ಶುಕ್ರವಾರ, ಏಪ್ರಿಲ್ 10, 2020
19 °C

ಕನ್ನಡಾಭಿಮಾನಿ ಶಾಂತ ಕವಿ

ಡಾ.ಎಸ್.ಪಿ. ಗೌಡರ Updated:

ಅಕ್ಷರ ಗಾತ್ರ : | |

Deccan Herald

‘ಎಲ್ಲಿರವುದಭಿಮಾನ ಕನ್ನಡಿಗರೇ ಪೇಳಿ
ಸುಳ್ಳೆ ಬಡಬಡಿಸುವಿರಿ ಸಭೆಗಳಲಿ’

 ಹೀಗೆ ಕನ್ನಡಿಗರನ್ನು ಬಡಿದ್ದೆಬ್ಬಿಸಿದ ಶಾಂತ ಕವಿ ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದ ಪ್ರಮುಖ ಕವಿ. ಕರ್ನಾಟಕ ಏಕೀಕರಣದ ಹಂಬಲವನ್ನು ಬಿತ್ತಿದ ಹಿರಿಯರಲ್ಲಿ ಅವರೂ ಒಬ್ಬರು. ಮರಾಠಿ ಹಾಗೂ ಉರ್ದುಮಯವಾಗಿದ್ದ ಉತ್ತರ ಕರ್ನಾಟಕದಲ್ಲಿ ಕನ್ನಡದ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

‘ಶಾಂತ ಕವಿ’ ಕಾವ್ಯನಾಮದಿಂದ ಪ್ರಸಿದ್ಧರಾದ ಬಾಳಾಚಾರ್ಯ ಗೋಪಾಳಾಚಾರ್ಯ ಸಕ್ಕರಿ ಅವರದು  ಹಾವೇರಿ ಜಿಲ್ಲೆಯ ಸಾತೇನಹಳ್ಳಿ. ತಮ್ಮ ನಾಟಕ ಹಾಗೂ ಕೀರ್ತನೆಗಳ ಮೂಲಕ ರಾಷ್ಟ್ರೀಯ ಪ್ರಜ್ಞೆ ಮತ್ತು ಕರ್ನಾಟಕತ್ವದ ಬಗ್ಗೆ ಜಾಗೃತಿ ಮೂಡಿಸಿದರು. ವಸಾಹತುಶಾಹಿ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ತೋರುವ ನಿರಾಶಾಭಾವನೆ, ಕನ್ನಡ- ಕನ್ನಡಿಗರ ಬಗೆಗೆ ಇದ್ದ ಮರಾಠೀಯ ಅಸಹನೀಯ ವಾತಾವರಣದಿಂದ ಸಿಡಿದೆದ್ದು, ಶಾಂತ ಕವಿ ಕನ್ನಡಿಗರ ತೇಜೊಹೀನ ಸ್ಥಿತಿಯ ವಿರುದ್ಧ ಬಂಡಾಯದ ದನಿ ಎತ್ತಿದರು.

ಕನ್ನಡ ಇವರ ಬದುಕಿನ ಉಸಿರಾಯಿತು. ಬಾಳಿನ ದಿವ್ಯ ಮಂತ್ರವಾಯಿತು. ಅಂದು ಕನ್ನಡ ಭಾಷೆ ಎದುರಿಸುತ್ತಿದ್ದ ಸಂಕಟದ ಸ್ಥಿತಿಗೆ ಎದೆಗೊಟ್ಟು ನಿಂತರು. ‘ವಿದ್ಯಾರಣ್ಯ ವಿಜಯ’ ಕಥೆಯನ್ನು ಊರೂರಲ್ಲಿ ಕೀರ್ತನೆ ಮಾಡುತ್ತಾ ಸಾಗಿದರು.

ಸಹಜವಾಗಿಯೇ ಜನರಲ್ಲಿ ಕನ್ನಡಾಭಿಮಾನ ಬೆಳೆಯಿತು ಎನ್ನುವ ವಿಷಯವನ್ನು ಪ್ರಕಾಶಕರಾದ ಆಲೂರು ವೆಂಕಟರಾಯರು ಈ ಕೃತಿಯ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಪುಸ್ತಕದಲ್ಲಿ ಪ್ರಕಟವಾದ ‘ರಕ್ಷಿಸು ಕರ್ನಾಟಕ ದೇವಿ’ ಎಂಬ ಹಾಡು ಮುಂದಿನ ಎರಡು ದಶಕಗಳ ಕಾಲ ಮುಂಬೈ ಕರ್ನಾಟಕದಲ್ಲಿ ನಾಡಗೀತೆಯಾಗಿತ್ತು.

‘ಶಾಂತವಿಠ್ಠಲ’, ‘ಶಾಂತೇಶ ವಿಠ್ಠಲ’ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಶುದ್ಧವಾದ ಕನ್ನಡ ಕೀರ್ತನೆಗಳನ್ನು ಬರೆದ ಪ್ರಥಮರೆಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇದೇ ಗ್ರಾಮದ ಆರಾಧ್ಯದೈವ ಶಾಂತೇಶ ಇವರ ಕುಲದೈವವಾಗಿದ್ದು, ತಮ್ಮ ಹೆಸರನ್ನು ‘ಶಾಂತಕವಿ’ ಎಂದು ಕರೆದುಕೊಂಡಿದ್ದಾಗಿ ಇವರ ‘ಮುಕುಂದ ದಾನಮೃತ’ ಕೀರ್ತನೆಯಿಂದ ತಿಳಿದುಬರುತ್ತದೆ.

ಪಂಡಿತ ಮನೆತನದಲ್ಲಿ ಜನಿಸಿದ ಅವರು  ಬಾಲ್ಯದಲ್ಲಿ ಸಂಸ್ಕೃತ ಕಾವ್ಯ, ನಾಟಕಗಳ ಅಭ್ಯಾಸ ಮಾಡಿದರು. ಇವರು ತಮ್ಮ ಆರನೆಯ ವಯಸ್ಸಿನಲ್ಲಿ ಅಯ್ಯನವರ ಪಾಠ ಶಾಲೆ ಸೇರಿ, ಕನ್ನಡ ಭಾಷೆ, ಸಾಹಿತ್ಯದ ಸಂಸ್ಕಾರ ಪಡೆದರು. ಏಳನೆಯ ವಯಸ್ಸಿಗೆ ಹಳಗನ್ನಡ ಗ್ರಂಥ, ಛಂದಸ್ಸು, ವ್ಯಾಕರಣದ ಅಭ್ಯಾಸ ಮಾಡಿದರು. ಮುಲ್ಕಿ ಪರೀಕ್ಷೆ (ಏಳನೆಯ ಇಯತ್ತೆ) ಪಾಸು ಮಾಡಿ 1872ರಲ್ಲಿ ರಾಣೇಬೆನ್ನೂರಿನ ಕನ್ನಡ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಬಾಳಾಚಾರ್ಯರು ಹಾವೇರಿ, ಅಗಡಿ, ಧಾರವಾಡ, ಕೋಳಿವಾಡ ಹಾಗೂ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇಂದು ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನಕ್ಕಾಗಿ ಸರ್ಕಾರದ ಕಡೆಗೆ ನಾವು ಕೈಚಾಚುತ್ತೇವೆ. ಆದರೆ, 1918ರ ಮೇ ತಿಂಗಳಲ್ಲಿ ವಿದ್ವನ್ಮಣಿ ಆರ್. ನರಸಿಂಹಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗಿತ್ತು. ಸಮ್ಮೇಳನ ನಡೆಯದ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಶಾಂತ ಕವಿ ಕಾಲಿಗೆ ಗೆಜ್ಜೆ ಕಟ್ಟಿ, ಜೋಳಿಗೆ ಹಾಕಿ ತಾವೇ ರಚಿಸಿದ 

‘ಬೇಡಲು ಕನ್ನಡ ದಾಸಯ್ಯ ಬಂದಿಹ
ನೀಡಿರಮ್ಮಾ ತಡಮಾಡದಲೇ IIಪII
ಹಾಡೊಂದನಾತನು ಹೊಸದಾಗೆ ಮಾಡಿಹ
ಕೂಡಿರಿ,ಕೇಳಿರಿ ಹಾಡುವನು...’

ಈ ಹಾಡನ್ನು ಹಾಡುತ್ತಾ ಕನ್ನಡ ದಾಸಯ್ಯರಾಗಿ ಊರೂರು ಸುತ್ತಾಡಿ ಕನ್ನಡ ಕೆಲಸಕ್ಕಾಗಿ ಧನ ಸಂಗ್ರಹ ಮಾಡಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಆ ಮೂಲಕ ಜನಜಾಗೃತಿ ಮೂಡಿಸುವುದರೊಂದಿಗೆ ಕನ್ನಡದ ಕಂಪನ್ನು ಬೀರಿದರು.

ಶಾಂತ ಕವಿ ಆರಂಭಿಸಿದ ಗದುಗಿನ ಶ್ರೀವೀರನಾರಾಯಣ ಪ್ರಸಾದಿತ ಕೃತಪುರ ಕರ್ನಾಟಕ ನಾಟಕ ಮಂಡಳಿ (1877-1893) ಕನ್ನಡ ವೃತ್ತಿ ರಂಗಭೂಮಿಯನ್ನು ಆರಂಭಿಸಿದ ಮೊದಲ ಸಂಸ್ಥೆ. ಇಲ್ಲಿ ಮರಾಠಿ ನಾಟಕಗಳ ಮೇಲಾಟವನ್ನು ಎದುರಿಸಿದ ಅವರು ಮೂವತ್ತೈದಕ್ಕೂ ಹೆಚ್ಚು ಸ್ವತಂತ್ರ ಕನ್ನಡ ನಾಟಕಗಳನ್ನು ರಚಿಸಿದರು. ಕೆಲವನ್ನು ತಾವೇ ಕಲಿಸಿ, ಆಡಿಸಿ ಜನಪ್ರಿಯಗೊಳಿಸಿದರು.

‘ಆನಂದ ಲಹರಿ’, ‘ಋತು ಸಂಹಾರ’, ‘ಪುಷ್ಪಬಾಣ ವಿಲಾಸ’, ‘ಗಜೇಂದ್ರ ಮೋಕ್ಷ’, ‘ಗಿರಿಜಾ ಕಲ್ಯಾಣ’ ‘ಚಂದ್ರಾವಳಿ ಚರಿತೆ, ‘ಜರಾಸಂದ ವಧ’ ‘ಹರಿಶ್ಚಂದ್ರ ಸತ್ವ ಪರೀಕ್ಷಾ ಭಾಗ 1- 2’, ‘ರತಿ ಕಲ್ಯಾಣ’ ಸೇರಿದಂತೆ ಅರವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಶಾಂತ ಕವಿಗೆ ದ.ರಾ. ಬೇಂದ್ರೆ ಅವರು ‘ವಿಶ್ರಾಂತಿ’ ಎನ್ನುವ ಕವನ ರಚಿಸುವ ಮೂಲಕ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕನ್ನಡ ರಂಗಭೂಮಿ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿ. ಇವರ ‘ಉಷಾಹರಣ’(1877) ನಾಟಕ, ಕನ್ನಡದ ಮೊಟ್ಟ ಮೊದಲ ಸ್ವತಂತ್ರ ನಾಟಕವಾಗಿದೆ. ಕನ್ನಡ ರಂಗಭೂಮಿಯಲ್ಲಿ ಪ್ರದರ್ಶನಗೊಂಡ ಮೊದಲ ನಾಟಕವೂ ಹೌದು. ಒಂದೂವರೆ ಶತಮಾನದ ನಂತರ ಇತ್ತೀಚೆಗೆ ಹಾವೇರಿ ಶೇಷಗಿರಿ ಕಲಾ ತಂಡದವರಿಂದ ‘ಉಷಾಹರಣ’ ನಾಟಕ ನಾಡಿನ ವಿವಿಧೆಡೆ ಪ್ರಯೋಗ ಕಂಡಿದೆ. ⇒v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)