ಭಾನುವಾರ, ಸೆಪ್ಟೆಂಬರ್ 27, 2020
24 °C

ಮಹಾಚುನಾವಣೆಗೆ ಮುಂಚೆ ಸತ್ವಪರೀಕ್ಷೆ

ಸಂದೀಪ್‌ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯದಲ್ಲೀಗ ಪುನಃ ಚುನಾವಣೆಯ ಸಂದರ್ಭ. ಲೋಕಸಭೆ ಮತ್ತು ವಿಧಾನಸಭೆ ಸೇರಿ ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಹಲವಾರು ಕಾರಣಗಳಿಂದಾಗಿ ಇದು ಕಾವು ಮೂಡಿಸಿದೆ. ಈ ಕ್ಷೇತ್ರಗಳಲ್ಲಿ ಹೊರಹೊಮ್ಮುವ ಫಲಿತಾಂಶವು ರಾಜ್ಯದ ರಾಜಕೀಯ ಸುಳಿಗಾಳಿಯ ಸೂಚಕವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಭೂಮಿಕೆ ಸಿದ್ಧಗೊಳಿಸಲಿದೆ ಎಂದು ಮೂರೂ ಪ್ರಮುಖ ಪಕ್ಷಗಳು ಹೇಳುತ್ತಿವೆ. ಜೊತೆಗೆ, ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಲೋಕಸಭಾ ಚುನಾವಣೆಗಾಗಿ ಮೈತ್ರಿ
ಸಾಧ್ಯತೆ ದೃಷ್ಟಿಯಿಂದಲೂ ಮಹತ್ವದ ಪರೀಕ್ಷೆಯಾಗಲಿದೆ. ಇದೇ ವೇಳೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಪಕ್ಷಗಳು ಉಪ ಚುನಾವಣೆಗಾಗಿ ಹೊಂದಾಣಿಕೆ ಮಾಡಿಕೊಂಡಿರುವ ವಿದ್ಯಮಾನವೇ ಮೈತ್ರಿಕೂಟದ ಪಕ್ಷಗಳು
ಮತ್ತು ಪ್ರಮುಖ ಎದುರಾಳಿಯಾದ ಬಿಜೆಪಿಯಲ್ಲಿ ಸುದೀರ್ಘ ಚರ್ಚೆಗೆ ಗ್ರಾಸ ಒದಗಿಸಿದೆ.

ಅದೇನೇ ಇರಲಿ, ಇದೇ ಹಂತದಲ್ಲಿ ಎರಡು ಆಕ್ಷೇಪಗಳನ್ನು ಮುಂದಿಡಬೇಕಾಗುತ್ತದೆ. ಮೊದಲನೆಯದಾಗಿ, ಉಪ ಚುನಾವಣೆಗಳು ಯಾವುದೇ ರಾಜ್ಯದ ಅಥವಾ ರಾಷ್ಟ್ರೀಯ ಮನೋಗತದ ಸೂಚಕವಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಬಲು ಮುಖ್ಯ. ಆಯಾ ಕ್ಷೇತ್ರಕ್ಕೆ ಸೀಮಿತವಾದ ಸಂಗತಿಗಳು ಮತ್ತು ಯಾವ ಕಾರಣದಿಂದಾಗಿ ಉಪಚುನಾವಣೆ ನಡೆಯುತ್ತಿದೆ ಎಂಬುದು ಉಪ ಚುನಾವಣೆಯ ಮನೋಗತ ಮತ್ತು ಫಲಿತಾಂಶವನ್ನು ವಿಶ್ಲೇಷಿಸುವಲ್ಲಿ ಮುಖ್ಯವಾಗುತ್ತವೆ. ಈಗ ಚುನಾವಣೆ ಎದುರಿಸುತ್ತಿರುವ ಐದು ಕ್ಷೇತ್ರಗಳ ಪೈಕಿ, ಒಂದು ಕ್ಷೇತ್ರದಲ್ಲಿ ವಿಜಯೀ ಅಭ್ಯರ್ಥಿಯು ಎರಡರ ಪೈಕಿ ಒಂದಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣಕ್ಕೆ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಆಯ್ಕೆಗೊಂಡವರು ನಿಧನರಾದ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ. ಇವುಗಳ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಾಧಿಸಿರುವುದು ರಾಜಕೀಯ ಸ್ಥಿತಿಗತಿಯ ಮೇಲೆ ಗಮನಾರ್ಹ ಪರಿಣಾಮ ಬೀರಲಿದ್ದು ಇದು, ಹೊರಹೊಮ್ಮಲಿರುವ ಮತದಾರನ ಮನೋಗತವನ್ನು ವಿವರಿಸುವಲ್ಲಿ ಮುಖ್ಯ ಸಂಗತಿಯಾಗಲಿದೆ.

ಎರಡನೆಯದಾಗಿ, ಉಪ ಚುನಾವಣೆ ಫಲಿತಾಂಶಗಳು ರಾಜ್ಯವ್ಯಾಪಿ ಅಥವಾ ರಾಷ್ಟ್ರದ ಮನೋಗತವನ್ನು ಪ್ರತಿಬಿಂಬಿಸದಿದ್ದರೂ ಅದು ರಾಜ್ಯದ ರಾಜಕೀಯ ವಾತಾವರಣ ಮತ್ತು ಪಕ್ಷಗಳ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರಬಲ್ಲವು. ಕಾಂಗ್ರೆಸ್ ಪಕ್ಷವು 2017ರಲ್ಲಿ ಎರಡು ಕ್ಷೇತ್ರಗಳಿಗೆ (ಗುಂಡ್ಲುಪೇಟೆ ಮತ್ತು ನಂಜನಗೂಡು) ನಡೆದ ಉಪಚುನಾವಣೆಯಲ್ಲಿ ಸಾಧಿಸಿದ ಗೆಲುವು ಆ ಪಕ್ಷಕ್ಕೆ ಪುನಶ್ಚೇತನ ತುಂಬುವುದರ ಜೊತೆಗೆ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸ್ಥಾನವನ್ನು ಭದ್ರಗೊಳಿಸಿತ್ತು. ಅದೇ ರೀತಿಯಲ್ಲಿ ಈಗಿನ ಫಲಿತಾಂಶವನ್ನು ಒಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಮತ್ತೊಂದೆಡೆ ಸಂಘಟಿತ ವಿರೋಧವನ್ನು ಎದುರಿಸುವ ಬಿಜೆಪಿ ಸಾಮರ್ಥ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಸಂದರ್ಭ ಎದುರಾಗುತ್ತದೆ.

ಉಪಚುನಾವಣೆ ನಡೆಯಲಿರುವ ಐದು ಕ್ಷೇತ್ರಗಳ ಪೈಕಿ ಜಮಖಂಡಿ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಅಂತಹ ಜಟಿಲತೆಯೇನೂ ಎದುರಾಗಲಿಲ್ಲ. ಜಮಖಂಡಿಯಲ್ಲಿ ಹಾಲಿ ಶಾಸಕರ ನಿಧನದಿಂದಾಗಿ ಸ್ಥಾನ ತೆರವಾಗಿದ್ದರಿಂದ ಆ ಸ್ಥಾನವನ್ನು ಹೊಂದಿದ್ದ ಪಕ್ಷವೇ ಅಭ್ಯರ್ಥಿಯನ್ನು ಹಾಕುವುದು ನಿಶ್ಚಿತವಾಗಿತ್ತು. ಇನ್ನು ರಾಮನಗರ ಕ್ಷೇತ್ರವನ್ನು ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರವುಗೊಳಿಸಿದ್ದರಿಂದ ಅಲ್ಲಿ ಅಭ್ಯರ್ಥಿ ಯಾರೆಂದು ನಿರ್ಧರಿಸುವುದನ್ನು ಜೆಡಿಎಸ್‌ಗೆ ಬಿಟ್ಟಿದ್ದು ಸಹಜವೇ ಸರಿ. ಆದರೆ, ರಾಮನಗರವು ಸಾಂಪ್ರದಾಯಿಕವಾಗಿ ಜೆಡಿಎಸ್-ಕಾಂಗ್ರೆಸ್ ಖಡಾಖಡಿಯ ಕ್ಷೇತ್ರವಾಗಿದ್ದರಿಂದ ಸ್ಥಳೀಯ ಕಾಂಗ್ರೆಸ್‌ನಲ್ಲಿ ಇದರ ಬಗ್ಗೆ ಒಂದಷ್ಟು ಅಪಸ್ವರ- ಅಸಮಾಧಾನದ ಧ್ವನಿ ಹೊರಹೊಮ್ಮಿತು. ಮೈತ್ರಿ ರಾಜಕಾರಣದ ಕಟ್ಟುಪಾಡುಗಳಿಂದಾಗಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದೆ ಬೇರೆ ಆಯ್ಕೆ ಇರಲಿಲ್ಲ. ಅಲ್ಲೀಗ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ಆಪ್ತರೇ ಬಿಜೆಪಿ ಅಭ್ಯರ್ಥಿಯಾಗಿರುವುದು ಹಾಗೂ ಕಾಂಗ್ರೆಸ್- ಜೆಡಿಎಸ್ ಒಪ್ಪಂದ ಖಚಿತಗೊಂಡ ಸಂದರ್ಭದಲ್ಲಿ ಅವರು ಪಕ್ಷಾಂತರ ಮಾಡಿದ್ದು ಕಾಂಗ್ರೆಸ್ಸಿನ ಆಂತರಿಕ ಬಂಡಾಯಕ್ಕೆ ಕೈಗನ್ನಡಿ ಹಿಡಿಯುತ್ತದೆ. ಅಲ್ಲದೆ, ವಿಧಾನಸಭಾ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಜೆಡಿಎಸ್ ಅಭ್ಯರ್ಥಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ಚುನಾವಣೆ ಕಾಣುತ್ತಿರುವ ಮಂಡ್ಯ ಲೋಕಸಭೆ ಕ್ಷೇತ್ರದ ವಿಷಯದಲ್ಲಿ ಕಾಂಗ್ರೆಸ್‌ಗೆ ಆಯ್ಕೆ ಅವಕಾಶಗಳೇ ಇರಲಿಲ್ಲ ಎನ್ನಬಹುದು.

ಉಳಿದಂತೆ, ಸುದೀರ್ಘ ಸಂಧಾನ-ಚರ್ಚೆಗಳಿಗೆ ಗ್ರಾಸ ಒದಗಿಸಿದ್ದು ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು. ಈ ಎರಡೂ ಕಡೆ ವಿಧಾನಸಭಾ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಸಂಸದರು ರಾಜೀನಾಮೆ ನೀಡಿದ್ದರು. ಇಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಮಗನ ಎದುರು ಅಭ್ಯರ್ಥಿ ಹುಡುಕಲು ಸಾಧ್ಯವಾಗಲಿಲ್ಲ. ಇದನ್ನು ತನಗೆ ದಕ್ಕಿದ ಅವಕಾಶ ಎಂದು ಭಾವಿಸಿದ ಜೆಡಿಎಸ್ ಅಲ್ಲಿ ಸೆಣಸಲು ಮುಂದಾಯಿತು. ಬಳ್ಳಾರಿ ಹಿಂದಿನಿಂದಲೂ ಬಿಜೆಪಿ-ಕಾಂಗ್ರೆಸ್ ಮುಖಾಮುಖಿಯ ಕ್ಷೇತ್ರವಾಗಿದ್ದು ಅದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು ಸಹಜವೇ.

ಸಂಘಟಿತ ವಿರೋಧದ ಎದುರು ಬಿಜೆಪಿ ಸಾಧನೆಯು ಆ ಪಕ್ಷದ ಪಾಲಿಗೆ ಮಹತ್ವದ ಪರೀಕ್ಷೆಯೇ ಆಗಲಿದೆ. ತನ್ನ ತೆಕ್ಕೆಯಲ್ಲಿದ್ದ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜೊತೆಗೆ ಮೂರು ಸ್ಥಾನಗಳನ್ನು ಜೆಡಿಎಸ್-ಕಾಂಗ್ರೆಸ್‌ನಿಂದ ಕಸಿದುಕೊಳ್ಳಲು ಅದು ಯತ್ನಿಸುತ್ತಿದೆ. ಈ ಕ್ಷೇತ್ರಗಳ ಫಲಿತಾಂಶವು ಬಿಜೆಪಿ ರಾಜ್ಯ ಘಟಕದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕೂಡ ಪ್ರತಿಫಲಿಸಲಿದೆ. ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಿಂದ ಮತ್ತು ಸರ್ಕಾರ ರಚನೆ ವಿಷಯದಲ್ಲಿ ಗೊಂದಲ ಏರ್ಪಟ್ಟಾಗಿನಿಂದಲೂ ಬಿಜೆಪಿ ರಾಜ್ಯ ಘಟಕದಲ್ಲಿನ ಬಣ ರಾಜಕೀಯವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿ ರಾಜ್ಯ ಅಧ್ಯಕ್ಷರು, ಅವರ ಕಾರ್ಯವೈಖರಿ ಮತ್ತು ‘ಆಪರೇಷನ್ ಕಮಲ 2018’ಕ್ಕೆ ಚಾಲನೆ ನೀಡುವ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಪಕ್ಷದ ಈ ಆಂತರಿಕ ಸಂಘರ್ಷವು ಪಕ್ಷದ ಮೇಲೆ ದುಷ್ಪರಿಣಾಮ ಬೀರದಂತೆ ಹಾಗೂ ಕಾರ್ಯಕರ್ತರು ಈಗಲೂ ಬದ್ಧತೆಯಿಂದ ಕೆಲಸ ಮಾಡುವಂತೆ ಕೇಂದ್ರದ ಬಿಜೆಪಿ ವರಿಷ್ಠರು ಹಿಡಿತ ಹೊಂದಿದ್ದಾರೆಯೇ ಎಂಬುದು ಮಹತ್ವದ ಪ್ರಶ್ನೆಯಾಗಲಿದೆ.

ಮತ್ತೊಂದೆಡೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಕೂಡ ವಿರೋಧಾಭಾಸಗಳಲ್ಲಿ ತೊಳಲಾಡುತ್ತಿದೆ. ಈ ಪಕ್ಷಗಳಿಗೆ ಮೈತ್ರಿ ಒಪ್ಪಂದವು ಆಯ್ಕೆಯಾಗದೆ ರಾಜಕೀಯ ಅನಿವಾರ್ಯವಾಗಿದೆ. ಹೀಗಾಗಿ, ಮೈತ್ರಿಕೂಟದ ಒಳಗಿನಿಂದಲೇ ಆಗಾಗ ಕೇಳಿಬರುತ್ತಿರುವ ಭಿನ್ನ ಧ್ವನಿಗಳನ್ನು ಸಮಾಧಾನಪಡಿಸಿ ಮೇಲ್ನೋಟಕ್ಕಾದರೂ ಒಗ್ಗಟ್ಟು ಪ್ರದರ್ಶಿಸುವುದು ಅವುಗಳಿಗೆ ಅನಿವಾರ್ಯವಾಗಿದೆ. ಜೆಡಿಎಸ್‌ಗೆ ಅದಕ್ಕೆ ಸಿಗಬೇಕಾದ್ದಕ್ಕಿಂತಲೂ ಹೆಚ್ಚಿನದನ್ನು ಉದಾರವಾಗಿ ಬಿಟ್ಟುಕೊಡಲಾಗುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್ಸಿನಲ್ಲಿ ಜೋರಾಗಿಯೇ ಇದೆ. ಇದು ಕೇವಲ ಈ ಉಪಚುನಾವಣೆಯ ಸೀಟು ಹಂಚಿಕೆಯಲ್ಲಿ ಮಾತ್ರವಲ್ಲದೆ ಮೈತ್ರಿ ಸರ್ಕಾರದ ಆಡಳಿತ ವೈಖರಿಗೆ ಸಂಬಂಧಪಟ್ಟಂತೆಯೂ ಇದೆ. ಅಲ್ಲದೆ, ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈಗ ಉಪಚುನಾವಣೆಯು ಆ ಪಕ್ಷಕ್ಕೆ ಕಠಿಣ ಸವಾಲೊಡ್ಡಲು ಬಿಜೆಪಿಗೆ ಒಂದು ಸದವಕಾಶವೇ ಸರಿ.

ಈಗ ನಡೆದಿರುವ ಉಪಚುನಾವಣಾ ಪ್ರಚಾರಾಂದೋಲನ ಮತ್ತು ಅದರ ಫಲಿತಾಂಶಗಳ ಮೇಲೆ ನಿಶ್ಚಿತವಾಗಿಯೂ ಎಲ್ಲರ ಕುತೂಹಲ ನೆಟ್ಟಿದೆ. ರಾಜ್ಯದ ಮತದಾರರ ಮನೋಗತ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ನಿರೀಕ್ಷಿತ ಗತಿಯನ್ನು ಅಂದಾಜಿಸಲು ಇದು ಸತ್ವ ಪರೀಕ್ಷೆಯಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು