ಅಂಬಾರಗುಡ್ಡ ಗಣಿಗಾರಿಕೆ ಪ್ರದೇಶಕ್ಕೆ ನ್ಯಾಯಾಧೀಶರ ಭೇಟಿ

7

ಅಂಬಾರಗುಡ್ಡ ಗಣಿಗಾರಿಕೆ ಪ್ರದೇಶಕ್ಕೆ ನ್ಯಾಯಾಧೀಶರ ಭೇಟಿ

Published:
Updated:
Deccan Herald

ಸಾಗರ: ಸಮೀಪದ ಅಂಬಾರಗುಡ್ಡ ಪ್ರದೇಶಕ್ಕೆ ಇಲ್ಲಿನ ಸಿವಿಲ್ ನ್ಯಾಯಾಧೀಶ ಜಿ.ರಾಘವೇಂದ್ರ ಹೈಕೋರ್ಟ್ ನಿರ್ದೇಶನದಂತೆ ಭಾನುವಾರ ತೆರಳಿ ಪರಿಶೀಲನೆ ನಡೆಸಿದರು.

ಅಂಬಾರಗುಡ್ಡದಲ್ಲಿ ಈ ಹಿಂದೆ ಖಾಸಗಿ ಕಂಪನಿಯೊಂದು ಗಣಿಗಾರಿಕೆ ನಡೆಸಿತ್ತು. ಈ ಸಂದರ್ಭದಲ್ಲಿ ತೆಗೆದ ಅದಿರು ಅಲ್ಲಿ ಸಂಗ್ರಹವಿದ್ದು, ಅದನ್ನು ಸಾಗಿಸಲು ಅನುಮತಿ ನೀಡಬೇಕು ಎಂದು ಕಂಪನಿ ಅನುಮತಿ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.

ಇದಕ್ಕೆ ತಕರಾರು ಸಲ್ಲಿಸಿದ ಪರಿಸರವಾದಿ ಸಂಘಟನೆಗಳು, ‘ಸ್ಥಳದಲ್ಲಿ ಗಣಿಗಾರಿಕೆ ನಡೆಸಿದ ಕಂಪನಿ ತೆಗೆದ ಯಾವುದೇ ಅದಿರು ಸಂಗ್ರಹವಿಲ್ಲ. ಅದಿರು ಸಾಗಾಣಿಕೆಗೆಂದು ಅನುಮತಿ ಪಡೆದು ಹೊಸದಾಗಿ ಗಣಿಗಾರಿಕೆ ನಡೆಸಲು ಕಂಪನಿ ಮುಂದಾಗಿದೆ’ ಎಂದು ನ್ಯಾಯಾಲಯದಲ್ಲಿ ಅಹವಾಲು ಮಂಡಿಸಿದ್ದರು.

ಅಂಬಾರಗುಡ್ಡ ಪ್ರದೇಶ ಪಶ್ಚಿಮಘಟ್ಟದಲ್ಲಿದ್ದು, ಅದನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ಗಣಿಗಾರಿಕೆಗೆ ಅನುಮತಿ ನೀಡಬಾರದು ಎನ್ನುವ ನಿಲುವನ್ನು ಪರಿಸರ ಸಂಘಟನೆಗಳು ವ್ಯಕ್ತಪಡಿಸಿದ್ದವು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಅಲ್ಲಿ ಅದಿರು ಸಂಗ್ರಹ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಇಲ್ಲಿನ ಸಿವಿಲ್ ನ್ಯಾಯಾಧೀಶರಿಗೆ ಆದೇಶ ನೀಡಿತ್ತು.

ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ರಾಘವೇಂದ್ರ ಅವರು ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಂಬಾರಗುಡ್ಡದ ಹಾಲಿ ಪರಿಸ್ಥಿತಿ, ವಾಸ್ತವಾಂಶಗಳ ಕುರಿತು ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ವೃಕ್ಷಲಕ್ಷ ಆಂದೋಲನದ ಸಂಚಾಲಕ ಅನಂತ ಹೆಗಡೆ ಅಶಿಸರ, ಪ್ರಸನ್ನ ಕೆರೆಕೈ, ಸುಬ್ರಮಣ್ಯ ಭಟ್ ಅವರೂ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !