ಭಾನುವಾರ, ಜನವರಿ 26, 2020
28 °C

ಬಗದಲ್‌ ಸಾಹೇಬರ ಕೃಷಿ ಪ್ರಯೋಗ ಶಾಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಇವರು ಹೊಂಡದಲ್ಲಿ ನೀರು ಖಾಲಿಯಾಗಬಹುದು, ಕೊಳವೆ­ಬಾವಿ­ಗಳಲ್ಲಿ ನೀರು ಚಿಮ್ಮುವುದು ಕಡಿಮೆ­ಯಾಗ­ಬಹುದು, ಮಳೆ ಕೈ ಕೊಡಬ­ಹುದು. ಆದರೆ ಬಗದಲ್‌ ಸಾಹೇಬರ ಆದಾಯ ಮಾತ್ರ 365 ದಿನವೂ ಬತ್ತದ ಗಂಗೆಯಂತಿದೆ! ಏಕೆಂದರೆ ಇವರು ಇತರ ರೈತರಂತೆ ಒಂದೇ ಬೆಳೆಗೆ ಜೋತು ಬಿದ್ದಿಲ್ಲ. ಹತ್ತಾರು ಬೆಳೆ, ಹತ್ತಾರು ಆದಾಯ–ಇದು ಸಾಹೇಬರ ಮೂಲಮಂತ್ರ. ಇದನ್ನು ಅನುಷ್ಠಾನಗೊಳಿಸಿ ಯಶಸ್ಸು ಕಂಡಿದ್ದಾರೆ.ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಅಲ್ ಹಜ್ ಷಹಾ ಖಲೀಫ್ ಮಹಮ್ಮದ್ ಇದ್ರೀಸ್ ಅಹಮ್ಮದ್ ಖಾದ್ರಿ ಸಮಗ್ರ ಕೃಷಿ ಪದ್ಧತಿಯನ್ನು ತಮ್ಮ ಆದಾಯ ಮೂಲವನ್ನಾಗಿಸಿ­ಕೊಂಡಿದ್ದಾರೆ. ‘ಬಗದಲ್ ಸಾಹೇಬ್’ ಎಂದೇ ಪ್ರಸಿದ್ಧರಾಗಿರುವ 61 ವರ್ಷದ ಇವರು, ಗ್ರಾಮದ ಆಸ್ತಾನಾ ಖಾದರ್ ಷಾ ವಲಿ ದರ್ಗಾದ ಮುಖ್ಯಸ್ಥರೂ ಹೌದು.ಪ್ರೌಢಶಾಲೆ ಹಂತದವರೆಗೆ ಶಿಕ್ಷಣ ಪೂರೈಸಿರುವ ಸಾಹೇಬ್‌ ಗ್ರಾಮದಲ್ಲಿ­ರುವ ತಮ್ಮ 16 ಎಕರೆ 15 ಗುಂಟೆ ಜಮೀನನ್ನು ‘ಕೃಷಿ ಪ್ರಯೋಗ ಶಾಲೆ’­ಯನ್ನಾಗಿಸಿದ್ದಾರೆ. ಕೃಷಿಯಲ್ಲಿ ಏಕಬೆಳೆ, ಬಹುಬೆಳೆ, ಅಂತರ ಬೆಳೆ, ಮಿಶ್ರ ಬೆಳೆ, ತೋಟಗಾರಿಕೆ, ಅರಣ್ಯ ಬೆಳೆಗಳನ್ನು ಬೆಳೆದು ಸುತ್ತಮುತ್ತಲ ರೈತರ ಗಮನ ಸೆಳೆದಿದ್ದಾರೆ. ಹೀಗಾಗಿಯೇ ಇವರ ತೋಟ ‘ಕೃಷಿ ಮಾಹಿತಿ ಕೇಂದ್ರ’ ಎನಿಸಿಕೊಂಡಿದ್ದು, ಅಧ್ಯಯನಕ್ಕಾಗಿ ರೈತರು, ವಿದ್ಯಾರ್ಥಿಗಳ ಭೇಟಿ ನೀಡುವ ತಾಣವೂ ಆಗಿದೆ.ಅವಿವಾಹಿತರಾಗಿರುವ ಖಾದ್ರಿ ಸಾಹೇಬ್‌ ಅವರ ತೋಟದಲ್ಲಿ ಹಲವು ಬಗೆಯ ಬೆಳೆಗಳಿವೆ. ಒಂದರ ಸುಗ್ಗಿ ಮುಗಿಯುತ್ತಿದ್ದಂತೆ ಮತ್ತೊಂದರ ಸುಗ್ಗಿ ಕಾಲ ಶುರುವಾಗುತ್ತದೆ. ಬೆಳೆಗಳು, ಗಿಡ ಮರಗಳು, ಹೈನುಗಾರಿಕೆಯಿಂದ ವರ್ಷ­ವಿಡೀ ಆದಾಯ ಬರುತ್ತಲೇ ಇರುತ್ತದೆ.

ತಮ್ಮ ಜಮೀನಿನಲ್ಲಿ 3 ಎಕರೆಯನ್ನು ವಿವಿಧ ತಳಿಯ ಕಬ್ಬು ಬೆಳೆಯಲು ಮೀಸಲಿರಿಸಿದ್ದಾರೆ. ಉಳಿದ ಜಮೀನಿ­ನಲ್ಲಿ ತೋಟಗಾರಿಕೆ, ಗಿಡ-–ಮರ, ಹೈನುಗಾರಿಕೆ, ನರ್ಸರಿ, ಮೀನು ಸಾಕಣೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಸಹೋದರರು ಇವರ ಕಾರ್ಯಕ್ಕೆ ಸಾಥ್‌ ನೀಡುತ್ತಾರೆ.ತೋಟದಲ್ಲಿ 20ಕ್ಕೂ ಹೆಚ್ಚು ದೇಶ– ವಿದೇಶಿ ತಳಿಗಳ ಕಬ್ಬು, 26 ಬಗೆಯ ಮಾವು, ನಿಂಬೆ, ಮೋಸಂಬಿ, ನೇರಳೆ, ಸೀಬೆ, ಸಪೋಟಾ, ಸೀತಾಫಲ, ಪಪ್ಪಾಯ, ಸಾಗುವಾನಿ, ಕೃಷಿ ಬೆಳೆ­ಗಳಾದ ಸೋಯಾ ಅವರೆ, ಗೋಧಿ, ಶೇಂಗಾ, ಮೆಕ್ಕೆಜೋಳ, ತರಕಾರಿಗಳಾದ ಬದನೆ, ಮೆಣಸಿನಕಾಯಿ, ಟೊಮೆಟೊ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ.‘ನಾವು ಹನಿ ನೀರಾವರಿ ವಿಧಾನ ಅಳವಡಿಸಿಕೊಂಡಿದ್ದೇವೆ. ನಾನು ಹೊರ ರಾಜ್ಯ, ದೇಶಗಳಿಗೆ ಹೋದಾಗ ಅಲ್ಲಿನ ತಳಿಗಳನ್ನು ತಂದು ತೋಟದಲ್ಲಿ ನೆಟ್ಟು ಪ್ರಯೋಗ ಮಾಡುತ್ತೇನೆ’  ಎಂದು ಖಾದ್ರಿ ಹೇಳುತ್ತಾರೆ. ಮೂರು ಕಣ್ಣಿನ ಕಬ್ಬು, ಬ್ರೆಜಿಲ್‌, ಕೊಯಮುತ್ತೂರು, ಉತ್ತರ ಪ್ರದೇಶ ಸೇರಿ ವಿವಿಧ ತಳಿಗಳ ಕಬ್ಬು ಬೆಳೆ­ಯ­ಲಾ­ಗು­ತ್ತಿದೆ. ಆರಂಭದಲ್ಲಿ ಕಬ್ಬು ಎಕರೆಗೆ 25–-30 ಟನ್ ಇಳುವರಿ ಬರುತ್ತಿತ್ತು. ಆಧುನಿಕ ಕೃಷಿ ಪದ್ಧತಿ ಅನುಕರಣೆ­ಯಿಂದಾಗಿ ನಾಲ್ಕು ವರ್ಷಗಳಿಂದ ಎಕರೆಗೆ 115 ರಿಂದ 118 ಟನ್ ಇಳು­ವರಿ ಪಡೆಯುತ್ತಿದ್ದೇವೆ’ ಎಂದು ಹೇಳುತ್ತಾರೆ.ದಶೇರಿ, ಬೆನಿಶಾನ್, ರಾಜಾಪುರಿ, ಮಲ್ಲಿಕಾ, ಸುಂದರಿ, ದೂಧ್‌ಪೇಡಾ, ಅಝಗರ್(ಶ್ರೀಲಂಕಾ), ಚಿನ್ನರಸಾಲ್, ಪೆದ್ದ ರಸಾಲ್, ಶಕ್ಕರಗೋಟಿ, ತೋತಾ­ಪುರಿ, ದಿಲ್‌ಖುಷ್ ಮತ್ತಿತರ ತಳಿಗಳ ಮಾವು ಬೆಳೆಯಲಾಗುತ್ತಿದೆ. ಮಾವು­ಗಳ ಮಧ್ಯೆ ಅಂತರ ಬೆಳೆಯಾಗಿ ಶ್ರೀಲಂಕಾ ಗೋಧಿ ಹಾಗೂ ತರಕಾರಿ­ಯನ್ನು ಬೆಳೆಯಲಾಗುತ್ತಿದೆ. ನಿಂಬೆ ಗಿಡಗಳು ಸಾಕಷ್ಟಿದ್ದು, ಸುಗ್ಗಿ ಕಾಲದಲ್ಲಿ ವಾರದಲ್ಲಿ 150 ರಿಂದ 200 ಚೀಲ ನಿಂಬೆ ಇಳುವರಿ ಬರುತ್ತದೆ. ಹಣ್ಣುಗಳ ಗಾತ್ರ ದೊಡ್ಡದಾಗಿದ್ದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.ತೋಟದಲ್ಲಿರುವ ಡೇರಿಯಲ್ಲಿ ವಿವಿಧ ತಳಿಯ 202 ಜಾನುವಾರು­ಗಳಿವೆ. ಸ್ವದೇಶಿ ಆಕಳು, ಜರ್ಸಿ ಆಕಳು, ಮುರ್ರಾ ಎಮ್ಮೆ  ಸೇರಿವೆ. ಸಂತಾನೋ­ತ್ಪತ್ತಿ­ಗಾಗಿ ಯುರೋಪ್‌ ತಳಿಯ ಕೋಣ­ಗಳಿವೆ. ನಿತ್ಯ 400 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಅಂತರ್ಜಲ ಮಟ್ಟ ಕಾಪಾಡಲು ನಾಲ್ಕು ಕೃಷಿ ಹೊಂಡಗಳನ್ನು ತೋಡಲಾ­ಗಿದೆ. ಸಸಿ ತಯಾರಿಕೆಗಾಗಿ ‘ನೆರಳು ಮನೆ’ ಸ್ಥಾಪಿಸಲಾಗಿದೆ. ಅಲ್ಲಿಯೇ ಕಬ್ಬು, ತರಕಾರಿ ಬೆಳೆ, ಅರಣ್ಯ ಬೆಳೆಗಳ ಸಸಿ­ಗಳನ್ನು ಬೆಳೆಸಲಾಗುತ್ತದೆ. ಎರೆ ಹುಳು ಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಲಾಗಿದ್ದು, ಅದನ್ನೇ ಜಮೀನಿಗೆ ಬಳಸಲಾಗುತ್ತದೆ.ಜಮೀನಿಗೆ ನೀರುಣಿಸಲು 4 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ವಿದ್ಯುತ್ ಕೈಕೊಟ್ಟಾಗ ನೀರು ಹಾಯಿಸಲು ಜನರೇಟರ್ ಬಳಸಲಾಗುತ್ತದೆ. ಕೃಷಿ ಕಾರ್ಯಕ್ಕಾಗಿ 16 ಎತ್ತು, 3 ಟ್ರ್ಯಾಕ್ಟರ್, ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಇವೆ. ಹೀಗಾಗಿ ಕಾರ್ಮಿಕರ ಮೇಲೆ ಹೆಚ್ಚು ಅವಲಂಬನೆ ಇರುವುದಿಲ್ಲ . ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿ­ಕೊಂಡಲ್ಲಿ ಆರ್ಥಿಕವಾಗಿ ಸಬಲರಾಗ­ಬಹುದು ಎಂದು ಸಲಹೆ ನೀಡುತ್ತಾರೆ ಸಾಹೇಬ್‌. ಮಾಹಿತಿಗೆ 94484 78610ಗೆ ಸಂಪರ್ಕಿಸ­ಬಹುದು.

–ನಾಗೇಶ ಪ್ರಭಾ

ಪ್ರತಿಕ್ರಿಯಿಸಿ (+)