ಬಂಜಾರರು ಸುಶಿಕ್ಷಿತರಾಗಲು ಕರೆ
ಗುಲ್ಬರ್ಗ: ಸ್ನೇಹ, ಸಜ್ಜನಿಕೆಯ ಸಂಸ್ಕೃತಿಯ ಬಂಜಾರ ಸಮಾಜದಲ್ಲಿ ರಾಠೋಡ್, ಚವ್ಹಾಣ, ಪವಾರ ಮುಂತಾದ ಒಳ ಪಂಗಡಗಳಿವೆ. ಬಂಜಾರ ಜನಾಂಗದಲ್ಲಿ ಈ ಗೋತ್ರಗಳ ಬಗ್ಗೆ ಈವರೆಗೂ ಸಂಘರ್ಷ ಮುಂದುವರಿದಿದೆ. ಒಳ ಸಂಘರ್ಷವನ್ನು ಮರೆತು ಎಲ್ಲರೂ ಒಂದಾಗುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವ ಅನಿವಾರ್ಯತೆಯನ್ನು ಬಂಜಾರ ಸಮುದಾಯದವರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ನ್ಯಾಶನಲ್ ಬಂಜಾರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಪಿ.ಕೆ.ಖಂಡೋಬಾ ಕರೆ ನೀಡಿದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘವು ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಂಜಾರ ಪ್ರಾಧ್ಯಾಪಕರ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಜಾರ ಲಿಪಿ ಹಾಗೂ ಭಾಷೆ, ಬದಲಾಗುತ್ತಿರುವ ಬಂಜಾರರ ಸಂಸ್ಕೃತಿ, ಜೀವನ ವಿಧಾನ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ, ಪ್ರಸಕ್ತ ಸಂದರ್ಭದಲ್ಲಿ ಬಂಜಾರರ ಸವಾಲು ಮತ್ತು ಸಮಸ್ಯೆಗಳ ಕುರಿತು ಸಮ್ಮೇಳನ ಬೆಳಕು ಚೆಲ್ಲುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಲಸಿಗರಾದ ಬಂಜಾರ ಸಮಾಜದ ಜನರು ಕ್ಷಾತ್ರತೇಜಸ್ಸು ಉಳ್ಳವರು. ಪ್ರಾಮಾಣಿಕತೆಗೆ ಹೆಸರಾದವರು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದಿಗೂ ಹಿಂದುಳಿಯುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ಶಂಕರ ನಾಯಕ ಸಮ್ಮೇಳನದಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಸುಮಾರು 200ಕ್ಕೂ ಹೆಚ್ಚು ಜನ ಬಂಜಾರ ಪ್ರಾಧ್ಯಾಪಕರು ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು.
ಪ್ರೊ. ರಮೇಶ ಚವ್ಹಾಣ, ಡಾ. ಡಿ.ಬಿ. ನಾಯಕ, ಡಾ. ಉಮೇಶ ಜಾದವ್, ದೇವಿದಾಸ ಚವ್ಹಾಣ, ರಮೇಶ ರಾಠೋಡ್, ಸುಶೀಲಾಬಾಯಿ, ಸೋನಾ ಪಿ. ನಾಯಕ್, ಪ್ರೇಮಚಂದ್ ಚವ್ಹಾಣ, ಗುರು ಚವ್ಹಾಣ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.