ಗುರುವಾರ , ಮೇ 19, 2022
23 °C

ಉದ್ಯಾನ ರಸ್ತೆ ಸಮುದಾಯ ಭವನ ಜಾಗ ಸ್ವಾಹ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಈ ಹಿಂದೆ ಇಲ್ಲಿನ ಪುರಸಭೆ ವತಿಯಿಂದ ಪಟ್ಟಣದ ಜನರಿಗೆ ಅನುಕೂಲ ಆಗಲಿ ಎಂದು ಲೇಔಟ್ ರಚನೆ ಮಾಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಲೇಔಟ್ ನಕಾಶೆಯಲ್ಲಿ ತೋರಿಸಿರುವ ರಸ್ತೆ, ಉದ್ಯಾನವನ, ಸಮುದಾಯ ಭವನಕ್ಕೆ ಬಿಟ್ಟಿರುವ ಜಾಗ ಇಂದು ಮಂಗಮಾಯವಾಗಿದೆ. ಈ ಜಾಗದಲ್ಲಿ ಅತಿಕ್ರಮಣ ಹಾವಳಿಯಿಂದ ಅಕ್ರಮ ಕಟ್ಟಡಗಳು ತಲೆ ಎತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.40/60 ವಿಸ್ತೀರ್ಣದ 17 ನಿವೇಶನ, 30/40 ವಿಸ್ತೀರ್ಣದ 40 ನಿವೇಶನ, ಹೀಗೆ ಒಟ್ಟು 57 ನಿವೇಶನಗಳನ್ನು ರಚನೆ ಮಾಡಿ ಪುರಸಭೆಯು ಜನರಿಗೆ ರೂ,300 ಶುಲ್ಕ ಪಡೆದು ನಿವೇಶನ ಹಂಚಿಕೆ ಮಾಡಿದೆ. ಪುರಸಭೆ ಸಿದ್ದಪಡಿಸಿರುವ ಲೇಔಟ್ ನಕಾಶೆಯಲ್ಲಿ ಸಮುದಾಯ ಭವನ, ಉದ್ಯಾನವನ, ರಸ್ತೆ  ನಿರ್ಮಾಣಕ್ಕೆ ಅಪಾರ ಪ್ರಮಾಣದ ಖುಲ್ಲಾ ಜಾಗ ತೋರಿಸಲಾಗಿದೆ. ಆದರೆ, ಇಂದು ಆ ಎಲ್ಲಾ ಜಾಗ ಅತಿಕ್ರಮಣವಾಗಿದೆ. ಪುರಸಭೆ ಮಾತ್ರ ತೆಪ್ಪಗೆ ಕುಳಿತಿದೆ ಎಂದು ಜನರು ಬೇಸರ ವ್ಯಕ್ತ ಮಾಡುತ್ತಿದ್ದಾರೆ.ನಕಾಶೆಯಲ್ಲಿ ತೋರಿಸಿರುವ ಪ್ರಕಾರ ಪ್ರಸ್ತುತ ರಸ್ತೆಗಳಿಲ್ಲ. ರಸ್ತೆ ನಿರ್ಮಾಣ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಇದರ ಬಗ್ಗೆ ಯಾರೂ ಗಮನವೇ ನೀಡುತ್ತಿಲ್ಲ. ಸಾರ್ವಜನಿಕ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿರುವುದು ನೊಡಿದರೆ ಇದು ಪುರಸಭೆ ನಿರ್ಮಾಣ ಮಾಡಿರುವ ಲೇಔಟಾ? ಎಂದು ಹುಬ್ಬೇರಿಸುವಂತೆ ಆಗಿದೆ. ಆದರೆ ಪುರಸಭೆ ಆಡಳಿತ ಮಾತ್ರ ನೋಡಿಯೂ ನೋಡದಂತೆ ಜಾಣ ಕುರುಡು ನೀತಿಗೆ ಶರಣಾಗಿದೆ ಎಂದು ಜನರು ಆಕ್ರೋಶ ವ್ಯಕ್ತ ಮಾಡಿದ್ದಾರೆ.ಈ ಮೊದಲು ರಚನೆ ಮಾಡಿರುವ ಲೇಔಟ್ ನಕಾಶೆಯನ್ನು ಪುರಸಭೆ ಆಡಳಿತ ಮತ್ತೊಮ್ಮೆ ತಮಗೆ ಅನುಕೂಲಕ್ಕೆ ಬೇಕಾದಂತೆ ತಿದ್ದುಪಡಿ ಮಾಡಿ ಹೊಸ ನಕಾಶೆ ತಯ್ಯಾರಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿವೆ. ಸಂಬಂಧಿತ ಇಲಾಖೆಯ ಅಧಿಕಾರಿ ತನಿಖೆಯಿಂದ ಮಾತ್ರ ಸತ್ಯ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಹೊಸ ನಕಾಶೆ ರಚನೆ ಮಾಡುವ ಮುಂಚೆ ನಿವೇಶನ ಪಡೆದವರ ನಕಾಶೆಯಲ್ಲಿ ತೋರಿಸಿರುವ ರಸ್ತೆ, ಸಮುದಾಯ ಭವನ, ಉದ್ಯಾನವನ ಜಾಗ ಇಂದು ಅತಿಕ್ರಣವಾಗಿದೆ ಎಂದು ಹೇಳುವುದಕ್ಕೆ ಇಂದಿಗೂ ಪುರಾವೆಯಾಗಿದೆ ಎಂದು ಜನರು ಹೇಳಿದ್ದಾರೆ.ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.