ಬುಧವಾರ, ಜನವರಿ 22, 2020
17 °C

ಉದ್ಯಾನಗಳ ಅಧ್ವಾನ ತಡೆಗೆ ಪಾಲಿಕೆ ಸಿದ್ಧತೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರದ ವಿವಿಧ ಬಡಾವಣೆ ಗಳಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಮೀಸಲಿಟ್ಟ ಜಾಗದಲ್ಲಿ ನಡೆದಿರುವ ಅಧ್ವಾನಗಳಿಗೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.₨100 ಕೋಟಿ ಮುಖ್ಯಮಂತ್ರಿ ವಿಶೇಷ ಅನುದಾನದ ಮೂರನೇ ಪ್ಯಾಕೇಜ್‌ ಗುಲ್ಬರ್ಗಕ್ಕೆ ಮಂಜೂರಿಯಾಗಿದ್ದು, ಅದರಲ್ಲಿ ಉದ್ಯಾನಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಳಕೆ ಮಾಡಲು ಪಾಲಿಕೆಯು ಕ್ರಿಯಾಯೋಜನೆ ಮಾಡಿದೆ. 3ನೇ ಕ್ರಿಯಾಯೋಜನೆ ಜಾರಿಗೆ ಮೊದಲು ನಗರದಲ್ಲಿರುವ ಒಟ್ಟು ಉದ್ಯಾನ ಗಳನ್ನು ಗುರುತಿಸುವ ಕೆಲಸ ಅರಂಭಿಸಿದ್ದು, ಅರ್ಧದಷ್ಟು ಮುಗಿದಿದೆ.ಅತಿಕ್ರಮಣವಾಗಿರುವ ಉದ್ಯಾನಗಳ ಪಟ್ಟಿ ಯನ್ನು ಎರಡನೇ ಹಂತದಲ್ಲಿ ಸಿದ್ಧಪಡಿಸಲಿದೆ. ಅನಂತರ ಅತಿಕ್ರಮಣ ತೆರವು ಹಾಗೂ ಉದ್ಯಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗುತ್ತದೆ. 2010ರಲ್ಲೆ ಮಹಾನಗರ ಪಾಲಿಕೆಯು 194 ಉದ್ಯಾನಗಳನ್ನು ಗುರುತಿಸಿ, ‘ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಖಾಲಿ ಜಾಗ (ತಡೆ ಮತ್ತು ನಿಯಂತ್ರಣ) ಕಾಯ್ದೆ 1985’ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಅಧಿಕೃತ ಮುದ್ರೆ ಪಡೆದುಕೊಳ್ಳಲಾಗಿದೆ. 2009ರ ನಂತರ ಅಭಿವೃದ್ಧಿಯಾದ ಬಡಾವಣೆ ಯಲ್ಲಿರುವ ಹಾಗೂ ಈ ಹಿಂದೆ ಗುರುತಿಸದ 94 ಉದ್ಯಾನಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಿದೆ. ಸರ್ಕಾರದಿಂದ ಇವುಗಳಿಗೆ ಅಧಿಕೃತ ಮುದ್ರೆ ಪಡೆಯುವ ಕೆಲಸವನ್ನು ಈಗ ಆರಂಭಿಸಿದೆ.ಇಲ್ಲಿಯವರೆಗೂ ಲೆಕ್ಕಕ್ಕೆ ಸಿಕ್ಕಿರುವ ಒಟ್ಟು ಉದ್ಯಾನಗಳು 288 ಮಾತ್ರ. ಪಾಲಿಕೆ ಅಧಿಕಾರಿಗಳು ಹೇಳುವಂತೆ ಇನ್ನೂ ಗುರುತಿಸ ಬೇಕಿರುವ ಉದ್ಯಾನಗಳು ಪಾಲಿಕೆ ವ್ಯಾಪ್ತಿಯಲ್ಲಿ ಬಹಳಷ್ಟಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 400ಕ್ಕೂ ಹೆಚ್ಚು ಉದ್ಯಾನಗಳಿದ್ದು, ಅವುಗಳನ್ನು  ಮುಂದಿನ ದಿನಗಳಲ್ಲಿ ಗುರುತಿಸಿ ನೋಟಿಫಿ ಕೇಷನ್‌ ಮಾಡಲಿದೆ. ‘ಸುಪ್ರೀಂಕೋರ್ಟ್‌ ಆದೇಶ ಆಧಾರವಾಗಿಟ್ಟುಕೊಂಡು ಅತಿಕ್ರಮಣ ಗಳನ್ನು ಸಂಪೂರ್ಣ ತೆರವುಗೊಳಿಸುವ ಕಾರ್ಯ ಮಹಾನಗರ ಪಾಲಿಕೆ ಮಾಡಲಿದೆ.ಹೀಗಿದೆ ಉದ್ಯಾನಗಳ ಸ್ಥಿತಿ

ಉದ್ಯಾನವೆಂದರೆ ಪಾಲಿಕೆಯ ಕೇಂದ್ರ ಕಚೇರಿ ಬಳಿಯ ‘ಸಾರ್ವಜನಿಕ ಉದ್ಯಾನ’ ಹಾಗೂ ಶರಣಬಸವೇಶ್ವರ ಕೆರೆ ಉದ್ಯಾನಗಳು ಮಾತ್ರವಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಮುಳ್ಳಿನ ಗಿಡಗಳು ಬೆಳೆದಿವೆ.

ಮಹಾವೀರ ನಗರ, ಶಾಸ್ತ್ರೀ ನಗರ, ಪಿ ಆ್ಯಂಡ್‌ ಟಿ ಕಾಲೋನಿ ಸೇರಿ ನೂರಾರು ಕಡೆ ಉದ್ಯಾನ ಗಳಲ್ಲಿ ಮಕ್ಕಳಾಟಕ್ಕೆ ವಿವಿಧ ಸಲಕರಣೆಗಳನ್ನು ಅಳವಡಿಸಲಾಗಿದೆ. ಆದರೆ ಉದ್ಯಾನ ಅಭಿವೃದ್ಧಿಗೊ ಳಿಸದ ಕಾರಣ, ಸಲಕರಣೆಗಳೆಲ್ಲ ತುಕ್ಕು ಹಿಡಿದು ಹಾಳಾಗಿವೆ. ಕೆಲವು ಉದ್ಯಾನಗಳಲ್ಲಿ ರಾಜಾರೋಷವಾಗಿ ವಿವಿಧ ಸಂಘ–ಸಂಸ್ಥೆಗಳು ಕಚೇರಿ ಕಟ್ಟಡ ನಿರ್ಮಿಸಿಕೊಂಡಿವೆ. ಸಮುದಾಯ ಭವನಕ್ಕೆ ಮೀಸಲು ಜಾಗ ಎಂದು ಫಲಕ ಹಾಕಿರುವ ಉದ್ಯಾನಗಳಿವೆ. ಅನೇಕ ಕಡೆ ದೇವಸ್ಥಾನ, ಅತಿಕ್ರಮಣದ ಪಾಲಾಗಿದ್ದರೆ, ಖಾಸಗಿ ಬಡಾವಣೆಗಳಲ್ಲಿ ಉದ್ಯಾನದ ಜಾಗ ಹುಡುಕಾಡುವ ಸ್ಥಿತಿ ಇದೆ. ಉದ್ಯಾನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಕನಿಷ್ಠ ಆವರಣಗೋಡೆ ನಿರ್ಮಿಸುವ ಕೆಲಸವನ್ನು ಖಾಸಗಿ ಬಡಾವಣೆ ಮಾಲೀಕರು ಮಾಡಿಲ್ಲ. ಹೀಗಾಗಿ ಅವೆಲ್ಲವೂ ತ್ಯಾಜ್ಯ ಸಂಗ್ರಹ ಜಾಗಗಳಾಗಿವೆ.ನಮಗೆ ನಾಚಿಕೆ

ನಗರದ ಉದ್ಯಾನಗಳನ್ನು ನೋಡಿ ನಾವೇ ನಾಚಬೇಕು. ಪಾಲಿಕೆ ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ? ಸಾರ್ವಜನಿಕ ಉದ್ಯಾನವನ್ನು ಮೊದಲು ಸುಂದರವಾಗಿ ಅಭಿವೃದ್ಧಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಿ. ಅನುದಾನದ ಕೊರತೆಯಿಲ್ಲ; ಅಧಿಕಾರಿಗಳು ಅಭಿವೃದ್ಧಿಯತ್ತ ಗಮನ ಹರಿಸಬೇಕು.

– ಮಲ್ಲಿಕಾರ್ಜುನ ಖರ್ಗೆ, ರೈಲ್ವೆ ಸಚಿವ (ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾನುವಾರ ಈ ಬಗ್ಗೆ ಪ್ರಸ್ತಾಪವಾದಾಗ)ಶೇ 10ರಷ್ಟು ಅನುದಾನ

ನಗರದಲ್ಲಿರುವ ಎಲ್ಲ ಉದ್ಯಾನಗಳಲ್ಲಿ ಸಸಿಗಳನ್ನು ನೆಡುವಂತೆ ಅರಣ್ಯ ಇಲಾಖೆಗೆ ಈಗಾಗಲೇ ಪತ್ರ ಕಳುಹಿಸಿದ್ದೇವೆ. ಸಿಎಂ ಮೂರನೇ ಪ್ಯಾಕೇಜ್‌ನಲ್ಲಿ ಶೇ 10ರಷ್ಟು ಅನುದಾನವನ್ನು ಉದ್ಯಾನಗಳ ಅಭಿವೃದ್ಧಿಗೆ ಬಳಸಲಾಗುವುದು. ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಉದ್ಯಾನಗಳ ಅಭಿವೃದ್ಧಿ ರೂಪುರೇಷೆ ಸಿದ್ಧಪಡಿಸಲಾಗುವುದು. ಜಿಡಿಎ ತಡೆಗೋಡೆ ನಿರ್ಮಿಸಿದ 50 ಉದ್ಯಾನ ಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಈಗಾಗಲೇ ಕೈಗೊಳ್ಳಲಾಗಿದೆ.

– ಶ್ರೀಕಾಂತ ಕಟ್ಟಿಮನಿ,

ಪಾಲಿಕೆ ಆಯುಕ್ತ
ನೂರಾರು ಉದ್ಯಾನ

ಮಹಾನಗರದಲ್ಲಿ ಪಾಲಿಕೆ ಗುರುತಿಸಿದ 194 ಉದ್ಯಾನಗಳಲ್ಲಿ 11 ಬಡೇಪುರ ಪ್ರದೇಶದಲ್ಲಿ, ಕುಸನೂರಿನಲ್ಲಿ 3, ಕೋಟನೂರ (ಡಿ)ಯಲ್ಲಿ 13, ಬ್ರಹ್ಮಪುರ ಪ್ರದೇಶದ 26 ಉದ್ಯಾನಗಳು ಪ್ರಮುಖವಾಗಿವೆ.

ಹೊಸದಾಗಿ ಪಾಲಿಕೆ ಸಿದ್ಧಪಡಿಸಿದ

ಪಟ್ಟಿಯಲ್ಲಿ ಬಡೇಪುರದಲ್ಲಿ 12, ರಾಜಾಪುರ ಬಡೇಪುರ ಪ್ರದೇಶದಲ್ಲಿ 8 ಉದ್ಯಾನಗಳನ್ನು, ಧರಿಯಾಪುರ ಕೋಟನೂರ ಜಿಡಿಎ 18 ಎಕರೆ ಪ್ರದೇಶದ ಉದ್ಯಾನ ಸೇರಿ 8 ಉದ್ಯಾನಗಳಿವೆ.

ಪ್ರತಿಕ್ರಿಯಿಸಿ (+)