ಶುಕ್ರವಾರ, ಮೇ 14, 2021
21 °C

ಮರಳುಗಾರಿಕೆ: ಲೋಕಾಯುಕ್ತ ತನಿಖೆಗೆ ಕಾಂತಾ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾತ್ರವಿದ್ದು, ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, `ಮರಳು ನೀತಿ 2011 ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದ ಬಳಿಕ ಹಲವು ಕ್ರಮಗಳನ್ನು ಜಿಲ್ಲಾಡಳಿತ ಅನುಷ್ಠಾನಕ್ಕೆ ತಂದಿದೆ. ಕಂದಾಯ, ಲೋಕೋಪಯೋಗಿ, ಪೊಲೀಸ್ ಮತ್ತಿತರ ಇಲಾಖೆಗಳೂ ಜಿಲ್ಲಾ ಮರಳು ಸಮಿತಿಯಲ್ಲಿವೆ. ಈ ಸಮಿತಿ ಮರಳು ಗಣಿಗಾರಿಕೆ, ಸಾಗಾಟಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ ಈ ನಿರ್ದೇಶನದ ಅನ್ವಯ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ' ಎಂದು ಆರೋಪಿಸಿದರು.`ಹಲವು ಬಾರಿ ದೂರು ನೀಡಿದ ಬಳಿಕ ಈಚೆಗೆ ಜಿಲ್ಲಾಡಳಿತ ಕೆಲವೆಡೆ ಕಾರ್ಯಾಚರಣೆ ನಡೆಸಿತ್ತು. ಈ ಸಂಬಂಧ ಫರಹತಾಬಾದ್ ಪೊಲೀಸರು ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಹಿಟಾಚಿಯನ್ನು ಜಪ್ತಿ ಮಾಡಿದ್ದರು. ಆದರೆ ಈ ಹಿಟಾಚಿಯನ್ನು ಬಿಡಬೇಕು ಎಂದು ಗುಲ್ಬರ್ಗದ ಉಪವಿಭಾಗಾಧಿಕಾರಿ ಅವರು ಜಿಲ್ಲಾಧಿಕಾರಿ ನಿರ್ದೇಶನದ ಹಿನ್ನೆಲೆಯಲ್ಲಿ ಉಪತಹಸೀಲ್ದಾರ್ ಅವರಿಗೆ ಮೌಖಿಕ ಆದೇಶ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಠಾಣಾ ಸಬ್‌ಇನ್ಸ್‌ಪೆಕ್ಟರ್ ಅವರಿಗೆ ಉಪತಹಸೀಲ್ದಾರ್ ಪತ್ರ ಬರೆದಿದ್ದಾರೆ' ಎಂದ ಕಾಂತಾ, `ರಾಜಕಾರಣಿಗಳ ಒತ್ತಡದ ಮೇಲೆ ಈ ಅಧಿಕಾರಿಗಳು ಕಾರ್ಯ ನಿರ್ವಹಿಸಿರುವ ಸಂಶಯವಿದೆ. ಹೀಗಾಗಿ ಲೋಕಾಯುಕ್ತರೇ ಇದರ ಸಮಗ್ರ ತನಿಖೆ ನಡೆಸಬೇಕು.' ಎಂದರು.`ಆಡಳಿತವೇ ಭಾಗಿಯಾಗುವ ಹಲವು ಪ್ರಕರಗಣಗಳು ತಾಲ್ಲೂಕಿನಲ್ಲಿ ನಡೆಯುತ್ತಿವೆ. ಇಎಸ್‌ಐ ಆಸ್ಪತ್ರೆ ಮುಂಭಾಗ, ಫಿರೋಜಾಬಾದ್ ಮತ್ತಿತರೆಡೆ ಭಾರಿ ಮರಳು ದಾಸ್ತಾನಿದೆ. ದಿನನಿತ್ಯ ಮರಳು ಸಾಗಾಟ ಲಾರಿಗಳ ಓಡಾಟ ನಡೆಯುತ್ತಿದೆ' ಎಂದ ಅವರು, `ಸೇಡಂ ಹಿಂದಿನ ಉಪವಿಭಾಗಧಿಕಾರಿ ರವಿ ಹಾಗೂ ಪ್ರಸ್ತುತ ಉಪವಿಭಾಗಾಧಿಕರಿ ಜ್ಯೋತ್ಸ್ನಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.ಹಲವೆಡೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಮರಳು ಜಪ್ತಿ ಮಾಡುತ್ತಿದ್ದಾರೆ. ಈ ಕಾರ್ಯ ಗುಲ್ಬರ್ಗ ಉಪವಿಭಾಗಾಧಿಕಾರಿಗೆ ಏಕೆ ಸಾಧ್ಯವಾಗುತ್ತಿಲ್ಲ?' ಎಂದು ಪ್ರಶ್ನಿಸಿದರು. ಮಂಡಲ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಲತೀಫ್  ಜಾಗೀರ್‌ದಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.