ಬುಧವಾರ, ಮೇ 18, 2022
23 °C

Valentine Day: ನಂಬಿಕೆ ಇಮ್ಮಡಿಯಾದಂತೆಲ್ಲಾ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು

ಸಂಧ್ಯಾರಾಣಿ. ಎಚ್.ಎಂ. Updated:

ಅಕ್ಷರ ಗಾತ್ರ : | |

ಕೆಲ ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಾಗ ಮನಸ್ಸಿನಲ್ಲಿ ದುಗುಡವಿತ್ತು. ಸ್ನಾತಕೋತ್ತರ ಪದವಿ, ವೃತ್ತಿ ಜೀವನ, ವೈಯಕ್ತಿಕ ಬದುಕಿನ ಸ್ವತಂತ್ರ ನಂತರ ಮದುವೆ ಎಂಬ ಆಯ್ಕೆ ಇಟ್ಟುಕೊಂಡು ಬಂದಿದ್ದೆ. ಆಗಿನ್ನು ಪದವಿ ಮುಗಿಸಿದ ದಿನಗಳು. ಕಾದಂಬರಿ ಓದುವ ಹುಚ್ಚು ಎಷ್ಟಿತ್ತೆಂದರೆ ಬೆಳಗಿನ ಜಾವ ಮೂರು ಗಂಟೆ ಆದರೂ ಮುಗಿಸಿಯೇ ಮಲಗುತ್ತಿದ್ದದ್ದು. ಇಂತಹ ಸಾಹಿತ್ಯ ಓದುವ ಉತ್ಕಟ ಹಂಬಲದ ಜತೆಗೆ ನಾಟಕ ಮಾಡುವ, ನೋಡುವ ಒಳ್ಳೆಯ ಹವ್ಯಾಸ ನನ್ನೊಂದಿಗೆ ಸಾಗಿತ್ತು.

ಸ್ನೇಹಿತರ ಸಂಗಡದಲ್ಲೇ ಬೆಳೆದವಳಿಗೆ ವಿಶ್ವವಿದ್ಯಾಲಯದ ಬಸವನಾಳ ಗ್ರಂಥಾಲಯದಲ್ಲಿ ಪುಸ್ತಕಗಳ ರಾಶಿ ಕೈಬೀಸಿ ಕರೆದಿತ್ತು. ಬದುಕಿನ ಎಡ, ಬಲ ದಾರಿಗಳ ಮಧ್ಯೆ ದ್ವಂದ್ವವಾಗಿ ನಿಂತಾಗ ಸ್ನೇಹಪರ ಕಾಳಜಿಯ ಮನಸ್ಸು ನನ್ನ ಸಾಹಿತ್ಯದ ಒಲವನ್ನು ಗುರುತಿಸಿತ್ತು. ಅದೇ ಸಾಹಿತ್ಯದ ಪ್ರೀತಿ ಇಂದು ಬದುಕಿನ ಪ್ರೀತಿಯಾಗಿ ನಮ್ಮಿಬ್ಬರನ್ನು ಒಂದಾಗಿಸಿದೆ. ಅಂಧತೆಯಿಂದ ಅಭಿಮಾನ ಹುಟ್ಟಲಾರದು, ಹಾಗಿದ್ದರೂ ಅದು ಸುಳ್ಳು ಎಂಬುದನ್ನು ನಮ್ಮ ಪ್ರೀತಿ ನಿರೂಪಿಸಿದೆ. ‌ಜತೆಗೆ ಸಂಗಾತಿಯ ಆಯ್ಕೆಗೆ ಇರಬೇಕಾದ ಗಟ್ಟಿತನವನ್ನು ನನ್ನ ಪ್ರೀತಿ ನನಗೆ ನೀಡಿದೆ.

ಸ್ನಾತಕೋತ್ತರ ಪದವಿಯ ಅಂತಿಮ ದಿನಗಳಲ್ಲಿ ವೃತ್ತಿ ಬದುಕಿಗೆ ಬರುವ ಅವಕಾಶ ಸಿಕ್ಕಾಗ ಸಂತೋಷವಾದರೂ, ಸ್ನೇಹಪರ ಜೀವವೊಂದನ್ನು ಬಿಟ್ಟು ಬರಬೇಕಲ್ಲಾ ಎಂದು ದುಃಖಿಸಿದರೂ ನನಗೆ ಅಂದು ಅದು ಅನಿವಾರ್ಯವಾಗಿತ್ತು. ಅದೇ ಅನಿವಾರ್ಯತೆಯೇ ನನಗೆ ಸಂಗಾತಿಯನ್ನು ಕೊಡಿಸಿದ್ದು ಎಂದು ನೆನಪಾದಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಸಾಮಾಜಿಕ ಕಾದಂಬರಿಗಳ ಬಹುಪಾಲು ಆಯಮಗಳನ್ನು ಓದಿದ್ದ ನನಗೆ, ಸೈದ್ಧಾಂತಿಕ ನಿಲುವುಗಳ ಪರಿಚಯ ಮಾಡಿಸಿದ್ದು ನನ್ನಿನಿಯ. ವಿದ್ಯಾರ್ಥಿ ಜೀವನದ ದಿನಗಳಿಂದಲೂ ನಾವು ನಮ್ಮಿಬ್ಬರ ಸಾಮ್ಯತೆ ಮತ್ತು ಭಿನ್ನತೆಗಳನ್ನು ಚೆನ್ನಾಗಿಯೇ ಗುರುತಿಸಿಕೊಂಡಿದ್ದೆವು. ಕಾಲ ಕಳೆದಂತೆ ಭಿನ್ನತೆಗಳು ಕಡಿಮೆ ಆಗಿ, ಸಾಮ್ಯತೆಗಳು ಹೆಚ್ಚಾಗಲಾರಂಭಿಸಿದವು. ಈ ಸಾಮ್ಯತೆಗಳು ಪರಸ್ಪರ ಒಪ್ಪಿಗೆಗಾಗಿ ಆಗದೇ ಸ್ವ ಇಚ್ಛೆಯಿಂದಲೇ ಆಗುತ್ತಿದ್ದವು. ನಂಬಿಕೆ, ವಿಶ್ವಾಸ, ಅಭಿರುಚಿಯು ಇಮ್ಮಡಿಯಾದಂತೆಲ್ಲಾ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.

ನಮ್ಮ ಸ್ನೇಹಪರ ಒಡನಾಟವನ್ನು ಪ್ರೀತಿ ಎಂದು ಗುರುತಿಸಿಕೊಳ್ಳಲು ನಾವು ತೆಗೆದುಕೊಂಡ ಸಮಯದಲ್ಲೇ ನಮ್ಮಿಬ್ಬರ ಒಡನಾಡಿಗಳು ಗೊಣಗಾಡಿದ್ದರು. ಸ್ನೇಹಿತರೇ ಮೂದಲಿಸಿದ್ದರು. ಮನೆಯವರು ವಿರೋಧಿಸಿದ್ದರು, ಅಕ್ಕಪಕ್ಕದವರು ಕುಚೋದ್ಯದ ಮಾತುಗಳನ್ನಾಡಿದ್ದರು. ಆದರೂ ನಮ್ಮ ಪ್ರೀತಿ ಗಟ್ಟಿಯಾಗಿತ್ತು.

ನಮ್ಮ ಪ್ರೀತಿ ವಿಷಯ ಮನೆಯವರಿಗಿಂತ ಮೊದಲು ಗಾಳಿಸುದ್ದಿ ಹರಡುವವರಿಗೆ ಸೋರಿಕೆಯಾಗಿತ್ತು. ಬೆರೆಳೆಣಿಕೆಯಷ್ಟು ಜನರ ಬೆಂಬಲದ ಜತೆ ನಾವು ಮನೆಯವರನ್ನು ಒಪ್ಪಿಸಿ ಸಪ್ತಪದಿ ತುಳಿದು ಇಂದಿಗೆ ಬರೋಬ್ಬರಿ ತೊಂಬತ್ತು ದಿನಗಳಾಗಿವೆ. ಪ್ರೀತಿ ಗೆಲ್ಲುವುದರ ಜತೆಗೆ ಸಾಹಿತ್ಯದ ಸ್ನೇಹಿತರಿಬ್ಬರು ಸಂಗಾತಿಗಳಾಗಿದ್ದೇವೆ ಎಂಬುದೇ ಖುಷಿಯ ವಿಚಾರ.

ಮದುವೆ ಎಂದರೆ ಆಡಂಬರ ನನಗೊಲ್ಲೆ, ಬಂಗಾರ ಬೇಡ, ವರದಕ್ಷಿಣೆ ಎಂದರೆ ಮಾರು ದೂರ ಓಡಿವ ನನ್ನುಡುಗನನ್ನು ಮದುವೆಗೆ ಒಪ್ಪಿಸಲು ನನ್ನಮ್ಮ ಹರಸಾಹಸಪಟ್ಟರು. ಈಗ ಅತ್ತೆ, ಅಳಿಯ ಒಂದಾದರೆ ನಾನು ಅಮ್ಮನಿಂದ ದೂರು ಎಂದು ಕೊಂಚ ಅಸೂಯೆ ಬರುತ್ತದೆ. ಆದರೆ ನನಗಿಲ್ಲಿ ಅತ್ತೆ ಮನೆಯ ಭಾವವೇ ಇಲ್ಲದಂತೆ ನನ್ನ ಅತ್ತೆ, ಮಾವ ಮಗಳಂತೆ ನೋಡಿಕೊಂಡರೆ, ನನ್ನ ಭಾವನಂತೂ ನನಗೀಗ ಅಣ್ಣನೇ ಆಗಿದ್ದಾರೆ. ಇಂತಹ ಚಿಕ್ಕ ಚೊಕ್ಕ ಸಂಸಾರದ ಚಿಕ್ಕ ಸೊಸೆ ನಾನು.

ಪ್ರೀತಿ ಎಂದರೆ ಅದು ಖುಷಿಯಷ್ಟೇ ಆಗಬೇಕಾಗಿಲ್ಲ. ಅದು ಕಲಿಕೆಯ ಭಾಗ. ಜೀವನದಲ್ಲಿ ಮೊದಲ 25 ವರ್ಷ ಪ್ರೀತಿಯನ್ನು ಬೇರೆ ಬೇರೆ ರೂಪದಲ್ಲಿ ಪಡೆದ ನಮಗೆ, ಈಗ ಅವುಗಳನ್ನು ಅನುಭವಿಸುವ ಕಾಲ. ನನ್ನ ವೈಯಕ್ತಿಕ ಬದುಕನ್ನು ನನ್ನದೇ ಎಂದು ಹೇಳುವಂತಹ ಸ್ವತಂತ್ರ ಬದುಕು ನನ್ನ ಪ್ರೀತಿಯಿಂದ ಸಿಕ್ಕಿದೆ. ಇಲ್ಲಿ ಯಾರಿಗೋ ಹೆದರಿ ಬದುಕುವ ಕಥನದಿಂದ ಹೊರಗೆ ಇದ್ದೇನೆ. ಪ್ರಸ್ತುತ ಸಂಗಾತಿ ಕೆಲಸದ ನಿಮಿತ್ತ ದೂರ ಇದ್ದರೂ ನಿತ್ಯ ಹುಸಿಮುನಿಸು, ತುಸು ಪ್ರೀತಿ, ಕಣ್ಣಂಚಲ್ಲಿ ಸಣ್ಣ ಹನಿ, ಜೀವನೋತ್ಸಾಹ ತುಂಬುವ ಮಾತು, ನಿನ್ನ ಎಲ್ಲ ಸೋಲು, ಗೆಲುವುಗಳ ಹಿಂದೆ ನಾನಿದ್ದೇನೆ ಎಂಬ ಪಿಸುಧ್ವನಿಗೆ ಸಮಯ ಮೀಸಲಿಟ್ಟಿದ್ದೇವೆ.

ಶರತ್‌ ಚಂದ್ರ ಚಟರ್ಜಿ ಅವರ ಶೇಷಪ್ರಶ್ನೆ ಕಾದಂಬರಿಯನ್ನು ಇಬ್ಬರೂ ಕೂತು ಓದಬೇಕೆನ್ನುವ, ನಿತ್ಯ ಡೈರಿ ಬರೆದು ಓದಿಕೊಳ್ಳುವ, ಪಿ. ಸಾಯಿನಾಥ್ ಅವರ ಬರಹದ ಆಳಕ್ಕೆ ಇಳಿಯುವ, ಡಿ.ಉಮಾಪತಿ ಅವರ ವಿಮರ್ಶೆಗಳನ್ನು ಅಳವಡಿಸಿಕೊಳ್ಳುವ, ಡಾ.ರಾಜ್‌ಕುಮಾರ್‌ ಅವರ ಚಿತ್ರಗಳನ್ನು ಮಂತ್ರಮುಗ್ದರಾಗಿ ನೋಡಿವ, ಮಳೆಗಾಲದಲ್ಲಿ ಜೋಗಕ್ಕೆ ಹೋಗುವ, ನಮ್ಮದೇ ಕ್ಯಾಮೆರಾದಲ್ಲಿ ಜೆತೆಗೂಡಿ ಚಿತ್ರ ಸೆರೆಹಿಡಿಯುವ, ಮನೆಯಲ್ಲೊಂದು ಪುಟ್ಟ ಲೈಬ್ರರಿ ಮಾಡುವ, ನಾವಂದುಕೊಂಡಂತೆ ಸರಳವಾಗಿ ಬದುಕುವ ಎಲ್ಲಾ ನಿಲುವುಗಳನ್ನು ಇನ್ಮುಂದೆ ಕಾರ್ಯರೂಪಕ್ಕೆ ತರಬೇಕಾಗಿದೆ. ನಮ್ಮ ಪ್ರೀತಿ ಅಕ್ಷಯಪಾತ್ರೆಯಲ್ಲಿನ ಅನುರಾಗ ಹೆಚ್ಚಾಗುವುದನ್ನು ನಾನು ನನ್ನ ಜೀವನದ ಸಂಧ್ಯಾಕಾಲದವರೆಗೂ ನಿಂತು ನೋಡುತ್ತಿರುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು