153 ಎಲ್‌ಪಿಜಿ ಸಿಲಿಂಡರ್‌ ವಶ: ಇಬ್ಬರು ಆರೋಪಿಗಳ ಬಂಧನ

7

153 ಎಲ್‌ಪಿಜಿ ಸಿಲಿಂಡರ್‌ ವಶ: ಇಬ್ಬರು ಆರೋಪಿಗಳ ಬಂಧನ

Published:
Updated:
Deccan Herald

ಮಂಗಳೂರು: ಗೃಹ ಬಳಕೆಗಾಗಿ ರಿಯಾಯ್ತಿ ದರದಲ್ಲಿ ಪೂರೈಕೆಯಾಗುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಮರುಭರ್ತಿ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು, 17 ತುಂಬಿರುವ ಸಿಲಿಂಡರ್‌ ಸೇರಿದಂತೆ ಒಟ್ಟು 153 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಮರುಭರ್ತಿ ಮತ್ತು ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಶನಿವಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಬೋಳಾರ ಮಾರಿಗುಡಿ ಸಮೀಪದ ನಿವಾಸಿ ಪ್ರಶಾಂತ್‌ (42) ಮತ್ತು ಬಿ.ಸಿ.ರೋಡ್‌ ಕೈಕಂಬ ಮದ್ವ ನಿವಾಸಿ ಸದಾಶಿವ ರೈ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಹರೀಶ್‌ ಮತ್ತು ಕೂಸಪ್ಪ ಎಂಬುವವರು ಪರಾರಿಯಾಗಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ತಿಳಿಸಿದ್ದಾರೆ.

ಬೋಳಾರ ಹಾಗೂ ಜೆಪ್ಪು ಮಾರುಕಟ್ಟೆ ಪರಿಸರದಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಂದ ಪೂರೈಕೆಯಾಗುವ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‍ಗಳಿಂದ ಇತರ ಸಿಲಿಂಡರ್‍ಗಳಿಗೆ ಅಕ್ರಮವಾಗಿ ಮರುಭರ್ತಿ ಮಾಡಿ, ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಎರಡೂ ಕಡೆ ದಾಳಿಮಾಡಿ ಶೋಧ ನಡೆಸಿದಾಗ 153 ಸಿಲಿಂಡರ್‌ಗಳು ಪತ್ತೆಯಾಗಿವೆ. ಮರುಭರ್ತಿ ಪಂಪ್‌, ಪಿಕ್‌ ಅಪ್‌ ವಾಹನ, ಗೂಡ್ಸ್‌ ಟೆಂಪೊ ಸೇರಿದಂತೆ ₹ 6.44 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮತ್ತು ಸ್ವತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ನಿರ್ದೇಶನದಂತೆ ಸಿಸಿಬಿ ಇನ್‍ಸ್ಪೆಕ್ಟರ್ ಶಾಂತಾರಾಮ, ಸಬ್ ಇನ್‌ಸ್ಪೆಕ್ಟರ್‌ಗಳಾದ ಶ್ಯಾಮ್‌ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಮತ್ತು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ಸಬ್ ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ, ಮಂಜುಳಾ ಮತ್ತು ಸಿಬ್ಬಂದಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕಿ ಕಮಲಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !