ಶನಿವಾರ, ಸೆಪ್ಟೆಂಬರ್ 19, 2020
27 °C
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ವಿವಿಧ ಸಾಲ ಮನ್ನಾಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಗುರುವಾರ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಎಪಿಎಂಸಿಯಿಂದ ಜಿಲ್ಲಾಡಳಿತ ಭವನದ ವರೆಗೆ ಬೈಕ್ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಘಟಕ ಸದಸ್ಯ ನಾರಾಯಣರೆಡ್ಡಿ ಮಾತನಾಡಿ, ‘ಚಳಿಗಾಳಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ರೈತರ ವಿವಿಧ ಸಮಸ್ಯೆಗಳನ್ನು ಸರ್ಕಾರ ಆದ್ಯತೆ ಮೆರೆಗೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

‘ಹಣ್ಣು ಮತ್ತು ಹೂವು ರಫ್ತಿಗೆ ವಿದೇಶಿ ಮಾರುಕಟ್ಟೆ ಸ್ಥಾಪಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು. ಬೆಲೆ ಕುಸಿದಾಗ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಬೇಕು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು. ಉದ್ಯೋಗ ಖಾತ್ರಿಯಲ್ಲಿ ಸಿಗುವ ಎಲ್ಲಾ ಸವಲತ್ತುಗಳನ್ನು ತಾರತಮ್ಯವಿಲ್ಲದೆ ಎಲ್ಲಾ ರೈತರಿಗೆ ನೀಡಬೇಕು’ ಎಂದು ತಿಳಿಸಿದರು.

‘ಸರ್ಕಾರಿ ಇಲಾಖೆಗಳಾದ ಕಂದಾಯ, ಸರ್ವೆ, ವಿದ್ಯುತ್, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳಲ್ಲಿ ರೈತರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಈ ಇಲಾಖೆಯಲ್ಲಿ ಸರ್ಕಾರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸರ್ವೆ ಕಾರ್ಯ ವಿಳಂಬ ನೀತಿ ಕೈಬಿಡಬೇಕು. ಜಿಲ್ಲೆಯನ್ನು ಶೀಘ್ರವಾಗಿ ಪೋಡಿ ಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಅಗಲಗುರ್ಕಿ ಕೃಷ್ಣಪ್ಪ, ‘ರೈತರಿಗೆ ಕೀಟನಾಶಕಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮಾರುಕಟ್ಟೆ ಜಾಲ ಅಭಿವೃದ್ಧಿಪಡಿಸಿ ಉಗ್ರಾಣ ವ್ಯವಸ್ಥೆ ಮಾಡಬೇಕು. ದ್ರಾಕ್ಷಿ ಮಾರುಕಟ್ಟೆ ಸ್ಥಾಪಿಸಬೇಕು. ಬರ ಕಳೆಯುವವರೆಗೂ ಕುಡಿಯುವ ನೀರು, ಮೇವಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಕೃಷಿ ಸಮಸ್ಯೆಗಳನ್ನು ಅಧ್ಯಯನ ಮಾಡಿ ಶಾಶ್ವತ ಪರಿಹಾರ ರೂಪಿಸಬೇಕು’ ಎಂದರು.

‘ಜಿಲ್ಲೆಯಲ್ಲಿ 1.30 ಲಕ್ಷ ರೇಷ್ಮೆ ಬೆಳೆಗಾರರಿದ್ದಾರೆ. 3000 ರೀಲರ್‌ಗಳಿದ್ದಾರೆ. ಆದ್ದರಿಂದ ಇಲ್ಲಿ ತರಬೇತಿ ಕೇಂದ್ರ ತೆರೆಯಬೇಕು. ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ಹೂವು, ತರಕಾರಿ ಆವಕ ಬರುತ್ತಿರುವುದರಿಂದ ಮಾರಾಟಕ್ಕೆ ಪ್ರಾಂಗಣ ಸಾಲುತ್ತಿಲ್ಲ. ಆದ್ದರಿಂದ ಮಾರುಕಟ್ಟೆ ವಿಸ್ತರಣೆ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಬೂದಾಳ ರಾಮಾಂಜಿನಪ್ಪ, ‘ಫಸಲ್ ಬಿಮಾ ಯೋಜನೆಗೆ ಅಗತ್ಯ ತಿದ್ದುಪಡಿ ತಂದು ಮುಂದಿನ ವರ್ಷ ಮುಂಗಾರಿಗೆ ಮುಂಚೆ ವ್ಯಾಪಕ ಪ್ರಚಾರ ನೀಡಬೇಕು. ಕೆರೆಗಳಿಗೆ ಕೊಳಚೆ ನೀರು ಹರಿಸಿದರೆ ರೇಷ್ಮೆ ಗುಣಮಟ್ಟ ಕಳೆದುಕೊಳ್ಳುತ್ತದೆ. ಆದ್ದರಿಂದ ಶುದ್ಧ ನೀರನ್ನು ಮಾತ್ರ ಕೆರೆಗಳಿಗೆ ಹರಿಸಬೇಕು. ಕೆರೆಗಳ ಹೂಳು ತೆಗೆಸಲು, ಗೋಮಾಳ ಮತ್ತು ಗುಂಡುತೋಪುಗಳಲ್ಲಿ ಮರಗಳನ್ನು ಬೆಳೆಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ರವಿರಾಜ್, ವೆಂಕಟರೆಡ್ಡಿ, ಸೋಮಣ್ಣ, ವೇಣುಗೋಪಾಲ್ ರೆಡ್ಡಿ, ನಾಗೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು