೆ. ಅವನು ನನನ್ನು ಪುಟ್ಟ ಎನ್ನುವುದು ಮತ್ತು ನಾನು ಅವನನ್ನು ಸಂತು ಎಂದು ಕರೆಯುವುದು ರೂಢಿ. ನಮ್ಮ ಪ್ರೀತಿ ಯಾವುದೇ ಸ್ವಂತ ಕೆಲಸಗಳಿಗೆ ಅಡ್ಡಿಯಾಗಿಲ್ಲ ಎಂದು ಧೈರ್ಯವಾಗಿ ಹೇಳುತ್ತೇನೆ. ಅಂದಿನಿಂದ ಇಂದಿನವರೆಗೆ ಯಾವುದೇ ತಕರಾರು ಇಲ್ಲದೆ ನಮ್ಮ ಪ್ರೀತಿ ನಡೆಯುತ್ತಿದೆ. ಹೃದಯದೊಡೆಯ ಪತಿಯಾಗಿ ಒಂದು ವರ್ಷವಾಗಿದೆ. ಈಗಲೂ ನಮ್ಮ ಪ್ರೀತಿಯಲ್ಲಿ ಯಾವುದೇ ಲೋಪದೋಷಗಳಿಲ್ಲ. ಒಬ್ಬರಿಗಾಗಿ ಮತ್ತೊಬ್ಬರ ತ್ಯಾಗ, ಸಹನೆ, ಪ್ರೀತಿ ಕಾಳಜಿ ಹಾಗೆ ಇದೆ.

ನಮ್ಮ ಪ್ರೀತಿಯ ಪಯಣದಲ್ಲಿ ಮೊದಲ ಹುಟ್ಟುಹಬ್ಬ, ಸಾಂಪ್ರಾದಾಯಿಕ ಹಬ್ಬ, ನಮ್ಮ ಪ್ರೀತಿಯಾದ ದಿನ, ಮದುವೆ ವಾರ್ಷೀಕೋತ್ಸವ ಹೀಗೆ ಎಲ್ಲಾ ಶುಭ ಸಮಾರಂಭಗಳಲ್ಲಿ ಪ್ರಿಯಕರನದೇ ಮೊದಲ ಹಾರೈಕೆ.

ಪ್ರೀತಿಯ ಸಂತುಗೆ ಪ್ರೇಮಿಗಳ ದಿನದ ಶುಭಾಶಯಗಳು.

–ಶ್ವೇತಾ ಜಿ.

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು