ಭಾನುವಾರ, ಮೇ 9, 2021
19 °C
12 ಕಿ.ಮೀ. ದ್ವಿಪಥ ರಸ್ತೆ ನಿರ್ಮಾಣಕ್ಕೆ ರೂ 12 ಕೋಟಿ

ನಿರ್ಮಾಣ ಹಂತದಲ್ಲೆ ಬಿರುಕು ಬಿಟ್ಟ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಮಾಣ ಹಂತದಲ್ಲೆ ಬಿರುಕು ಬಿಟ್ಟ ರಸ್ತೆ

ಚಿತ್ತಾಪುರ: ಇಲ್ಲಿಂದ ಮಳಖೇಡದವರೆಗೆ ನಿರ್ಮಾಣ ಮಾಡುತ್ತಿರುವ ದ್ವಿಪಥ ಡಾಂಬರ್ ರಸ್ತೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಆದರೆ, ಈಗಾಗಲೇ ನಿರ್ಮಿಸಿದ ಡಾಂಬರ್ ರಸ್ತೆಯ ಎರಡು ಮೂರು ಕಡೆಗೆ ಬಿರುಕು ಬಿಟ್ಟು, ಗುಂಡಿಗಳಾಗಿ ರಸ್ತೆ ಹಾಳಾಗುತ್ತಿದೆ.ಕಳೆದ 2010ರ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಗುಲ್ಬರ್ಗದಲ್ಲಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಚಿತ್ತಾಪುರದಿಂದ ಮಳಖೇಡವರೆಗೆ 12 ಕಿ.ಮೀ ರಸ್ತೆಯನ್ನು ದ್ವಿಪಥ ರಸ್ತೆ ನಿರ್ಮಿಸಲು ಒಪ್ಪಿಗೆ ನೀಡಿ ರೂ,12 ಕೋಟಿ ಹಣ ಬಿಡುಗಡೆ ಮಾಡಿತ್ತು.2011ರ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ರಸ್ತೆ ನಿರ್ಮಾಣ ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದೆ. ಚಿತ್ತಾಪುರದ ನೀರು ಶುದ್ಧೀಕರಣ ಘಟಕದ ಹತ್ತಿರದಿಂದ ಮರಗೋಳ ದಂಡೋತಿ ಕೂಡು ರಸ್ತೆ ಮಾರ್ಗವಾಗಿ ಮಳಖೇಡದವರೆಗೆ ಡಾಂಬರ್ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವಾಗಲೇ ಮಾಡಿರುವ ರಸ್ತೆ ಯಲ್ಲಿ ಗುಂಡಿಗಳು ಕಾಣತೊಡಗಿವೆ.ನಿಧಾನವಾಗಿದ್ದ ಕಾಮಗಾರಿಗೆ ಈಗ ಏಕಾಏಕಿ ಚುರುಕು ನೀಡಿ ಬೇಗನೆ ಕಾಮಗಾರಿ ಮುಗಿಸಬೇಕೆಂದು ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿಸುತ್ತಿದ್ದಾರೆ. ಜೆಲ್ಲಿ ಕಲ್ಲು ಹಾಕಿದ ನಂತರ ನೀರು ಸಿಂಪಡಿಸಿ ಸರಿಯಾಗಿ ಘನಿಕರಿಸಿಲ್ಲ. ನಂತರ ಹಾಕಿದ ವೆಟ್‌ಮಿಕ್ಸ್‌ನ್ನು ವೈಬ್ರೇಟರ್ ರೂಲರ್‌ನಿಂದ ಸರಿಯಾಗಿ ಘನಿಕರಿಸದೆ ಬೇಕಾಬಿಟ್ಟಿಯಂತೆ ಮಾಡಲಾಗಿದೆ.  ತರಾತುರಿಯಲ್ಲಿ ಅದರ ಮೇಲೆ ಹಾಕಿದ್ದ  ಡಾಂಬರ್ ಕಿತ್ತು ಬರುತ್ತಿದೆ.ಕಾಮಗಾರಿಯ ಮೇಲುಸ್ತುವಾರಿ ನೋಡುತ್ತಿರುವ ತಾಲ್ಲೂಕು ಮತ್ತು ಜಿಲ್ಲಾ ಲೋಕೋಪಯೋಗಿ ಇಲಾಖೆ ಎಂಜಿನೀಯರ್ ಅದನ್ನು ನೋಡಿಯೂ ನೋಡದಂತೆ ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂಬುದು ಜನರ ಆರೋಪ.ಸೇಡಂ ಗುಲ್ಬರ್ಗ ಮುಖ್ಯ ನಿರ್ಮಾಣ ಮಾಡಿದಂತೆ ಈ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ನಡೆದಿಲ್ಲ. ಕೋಟಿಗಟ್ಟಲೆ ಹಣ ಸುರಿದು ಮಾಡಿರುವ ರಸ್ತೆ ಬೇಗನೆ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಲಾರಿ, ಕ್ರೂಸರ್, ಟಿಪ್ಪರ್, ಜೀಪ್ ವಾಹನ ಚಾಲಕರ ಆರೋಪ.ದುರಸ್ತಿ ಮಾಡಿಸುತ್ತೇವೆ: ರಸ್ತೆ ನಿರ್ಮಾಣ ಮಾಡುವ ಸಮಯದಲ್ಲಿ ರಸ್ತೆಗೆ ಹಾಕಿರುವ ವೆಟ್‌ಮಿಕ್ಸ್ ಮೇಲೆ ವಾಹನಗಳನ್ನು ಓಡಿಸಬಾರದು. ಆದರೆ, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಹಾಕಿರುವ ವೆಟ್‌ಮಿಕ್ಸ್ ಮೇಲೆ ವಾಹನಗಳು ಚಲಿಸಿವೆ. ಹೀಗಾಗಿ ಅಲ್ಲಲ್ಲಿ ಡಾಂಬರ್ ರಸ್ತೆ ಹದಗೆಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ.ಈಗ ನಿರ್ಮಿಸಿರುವ ಡಾಂಬರ್ ರಸ್ತೆಯ ಮೇಲೆ ಮತ್ತೊಂದು ಲೇಯರ್ ಡಾಂಬರ್ ಹಾಕುವ ಮುಂಚೆ ಹದಗೆಟ್ಟಿರುವ ಕಡೆಗೆ ರಸ್ತೆಯನ್ನು ಮತ್ತೊಮ್ಮೆ ನಿರ್ಮಿಸಿ ಅದರ ಮೇಲೆ ಡಾಂಬರ್ ಹಾಕಲಾಗುವುದು ಎಂದು ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಮಹ್ಮದ್ ಇಸ್ಮಾಯಿಲ್ ಪಟೇಲ್ ಗುರುವಾರ ಪ್ರಜಾವಾಣಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.