ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಮ್ ಹಾಲೆಂಡ್ ' ಸ್ಪೈಡರ್ ಮ್ಯಾನ್ ' ಹೀರೋ ಆದ ರೋಚಕ ಕತೆ

Last Updated 11 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಅಪ್ಪ ಹಾಸ್ಯಗಾರ. ಅಮ್ಮ ಫೋಟೊಗ್ರಾಫರ್. ಲಂಡನ್‌ ತವರು. ಥೇಮ್ಸ್ ತಂಗಾಳಿ ತೇಲಿ ಬಂದಾಗ ಪುಳಕಗೊಂಡ ಟಾಮ್ ಹಾಲೆಂಡ್ ಏಳನೇ ವಯಸ್ಸಾಗುವ ಹೊತ್ತಿಗೆ ಡಿಸ್‌‌ಲೆಕ್ಸಿಯಾ ಸಮಸ್ಯೆ ಹಾದು ಬರಬೇಕಾಯಿತು. ಅಪ್ಪ-ಅಮ್ಮ ಇಬ್ಬರೂ ಮಗನ ಸಮಸ್ಯೆ ನೀಗಲು ಸಹಾಯ ಮಾಡಿದರು.

ವಿಂಬಲ್ಡನ್‌ನಲ್ಲಿನ ಕ್ಯಾಥೋಲಿಕ್ ಶಾಲೆಯಲ್ಲಿ ಕಲಿಯುವಾಗಲೇ ಇವನಿಗೆ ನೃತ್ಯದಲ್ಲಿ ಅಮಿತಾಸಕ್ತಿ. ನೃತ್ಯ ಪ್ರದರ್ಶನದ ಸಣ್ಣ ಅವಕಾಶ ಸಿಕ್ಕರೂ ಶಾಲೆಗೆ ಚಕ್ಕರ್ ಹೊಡೆಯಲೂ ಸಿದ್ಧನಾಗಿಬಿಡುತ್ತಿದ್ದ. ಕಾಲೇಜು ಮೆಟ್ಟಿಲು ಹತ್ತಿದ ಮೇಲಂತೂ ನೃತ್ಯ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಯಿತು. ಈ ಪ್ರತಿಭೆಯ ಕಾರಣಕ್ಕೇ ಮೇಷ್ಟ್ರು-ಮೇಡಂಗಳಿಂದ ಬೈಗುಳಗಳನ್ನೂ ಎದುರಿಸಬೇಕಾಯಿತು.

ಅಪ್ಪ-ಅಮ್ಮ ಕೂಡ ಮಗನ ಈ ಪ್ರತಿಭೆಯಿಂದಾಗಿಯೇ ಟೀಕೆ ಕೇಳಬೇಕಾಗಿ ಬಂದದ್ದು ವಿಚಿತ್ರವಾದರೂ ಸತ್ಯ. ಲಂಡನ್‌ನ ಬ್ರಿಟ್ ಸ್ಕೂಲ್ ಸೇರಿದ ಮೇಲೆ ಕಲೆಗೆ ನಿಜವಾದ ಸಾಣೆ ಸಿಕ್ಕಿತೆನ್ನಿ.

ವಿಂಬಲ್ಡನ್‌ನ ನಿಫ್ಟಿ ಫೀಟ್ ಡಾನ್ಸ್ ಸ್ಕೂಲ್‌ನಲ್ಲಿ ಟಾಮ್ ಹಾಲೆಂಡ್ ಹಿಪ್ ಹಾಪ್ ಡಾನ್ಸ್ ಕಲಿತದ್ದು. ಲಿನ್ ಪೇಜ್ ಎಂಬ ನೃತ್ಯ ಸಂಯೋಜಕ ಅಲ್ಲಿ ಬಾಲಕನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು. ಪೀಟರ್ ಡಾರ್ಲಿಂಗ್ ಆ ಹೊತ್ತಿಗೆ ರಂಗಭೂಮಿಯಲ್ಲಿ ನೃತ್ಯ ಸಂಯೋಜಕರಾಗಿ ಹೆಸರು ಮಾಡಿದ್ದರು. ಲಿನ್ ಅವರ ಸಹಾಯಕ. 2006ರಲ್ಲಿ ರಿಚ್‌ಮಂಡ್ ಡಾನ್ಸ್ ಫೆಸ್ಟಿವಲ್‌ನಲ್ಲಿ ಟಾಮ್ ಪ್ರದರ್ಶನ ನೋಡಿದ ಮೇಲೆ ಲಿನ್ ಫಿದಾ ಆದರು. ಪೀಟರ್‌ಗೂ ಈ ಪ್ರತಿಭಾವಂತನ ಪರಿಚಯ ಮಾಡಿಕೊಟ್ಟರು.

ಎಂಟು ಆಡಿಷನ್‌ಗಳು, ಎರಡು ವರ್ಷ ಸುದೀರ್ಘ ಅವಧಿಯ ತರಬೇತಿ ನಂತರ ‘ಬಿಲ್ಲಿ ಎಲಿಯಾಟ್ ದಿ ಮ್ಯೂಸಿಕಲ್‌’ನಲ್ಲಿ ಮೈಕಲ್ ಪಾತ್ರ ಟಾಮ್‌ಗೆ ಒಲಿದುಬಂತು. ಬಿಲ್ಲಿ ಆಪ್ತಸ್ನೇಹಿತನ ಪಾತ್ರವದು. ಅದರಲ್ಲಿನ ಪ್ರದರ್ಶನ ನೋಡಿ ರಿಚ್‌ಮಂಡ್ ಈ ಹುಡುಗನಿಗೆ ಮೂರೇ ತಿಂಗಳಲ್ಲಿ ಬಿಲ್ಲಿ ಪಾತ್ರವನ್ನೇ ನಿರ್ವಹಿಸುವ ಅವಕಾಶ ನೀಡಿದರು.

ನ್ಯೂಸ್ 5 ವಾಹಿನಿಗೆ ತನ್ನ ಬದುಕಿನ ಮೊದಲ ಸಂದರ್ಶನವನ್ನು ಬಿಲ್ಲಿ ನೀಡಿದಾಗ ಅವನಿಗೆ ಇನ್ನೂ ಹನ್ನೆರಡು ವರ್ಷ ವಯಸ್ಸು. ಐದು ವರ್ಷಗಳ ಹಿಂದೆ ಅದೇ ಹುಡುಗನೇ ಡಿಸ್‌ಲೆಕ್ಸಿಯಾ ಸಮಸ್ಯೆ ಎದುರಿಸಿದ್ದು ಎನ್ನುವುದನ್ನು ಕಂಡು ಅನೇಕರು ಬೆರಗುಗೊಂಡರು. ‘ಫೀಲ್ ಗುಡ್ ಫ್ಯಾಕ್ಟರ್’ ಎಂಬ ಟಿ.ವಿ ಷೋನಲ್ಲೂ ಟಾಮ್‌ಗೆ ಅವಕಾಶ ಹುಡುಕಿಕೊಂಡು ಬಂದಿತು.

2010ರಲ್ಲಿ ಆಗಿನ ಬ್ರಿಟಿಷ್ ಪ್ರಧಾನಿ ಗಾರ್ಡನ್ ಬ್ರೌನ್ ಅವರನ್ನು ಭೇಟಿ ಮಾಡಿದ ನಾಲ್ವರು ಪ್ರತಿಭಾವಂತ ಹುಡುಗರಲ್ಲಿ ಈತನೂ ಒಬ್ಬನಾಗಿದ್ದ. ‘ಫೀಲ್ ಗುಡ್ ಫ್ಯಾಕ್ಟರ್’ನ ವಿಶೇಷ ಪ್ರದರ್ಶನದಲ್ಲಿ ಮೈನವಿರೇಳಿಸುವ ನೃತ್ಯ ಪ್ರದರ್ಶಿಸಿದ್ದು ಆ ನಾಲ್ವರು ಬಾಲಕರೇ. 2015ರಲ್ಲಿ ಬಿಬಿಸಿಯ ‘ವೊಲ್ಫ್ ಹಾಲ್’ ಟಿ.ವಿ ಸರಣಿಯಲ್ಲಿ ಅಭಿನಯದ ಛಾಪು ಮೂಡಿಸಿದ. ಅದಕ್ಕೂ ಮೊದಲು ‘ದಿ ಇಂಪಾಸಿಬಲ್’ ಫೀಚರ್ ಫಿಲ್ಮ್‌ನಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು.

2016ರಲ್ಲಿ ‘ಸ್ಪೈಡರ್ ಮ್ಯಾನ್’ ಪಾತ್ರಕ್ಕೆ ಆಯ್ಕೆಯಾದಾಗ ವಯಸ್ಸಿನ್ನೂ ಇಪ್ಪತ್ತು. ಅದೇ ಸರಣಿಯ ನಾಲ್ಕು ಸಿನಿಮಾಗಳಲ್ಲಿ ‘ಸ್ಪೈಡರ್ ಮನ್’ ಪಾತ್ರದಲ್ಲಿ ಅವನು ನಟಿಸಿ ವಿಶ್ವದ ಜನಮನ ಗೆದ್ದಿದ್ದಾನೆ.‌ ಮಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ (ಎಂಸಿಯು) ಹಾಗೂ ಸೋನಿ ಸಂಸ್ಥೆ ನಡುವಿನ ಒಪ್ಪಂದ ಇತ್ತೀಚೆಗೆ ವಿವಾದದ ಕೇಂದ್ರಬಿಂದು ಆಗಿತ್ತು. ಅದರಂತೆ ಎಂಸಿಯು ನಿರ್ಮಾಣದಲ್ಲಿ ಇನ್ನು ಸ್ಪೈಡರ್‌ಮ್ಯಾನ್ ತೆರೆಮೇಲೆ ಕಾಣುವುದಿಲ್ಲ.

ಬೇರೆ ನಿರ್ಮಾಣ ಸಂಯೋಜನೆಯಲ್ಲಿ ಅದು ಸಾಧ್ಯವಾಗಬಹುದು. ‘ಸ್ಪೈಡರ್‌ಮ್ಯಾನ್ ಪಾತ್ರ ನನಗೆ ನಾಲ್ಕು ವರ್ಷಗಳಲ್ಲಿ ಏನೆಲ್ಲ ಕೊಟ್ಟಿದೆ. ಅದರ ಮಹತ್ವ ಏನೆಂದು ಚೆನ್ನಾಗಿ ಬಲ್ಲೆ. ಮುಂದೆಯೂ ಸ್ಪೈಡರ್‌ಮ್ಯಾನ್ ಇರುತ್ತಾನೆ. ಅದರ ಸ್ವರೂಪ ಏನು ಎಂದು ನಾನೂ ಕುತೂಹಲಿಯಾಗಿದ್ದೇನೆ’ ಎನ್ನುವುದು ಟಾಮ್ ಹಾಲೆಂಡ್ ಭರವಸೆಯ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT