ಆಳಂದ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸ್ಥಗಿತ

7

ಆಳಂದ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸ್ಥಗಿತ

Published:
Updated:

ಆಳಂದ : ಸ್ಥಳೀಯ ತಾಲ್ಲೂಕು ಪಂಚಾಯಿತಿಯ 2ನೇ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಕಟಿತ ಮೀಸಲಾತಿಯಂತೆ ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆಗೆ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ ಘಟನೆ ಬುಧವಾರ ಜರುಗಿದೆ.ಸರ್ಕಾರದ ಪ್ರಕಟಿತ ಮೀಸಲಾತಿ ಪ್ರಕಾರ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿ-ಸಾಮಾನ್ಯ ಎಂಬ ಮೀಸಲಾತಿ, ಬುಧವಾರದ ಚುನಾವಣೆಯಲ್ಲಿ ಆಸಕ್ತಿ ಕೆರಳಿಸಿತ್ತು.ಬೆಳಿಗ್ಗೆಯೇ ಅನೇಕ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪ್ರಭಾವತಿ ಢಗೆ , ಸಿದ್ದಮ್ಮ ಎಸ್. ಪಾಟೀಲ್, ಬಿಜೆಪಿಯ ಮಂದಾಕಿನಿ ಪಾಟೀಲ್, ಕಾಂಗ್ರೆಸ್‌ನ ಕವಿತಾ ಪಾಟೀಲ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಲಕ್ಷ್ಮಣ ಬೀಳಗಿ, ಕಾಂಗ್ರೆಸ್‌ನ ಮಹೇಶ್ವರಿ ಜಿ.ಗರವಸೆ ನಾಮಪತ್ರ ಸಲ್ಲಿಸಿದ್ದರು.

ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲಿಗರ ಉತ್ಸಾಹ ಎದ್ದುಕಾಣುತ್ತಿತ್ತು. ನಿಗದಿಪಡಿಸಿದಂತೆ ಸಾಯಂಕಾಲ 4 ಗಂಟೆಗೆ ಸಹಾಯಕ ಆಯುಕ್ತ ಹರ್ಷಾಶೆಟ್ಟಿ ಆಗಮಿಸಿ `ಇಂದು ನಡೆಯಬೇಕಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಗೆ ಕೋರ್ಟ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು. ನಂತರ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದರು.ಆಗ ಜೆಡಿಎಸ್ ಸದಸ್ಯರು, ಅಧ್ಯಕ್ಷರ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಸರಿ. ಅವಧಿ ಪೂರ್ಣಗೊಂಡ ಉಪಾಧ್ಯಕ್ಷ ಸ್ಥಾನಕ್ಕಾದರೂ ಚುನಾವಣೆ ನಡೆಸಲು ಒತ್ತಾಯಿಸಿದರು.  ಎಸಿ ಹರ್ಷಾಶೆಟ್ಟಿ ಅವರು ಚುನಾವಣಾ ಪ್ರಕ್ರಿಯೆಗೆ ಕೋರ್ಟ ತಡೆ ನೀಡಿದೆ ಎಂದು ಸ್ಪಷ್ಟನೆ ನೀಡಿದರು.`ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಆಡಳಿತಾಧಿಕಾರಿ ನೇಮಕ ಮತ್ತು ನಂತರದ ಪ್ರಕ್ರಿಯೆ ಬಗ್ಗೆ ಕೋರ್ಟ ಆದೇಶದವರೆಗೂ ಕಾಯಲಾಗುವುದು~  ಎಂದರು. ಇಂದಿನ ಈ ಬೆಳವಣಿಗೆ ತಾಲ್ಲೂಕು ಪಂಚಾಯಿತಿಯಲ್ಲಿ ಬಹುಮತ ಹೊಂದಿದ್ದ ಜೆಡಿಎಸ್ ಪಾಳಯದಲ್ಲಿ ಭಾರಿ ನಿರಾಸೆ ಮೂಡಿಸಿತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬೆಂಬಲಿಗರ ಮುಖದಲ್ಲಿ ನಿರಾಸೆ ಎದ್ದುಕಾಣುತ್ತಿತ್ತು.

 

ತಡೆಯಾಜ್ಞೆಗೆ ಕಾರಣ: ಮೊದಲ ಅವಧಿಯ ಅಧ್ಯಕ್ಷೆ ಬಾಯಮ್ಮ ಪಾಟೀಲ್ ಅವರು ತಮಗೆ ತಡವಾಗಿ ಅಧಿಕಾರ ದೊರೆತ ಕಾರಣ ಇನ್ನು 10 ತಿಂಗಳ ಕಾಲಾವಕಾಶ ನೀಡಬೇಕೆಂದು ಸಂಚಾರಿ ಹೈಕೋರ್ಟ ಪೀಠಕ್ಕೆ ತಡೆಯಾಜ್ಞೆಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಮಾನ್ಯ ಮಾಡಿದ ಕೋರ್ಟು, ಬುಧವಾರದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್‌ನ ಬಾಯಮ್ಮ ಪಾಟೀಲ್ ತಮ್ಮ ಅಧ್ಯಕ್ಷ ಕುರ್ಚಿ ಉಳಿಸಿಕೊಳ್ಳಲು ಕಾನೂನು ಹೋರಾಟ ಆರಂಭಿಸಿದ್ದರೆ, 2ನೇ ಅವಧಿಗಾದರೂ ತಾಲ್ಲೂಕು ಪಂಚಾಯಿತಿ ಅಧಿಕಾರ ಹಿಡಿಯಲು ಜೆಡಿಎಸ್ ಪಕ್ಷವು ಪ್ರಯತ್ನಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry