ಮಂಗಳವಾರ, ಏಪ್ರಿಲ್ 13, 2021
30 °C

ಸತ್ಯ ಶೋಧನೆಗೆ ಸಿಬಿಐ ತನಿಖೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈಶಾನ್ಯ ವಲಯ ಪೊಲೀಸ್ ಐಜಿಪಿ ವಜೀರ್ ಅಹ್ಮದ್, ವರಿಷ್ಠಾಧಿಕಾರಿ ಪ್ರವೀಣ ಮಧುಕರ ಪವಾರ ನೇತೃತ್ವದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಸಾವಿನ ಕುರಿತು ಹೇಳಿರುವುದೆಲ್ಲ ಕಟ್ಟುಕಥೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಮಾಜಪರ ಧ್ವನಿಯನ್ನು ಮಟ್ಟಹಾಕಿರುವ ದುಷ್ಟರನ್ನು ಬಯಲಿಗೆಳೆಯಲು ಸಿಬಿಐ ತನಿಖೆ ಅನಿವಾರ್ಯ.

 

ರಾಜ್ಯ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಗುಲ್ಬರ್ಗ ಪ್ರಜ್ಞಾವಂತ ನಾಗರಿಕರ ವೇದಿಕೆಯ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಹೈ.ಕ. ಜಿಲ್ಲೆಗಳ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮಂಗಳವಾರ ಇಲ್ಲಿ ಎಚ್ಚರಿಕೆ ನೀಡಿದರು.25ರ ಸಂಜೆ 6.45ಕ್ಕೆ ಲಿಂಗಣ್ಣ ಸತ್ಯಂಪೇಟೆ ಗುಲ್ಬರ್ಗ ಬಸ್‌ನಿಲ್ದಾಣ ತಲುಪಿದರು ಎಂದು ಮೊಬೈಲ್ ಸಿಗ್ನಲ್ ಆಧರಿಸಿ ಹೇಳಿರುವ ಪೊಲೀಸ್ ಅಧಿಕಾರಿಗಳು, ರಾತ್ರಿ 8.30ಕ್ಕೆ ದೇವಸ್ಥಾನದ ಎದುರು ನಿಶ್ಶಕ್ತರಾಗಿ ವಾಂತಿ-ಭೇದಿಯಿಂದ ಮಲಗಿದರು ಎಂದು ವಿವರಿಸಿದ್ದಾರೆ. ಇದನ್ನು ಯಾರೂ ಗಮನಿಸಲಿಲ್ಲ ಎಂದು ಬಾಲಿಶ ಹಾಗೂ ಜವಾಬ್ದಾರಿ ರಹಿತವಾಗಿ ಹೇಳಿಕೆ ನೀಡಿದ್ದಾರೆ. ಸದಾ ಜನನಿಬಿಡ ಪ್ರದೇಶ ಅದಾಗಿದ್ದು, ಶ್ರಾವಣ ಮಾಸದಲ್ಲಿ ತಡರಾತ್ರಿವರೆಗೂ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಲಿಂಗಣ್ಣನವರ ಪುತ್ರ ಇದೇ ಸಮಯದಲ್ಲಿ ದೇವಸ್ಥಾನ ಹಾಗೂ ಸುತ್ತಲೂ ಹುಡುಕಾಡಿದ್ದಾರೆ. ನಿಶ್ಯಕ್ತರಾಗಿ ಅಥವಾ ಅರೆಪ್ರಜ್ಞಾವಸ್ಥೆಯಲ್ಲಿದ್ದ ಲಿಂಗಣ್ಣ ಅವರ ಕಣ್ಣಿಗೆ ಕಾಣದಿರುವುದು ಚಿದಂಬರ ರಹಸ್ಯವಲ್ಲವೆ ಎಂದು ಸುದ್ದಿಗೋಷ್ಠಿ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.ಕಾರ್ಯಕ್ರಮ ಆಯೋಜಕರು ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಮೊಬೈಲ್‌ಗೆ ಕರೆ ಮಾಡಿದಾಗ ದೇವಸ್ಥಾನಕ್ಕೆ ತೀರಾ ಸಮೀಪದ ಗೋವಾ ಹೋಟೆಲ್ ಹತ್ತಿರವೆ ಇದ್ದು, ಬರುತ್ತಿರುವುದಾಗಿ ಲಿಂಗಣ್ಣನವರು ಖಚಿತ ಪಡಿಸಿದ್ದಾರೆ. ಅನಾರೋಗ್ಯಕ್ಕೀಡಾದ ವ್ಯಕ್ತಿ ಈ ಉತ್ತರ ಹೇಳಲು ಸಾಧ್ಯವಿತ್ತೆ? ಇದ್ದಕ್ಕಿದ್ದಂತೆ ದೇವಸ್ಥಾನದ ಎದುರು ಕುಸಿದು ಬಿದ್ದರು ಅಥವಾ ಆಟೋ ಚಾಲಕ ನೂಕಿ ಹೋದರು ಎಂದು ಕಥೆ ಹೇಳುವುದರಲ್ಲಿ ಸತ್ಯಾಂಶವಿದೀತೇ ಎಂದು ಪ್ರಶ್ನಿಸಿದರು.ಅಂಗಡಿಯವರು ದ್ವಾರಪಾಲಕನಿಗೆ ವಿಷಯ ತಿಳಿಸಿದಾಗ, ಆತ ಲಿಂಗಣ್ಣನವರನ್ನು ಚರಂಡಿಗೆ ಎತ್ತಿಹಾಕಿದ ಎನ್ನುವುದು ಕಟ್ಟಕಥೆ ಮಾತ್ರ. ಲಿಂಗಣ್ಣ ಆರೋಗ್ಯ ಸರಿ ಇರಲಿಲ್ಲ ಎಂದು ಕುಟುಂಬದ ಸದಸ್ಯರು ತನಿಖಾ ಹಂತದಲ್ಲಿ ಪೊಲೀಸರಿಗೆ ತಿಳಿಸಿದ್ದನ್ನು ಆಧರಿಸಿ, ಪೊಲೀಸ್ ಅಧಿಕಾರಿಗಳು ಕಥೆ ಕಟ್ಟಿದ್ದಾರೆ. ಈ ಧಾವಂತವನ್ನು ಗಮನಿಸಿದರೆ, ಖಂಡಿತವಾಗಿಯೂ ಪೊಲೀಸ್ ಅಧಿಕಾರಿಗಳೂ ಕಾಣದ ಕೈಗಳ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವುದು ಅನಿವಾರ್ಯ ಎಂದರು.ಮದ್ಯ ಸೇವಿಸಿದ್ದರು, ಹೃದಯಾಘಾತದಿಂದ ಮಲ ಮಾಡಿಕೊಂಡಿದ್ದರು ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಶವದ ಸುತ್ತ ಯಾವುದೇ ವಾಸನೆ ಅಥವಾ ನೊಣಗಳು ಮುಗಿಬಿದ್ದರಲಿಲ್ಲ. ಮದ್ಯದ ಅಮಲಿನಲ್ಲಿರುವ ವ್ಯಕ್ತಿಯನ್ನು ದೂರದಿಂದ ಅಥವಾ ವಾಸನೆಯಿಂದಲೆ ಗುರುತಿಸಬಹುದು. ಸಾವಿನ ಹಿಂದಿನ ಸೂಕ್ಷ್ಮವನ್ನು ಭೇದಿಸಲಾಗದೆ ಅಸಹಾಯಕರಾಗಿರುವ ಪೊಲೀಸ್ ಅಧಿಕಾರಿಗಳು, ಕಾವಲುಗಾರರನ್ನು ಬಂಧಿಸಿ ಪ್ರಕರಣ ಮುಚ್ಚಿಹಾಕುತ್ತಿದ್ದಾರೆ.ಶವ ಪತ್ತೆಯಾದಾಗ ಅಲ್ಲಿನ ಪ್ರತಿಯೊಂದು ವಸ್ತುವನ್ನು ಪೊಲೀಸರು ಸಾಕ್ಷ್ಯವಾಗಿ ಪರಿಗಣಿಸಲು ಕೈಗವುಸು ಹಾಕಿಕೊಂಡು ಮುಟ್ಟಬೇಕಾಗಿತ್ತು. ಮೊಬೈಲ್, ಬೂಟುಗಳು ಸೇರಿದಂತೆ ಇನ್ನಿತರೆ ಸರಕುಗಳನ್ನು ಬರಿಕೈಯಲ್ಲೆ ತೆಗೆದುಕೊಂಡು ಹೋಗುವುದನ್ನು ತಂದೆ ಮೃತರಾಗಿದ್ದ ದುಃಖವನ್ನು ನುಂಗಿಕೊಂಡು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇದೆಲ್ಲವನ್ನು ಅವಲೋಕಿಸಿದಾಗ ಸ್ಥಳೀಯ ಪೊಲೀಸರ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ ಎಂದು ಲಿಂಗಣ್ಣ ಸತ್ಯಂಪೇಟೆ ಅವರ ಹಿರಿಯ ಪುತ್ರ ಹಾಗೂ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ತಿಳಿಸಿದರು.ಎಸ್‌ಪಿ, ಐಜಿಪಿ ಬಗ್ಗೆ ತನಿಖೆಯಾಗಲಿ: ಪ್ರಕರಣದ ತನಿಖೆಗೆ ಒತ್ತಾಯಿಸಿ ಈ ಮೊದಲು ಮನವಿ ಸಲ್ಲಿಸುವಾಗ ಲಿಂಗಣ್ಣ ಸತ್ಯಂಪೇಟೆ ಅವರದ್ದು ಹತ್ಯೆಯಾಗಿದೆ ಎನ್ನುವುದು ಖಾತರಿ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು. ಇನ್ನೂ ಮರಣೋತ್ತರ ವರದಿ ಬರುವ ಮುಂಚೆಯೆ ಸುದ್ದಿಗೋಷ್ಠಿ ಮಾಡಿದ್ದಾರೆ. ರಾಜಕಾರಣ, ಧಾರ್ಮಿಕತೆಯ ಅಮಲು ಬಹಳ ಕೆಟ್ಟದ್ದಾಗಿದ್ದು, ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸಿದಂತಿದೆ.ಇದರಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಅಲ್ಲಗಳೆಯುವಂತಿಲ್ಲ. ಎಸ್‌ಪಿ ಹಾಗೂ ಐಜಿಪಿ ಬಗ್ಗೆಯೂ ತನಿಖೆಯಾಗಬೇಕು. ಲಿಂಗಣ್ಣ ಸತ್ಯಂಪೇಟೆ ಹತ್ಯೆ ಹಿಂದಿನ ಸಂಚು ಬಯಲುಗೊಳಿಸಲು ಸಿಬಿಐ ತನಿಖೆಯಾಗಲೇಬೇಕು. ಸರ್ಕಾರವನ್ನು ಎಚ್ಚರಿಸಲು ಎಂತಹ ಹೋರಾಟಕ್ಕೂ ನಾವು ಸಿದ್ಧ ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಸ್ಪಷ್ಟಪಡಿಸಿದರು.ಸುಲಫಲ ಮಠದ ಮಹಾಂತ ಶಿವಾಚಾರ್ಯ, ಡಾ. ಮೀನಾಕ್ಷಿ ಬಾಳಿ, ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಬಸವರಾಜ ರಾಚರೆಡ್ಡಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಹಿಪಾಲರಡ್ಡಿ ಮುನ್ನೂರ್, ಸಿದ್ಧರಾಮ ಹೊನಕಲ್, ರವೀಂದ್ರ ಶಾಬಾದಿ, ವಿಠ್ಠಲ ದೊಡ್ಡಮನಿ, ರಂಗಣ್ಣ ಪಾಟೀಲ ಅಳ್ಳುಂಡಿ ಮತ್ತಿತರರು ಮಾತನಾಡಿ, `ಲಿಂಗಣ್ಣ ಸತ್ಯಂಪೇಟೆ ಅವರ ಹತ್ಯೆ ಹಿಂದಿನ ದುಷ್ಟಶಕ್ತಿಯನ್ನು ಬಯಲಿಗೆ ತರಲು ಸಿಬಿಐ ತನಿಖೆಯಾಗಲೇಬೇಕು. ಈ ಸಲುವಾಗಿ ಹೈದರಾಬಾದ್ ಕರ್ನಾಟಕದುದ್ದಕ್ಕೂ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಸರ್ಕಾರ ಮೂರು ದಿನದಲ್ಲಿ ನಿರ್ಧಾರ ಪ್ರಕಟಿಸಬೇಕು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.