ಶುಕ್ರವಾರ, ಮಾರ್ಚ್ 5, 2021
29 °C

ಒತ್ತುವರಿ ತೆರವು; ಮರೆಯಾಗದ ಸೂತಕದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒತ್ತುವರಿ ತೆರವು; ಮರೆಯಾಗದ ಸೂತಕದ ಛಾಯೆ

ಚಿತ್ತಾಪುರ: ನಗರದಲ್ಲಿ ಸಾರ್ವಜನಿಕ ರಸ್ತೆ, ಸರ್ಕಾರಿ ಖುಲ್ಲಾ ಜಾಗ, ಸಮುದಾಯ ಭವನ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಕಳೆದ ಮೇ 15 ರಂದು ತೆರವು ಕಾರ‌್ಯಾಚರಣೆ ಶುರು ಮಾಡಲಾಗಿತ್ತು.ತಿಂಗಳಾದರೂ ತ್ಯಾಜ್ಯ ವಿಲೇವಾರಿ ವೇಗವಾಗಿ ನಡೆಯದ ಪರಿಣಾಮ, ತೆರವು ಮಾಡಲಾದ ಕಟ್ಟಡಗಳ ಅವಶೇಷಗಳಿಂದ ನಗರದಾದ್ಯಂತ ಸೂತಕದ ಛಾಯೆ ಆವರಿಸಿದೆ. ಇಡೀ ನಗರ ಹಾಳು ಕೊಂಪೆಯಂತೆ, ಸ್ಮಶಾನದಂತೆ ಗೋಚರಿಸುತ್ತಿದೆ.ತೆರವು ಕಾರ‌್ಯಾಚರಣೆಯಿಂದ ಮನೆ ಮುಂದೆ ಇದ್ದ ನೀರು ಸರಬರಾಜು ಖಾಸಗಿ ಹಾಗೂ ಸಾರ್ವಾಜನಿಕ ನಳ ಕಟ್ಟಡಗಳ ಅವಶೇಷದಲ್ಲಿ ಹೂತು ಹೋಗಿವೆ. ನೀರಿಗಾಗಿ ಪಕ್ಕದ ಮನೆಗೆ ಕೊಡ ಹಿಡಿದುಕೊಂಡು ಅಲೆದಾಡಬೇಕಾಗಿದೆ. ಚರಂಡಿಗಳು ತುಂಬಿ ಪರಿಸರ ಕೆಟ್ಟ ವಾಸನೆಯಿಂದ ನಾರುತ್ತಿದೆ. ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಪಡೆಯಲು ಪಡಬಾರದ ಕಷ್ಟ ಪಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿ ಜನರ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಸ್ಪಂಧನೆ ಮಾಡುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.ರಸ್ತೆ ಪಕ್ಕದಲ್ಲಿದ್ದ ಮನೆ, ಅಂಗಡಿ ತೆರವು ಮಾಡಿದ ಪರಿಣಾಮ ಜನರು ತುಂಬಾ ಹಾನಿ ಅನುಭವಿಸಿದ್ದಲ್ಲದೆ, ನಗರದ ವ್ಯಾಪಾರ ವಹಿವಾಟಿಗೆ ಭಾರಿ ಧಕ್ಕೆಯಾಗಿದೆ. ಮದುವೆ ಸಿಸನ್ ಇದ್ದ ಪರಿಣಾಮ ಬಟ್ಟೆ, ಕಿರಾಣಿ, ಹಾಂಡೆ ಬಾಂಡೆ ವ್ಯಾಪಾರಿಗಳು ಕೋಟ್ಯಂತರ ರೂಪಾಯಿ ವ್ಯಾಪಾರ ನಷ್ಟ ಅನುಭವಿಸಿ ಆರ್ಥಿಕ ಹಾನಿ ಅನುಭವಿಸಿದ್ದಾರೆ.ರಸ್ತೆ ಪಕ್ಕದಲ್ಲಿ ತೆರವು ಮಾಡಿದ ಮನೆಗಳ ಅವಶೇಷ ರಸ್ತೆಯಲ್ಲಿ ಬಿದ್ದಿದೆ. ಮನೆ ಮಾಲೀಕರು ಮನೆ ಕಳೆದುಕೊಂಡು ನೋವು ಅನುಭವಿಸುತ್ತಿದ್ದಾರೆ. ಮನೆ ಮುಂದಿನ ಅವಶೇಷ ತೆಗೆಯಲಾಗದೆ, ಪುರಸಭೆ ಅದನ್ನು ಅತೀ ಶೀಘ್ರ ವಿಲೇವಾರಿ ಮಾಡದ ಕಾರಣ ದಿನಾಲೂ ಸೂತಕದ ಛಾಯೆಯಿಂದ ಹೊರಬರಲಾಗದೆ ಪರದಾಡುತ್ತಾ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದಾರೆ.ಬೆಳಗಾದರೆ ತೆರವುಗೊಂಡ ಕಟ್ಟಡದ ಭಗ್ನ ಮನೆಯ ದೃಶ್ಯ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅವಶೇಷ ನೋಡಿ ಮಾನಸಿಕವಾಗಿ ತುಂಬಾ ಹಿಂಸೆಯಾಗುತ್ತಿದೆ. ಕಟ್ಟಡಗಳ ತೆರವು ತ್ಯಾಜ್ಯ ಬೇಗನೆ ತೆರವು ಮಾಡಲು ಪುರಸಭೆ ಆಡಳಿತ ನಿಧಾನ ಗತಿ ಅನುಸರಿಸುತ್ತಿದೆ.

 

ಜನರ ನೋವು, ಸಮಸ್ಯೆ, ಹಿಂಸೆಯನ್ನು ಆಡಳಿತ ಲಘುವಾಗಿ ಪರಿಗಣಿಸುತ್ತಿದೆ. ಆದಷ್ಟು ಬೇಗ ತ್ಯಾಜ್ಯ ವಿಲೇವಾರಿ ಮಾಡಿ ಸೂತಕದ ಛಾಯೆಯ ವಾತಾವರಣದಿಂದ ಹೊರಬರುವಂತೆ ಮಾಡಬೇಕು ಎಂದು ನಗರದ ಜನರು ಮನವಿ ಮಾಡಿದ್ದಾರೆ.ರಸ್ತೆಯಲ್ಲಿ ಬಿದ್ದಿರುವ ಕಟ್ಟಡಗಳ ಅವಶೇಷಗಳಿಂದ ವಾಹನ ಸಂಚಾರ, ಜನರ ಸಂಚಾರ, ರೈತರ ಎತ್ತಿನ ಗಾಡಿ ಸಂಚಾರಕ್ಕೂ ಸಂಚಕಾರ ಬಂದೊದಗಿದೆ. ರಾತ್ರಿಯಾದರೆ ಕತ್ತಲಲ್ಲಿ ನಡೆದಾಡಲು ಕಷ್ಟವಾಗುತ್ತಿದೆ.

ಕೆಲವು ರಸ್ತೆಗಳಲ್ಲಿ ರಾತ್ರಿ ಬೀದಿ ದೀಪವಿಲ್ಲದ ಕಾರಣ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಮಳೆಗಾಲವಾಗಿದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಜನರು ಆತಂಕ ವ್ಯಕ್ತ ಮಾಡಿದ್ದಾರೆ.

ಮನೆ, ಅಂಗಡಿ ಕಟ್ಟಿಕೊಳ್ಳಲು ಜನರು ಗೊಂದಲದಲ್ಲಿದ್ದಾರೆ. ತೆರವುಗೊಂಡ ಕಡೆಗೆ ಮತ್ತೊಮ್ಮೆ ರಸ್ತೆಯನ್ನು ಅಳತೆ ಮಾಡಿ, ನಿಖರ ಗುರುತು ಹಾಕಿ, ಸೆಟ್‌ಬ್ಯಾಕ್ ಬಿಟ್ಟು ಜನರು ತಮ್ಮ ಕಟ್ಟಡ ಕಟ್ಟಿಕೊಳ್ಳುವ ಜಾಗವನ್ನು ಪುರಸಭೆ ಗುರುತಿಸಬೇಕು ಎಂದು ನಗರದ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗೆ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.