ಚಿನ್ನದ ಸರ ಕದ್ದು, ಪಬ್‌ಗೆ ಹೋಗುತ್ತಿದ್ದಳು!

7
ಅಸಲಿ ಬದಲಿಗೆ ನಕಲಿ ಸರ ಇಟ್ಟಿದ್ದ ಚಾಲಾಕಿ ಬಂಧನ

ಚಿನ್ನದ ಸರ ಕದ್ದು, ಪಬ್‌ಗೆ ಹೋಗುತ್ತಿದ್ದಳು!

Published:
Updated:
Deccan Herald

ಬೆಂಗಳೂರು: ಕಳ್ಳತನ ಮಾಡಲೆಂದೇ ಮನೆಗೆಲಸಕ್ಕೆ ಸೇರಿಕೊಂಡು ನಗ–ನಾಣ್ಯ ದೋಚುತ್ತಿದ್ದ ಈ ಮಹಿಳೆ, ಅದೇ ಹಣದಲ್ಲಿ ಪ್ರಿಯಕರನ ಜತೆ ಪಬ್‌ಗೆ ಹೋಗಿ ಪಾರ್ಟಿ ಮಾಡುತ್ತಿದ್ದಳು. ಇದೀಗ ಒಂದೇ ಮನೆಯಲ್ಲಿ ಮೂರು ಚಿನ್ನದ ಸರಗಳನ್ನು ಎಗರಿಸಿ ಕೋರಮಂಗಲ ಪೊಲೀಸರ ಅತಿಥಿಯಾಗಿದ್ದಾಳೆ.

ಶಿವಾಜಿನಗರದ ತಿಮ್ಮಯ್ಯ ರಸ್ತೆ ನಿವಾಸಿ ಶಾಂತಿ (38) ಬಂಧಿತ ಆರೋಪಿ. ಈ ಹಿಂದೆ ಶಿವಾಜಿನಗರ ಹಾಗೂ ಫ್ರೇಜರ್‌ಟೌನ್‌ ಠಾಣೆಗಳ ವ್ಯಾಪ್ತಿಯ ಎರಡು ಮನೆಗಳಲ್ಲೂ ಕಳವು ಮಾಡಿದ್ದಳು. ಶಾಂತಿ ವಿರುದ್ಧ ಕೋರಮಂಗಲದ ಸಾಫ್ಟ್‌ವೇರ್ ಉದ್ಯೋಗಿ ದೇವಿಕಾ ದೂರು ಕೊಟ್ಟಿದ್ದರು. ಬಂಧಿತಳಿಂದ ₹ 5 ಲಕ್ಷ ಮೌಲ್ಯದ ಆಭರಣ ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಗೆಳತಿಯರಿಂದ ಗೊತ್ತಾಯಿತು: ಆರು ತಿಂಗಳ ಹಿಂದೆ ದೇವಿಕಾ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಶಾಂತಿ, ಮನೆಯೊಡತಿ ಅಲ್ಮೆರಾದ ಕೀ ಇಡುವ ಜಾಗವನ್ನು ನೋಡಿಕೊಂಡಿ ದ್ದಳು. ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆ ಕೀ ಬಳಸಿ ಸರಗಳನ್ನು ದೋಚಿದ್ದ ಆಕೆ, ಶಿವಾಜಿನಗರದ ಅಂಗಡಿಯೊಂದರಲ್ಲಿ ಅವೇ ಮಾದರಿಯ ಮೂರು ನಕಲಿ ಸರಗಳನ್ನು ಮಾಡಿಸಿ ಅವುಗಳನ್ನು ಅಲ್ಮೆರಾದಲ್ಲಿ ಇಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳ ಬಳಿಕ ದೇವಿಕಾ ಸರ ಹಾಕಿಕೊಂಡು ಸ್ನೇಹಿತೆಯ ಮನೆಗೆ ಪೂಜೆಗೆ ಹೋಗಿದ್ದಾಗ, ‘ಯಾಕೆ ಆರ್ಟಿಫಿಷಿಯಲ್ ಸರ ಹಾಕಿಕೊಂಡು ಬಂದಿದ್ದೀಯಾ’ ಎಂದು ಸ್ನೇಹಿತೆ ಕೇಳಿದ್ದಳು.

ಆ ನಂತರ ಸರವನ್ನು ಸೂಕ್ಷ್ಮವಾಗಿ ಗಮನಿಸಿದ್ದ ದೇವಿಕಾ, ಸಂಶಯದ ಮೇಲೆ ಆಭರಣ ವ್ಯಾಪಾರಿಯೊಬ್ಬರ ಬಳಿ ಪರಿಶೀಲನೆ ಮಾಡಿಸಿದ್ದರು. ಅದು ನಕಲಿ ಎಂಬುದು ಆಗ ಅರಿವಿಗೆ ಬಂದಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಅವರು, ಕುಟುಂಬ ಸದಸ್ಯರಿಗೂ ವಿಷಯ ತಿಳಿಸದೆ ಸುಮ್ಮನಾಗಿದ್ದರು. ಆ ನಂತರ ಅದನ್ನು ಅಲ್ಮೆರಾದಲ್ಲೇ ಇಟ್ಟು, ಬೇರೆ ಸರ ಹಾಕಿಕೊಂಡಿದ್ದರು.

ಇತ್ತೀಚೆಗೆ ವಾಯುವಿಹಾರಕ್ಕೆ ಹೋಗಿದ್ದಾಗ ಇನ್ನೊಬ್ಬ ಗೆಳತಿ ಆ ಸರದ ಗುಣಮಟ್ಟವನ್ನೂ ಪ್ರಶ್ನೆ ಮಾಡಿದ್ದರು. ಅದೂ ನಕಲಿಯಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ದೇವಿಕಾ ಮನೆಗೆ ಹೋಗಿ ಇನ್ನೊಂದು ಸರವನ್ನೂ ಪರಿಶೀಲಿಸಿದ್ದರು. ಎಲ್ಲ ಆಭರಣವೂ ಬದಲಾವಣೆ ಆಗಿದ್ದರಿಂದ ಕೋರಮಂಗಲ ಠಾಣೆಯ ಮೆಟ್ಟಿಲೇರಿದ್ದರು. ಅಲ್ಲದೇ, ಮನೆಗೆಲಸದಾಕೆ ಶಾಂತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

‘ಶಾಂತಿಯ ಪೂರ್ವಾಪರ ಪರಿಶೀಲಿಸಿದಾಗ ಆಕೆ ಹಿಂದೆ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಸಂಗತಿ ಗೊತ್ತಾಯಿತು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಳು. ಆ ಸರಗಳನ್ನು ಆಭರಣ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಶಾಪಿಂಗ್ ಮಾಡಿದ್ದಳು. ಪ್ರಿಯಕರನೊಂದಿಗೆ ಆರು ಬಾರಿ ಪಬ್‌ಗೂ ಹೋಗಿದ್ದಳು’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !