ಸತೀಶ ಜಾರಕಿಹೊಳಿ ಸಿಎಂ ಆಗಬಾರದೇಕೆ; ಸಿದ್ದರಾಮಯ್ಯ ಪ್ರಶ್ನೆ
ಬಾಗಲಕೋಟೆ: ‘ಸತೀಶ ಜಾರಕಿಹೊಳಿ ಏಕೆ ಮುಖ್ಯಮಂತ್ರಿ ಆಗಬಾರದು. ಯಾರೋ ಒಬ್ಬರು ಗೂಟ ಹೊಡೆದುಕೊಂಡು ಕೂರುವುದಲ್ಲ. ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವನು.. ಹೌದು ಅವನೂ ಒಂದು ಸಾರಿ ಸಿಎಂ ಆಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಬುಧವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನೆರೆದವರಲ್ಲಿ ಕೆಲವರು ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಕೂಗಿದರು. ಆಗ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ತಾವೂ ಅದಕ್ಕೆ ದನಿಗೂಡಿಸಿದರು.
‘ಸಾಮಾಜಿಕ ನ್ಯಾಯದ ರಥವನ್ನು ಕಷ್ಟಪಟ್ಟು ನಾನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ನಿಮ್ಮ ಕೈಯಲ್ಲಿ ಆದರೆ ಮುಂದಕ್ಕೆ ಎಳೆಯಿರಿ. ಎಳೆಯಲು ಆಗದಿದ್ದರೆ ಅಲ್ಲಿಯೇ ಬಿಡಿ. ಯಾರದ್ದೋ ಮಾತು ಕೇಳಿಕೊಂಡು ಹಿಂದಕ್ಕೆ ಮಾತ್ರ ಎಳೆಯಬೇಡಿ. ಚಕ್ರ ಮುಂದಕ್ಕೆ ಉರುಳಬೇಕು ಹೊರತು ನಿಲ್ಲಬಾರದು’ ಎಂದು ಮಾರ್ಮಿಕವಾಗಿ ಹೇಳಿದರು.
ನಂತರ ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ಎಲ್ಲ ಸಮಾಜದವರಿಗೂ ಅವಕಾಶ ಬಂದೇ ಬರುತ್ತದೆ. ನಾವು ಕಾಯಬೇಕು. ಮುಂದಿನ ದಿನಗಳಲ್ಲಿ ನೋಡೋಣ’ ಎಂದರು.
‘ಸಚಿವ ಸ್ಥಾನ ಪಡೆದೇ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು ಎಂದೇನಿಲ್ಲ. ಅದು ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿ ಇದೆ. ಸಂಪುಟದಿಂದ ರಮೇಶ ಜಾರಕಿಹೊಳಿ ಕೈ ಬಿಡುವ ವಿಚಾರ ನನಗಂತೂ ಗೊತ್ತಿಲ್ಲ. ಡಿಸೆಂಬರ್ 22ರವರೆಗೆ ಕಾದು ನೋಡಬೇಕಷ್ಟೇ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸತೀಶ ಪ್ರತಿಕ್ರಿಯಿಸಿದರು.
‘ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಅದು ನಮ್ಮ ಬೆಂಬಲಿಗರ ವಿಚಾರ. ಆದರೆ ಸಚಿವ ಸ್ಥಾನ ಕೊಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದ ಸತೀಶ ಜಾರಕಿಹೊಳಿ, ಸಂಪುಟ ವಿಸ್ತರಣೆಯಾದರೆ ಕೆಟ್ಟದ್ದಂತೂ ಆಗೊಲ್ಲ. ಒಳ್ಳೆಯದೇ ಆಗುತ್ತದೆ. ಖಂಡಿತವಾಗಿಯೂ ಸರ್ಕಾರ ಸುಭದ್ರವಾಗಿರುತ್ತದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.