ಎರಡು ದಿನ ಭಾರತ ಬಂದ್‌: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸೇವೆ ಇಲ್ಲ

6

ಎರಡು ದಿನ ಭಾರತ ಬಂದ್‌: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸೇವೆ ಇಲ್ಲ

Published:
Updated:

ಮಂಡ್ಯ: ‘ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ಸಾರಿಗೆ ಬಸ್‌ ಸೇವೆ ಇರುವುದಿಲ್ಲ ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಸ್ಪಷ್ಟಪಡಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಐದಾರು ಸಾರಿಗೆ ಬಸ್‌ಗಳಿಗೆ ಹಾನಿಯುಂಟಾಗಿದೆ. ಹೀಗಾಗಿ ಬಂದ್‌ ವೇಳೆ ಸಾರಿಗೆ ಬಸ್‌ ಓಡಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರು ಅವಕಾಶ ನೀಡಿದರೆ ಮಾತ್ರ ಬಸ್‌ ಬಿಡಲಾಗುವುದು. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. 

ಎರಡು ದಿನ ಭಾರತ ಬಂದ್

ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಸಾರಿಗೆ ಇಲಾಖೆಯ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಭಾರತ ಬಂದ್‌ಗೆ ಕರೆ ನೀಡಿವೆ. ಎರಡು ದಿನ ರಾಜ್ಯದಾದ್ಯಂತ ಸರ್ಕಾರಿ ಬಸ್‌ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಉಪಾಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.

ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತಾ ಕಾಯ್ದೆ ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಟ್ರೇಡ್‌ ಯೂನಿಯನ್‌, ಇಂಡಿಯನ್ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಶಾಲಾ–ಕಾಲೇಜುಗಳಿಗೆ ರಜೆ?

ಆಯಾ ಜಿಲ್ಲೆಗಳಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಅಲ್ಲಿನ ಜಿಲ್ಲಾಧಿಕಾರಿಗಳು ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್‌ ತಿಳಿಸಿದರು. 

ಟ್ಯಾಕ್ಸಿ ಸೇವೆ ಇದೆ

ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ನಾಳೆ ಸೇವೆ ಒದಗಿಸಲಿವೆ. ‘ಮುಷ್ಕರಕ್ಕೆ ನೈತಿಕ ಬೆಂಬಲವಷ್ಟೇ ನೀಡಿದ್ದೇವೆ. ಟ್ಯಾಕ್ಸಿ/ಕ್ಯಾಬ್‌ಗಳ ಓಡಾಟ ನಡೆಸಲಿವೆ‘ ಓಲಾ, ಉಬರ್‌ ಕ್ಯಾಬ್‌ ಚಾಲಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್‌ ಪಾಷ ತಿಳಿಸಿದರು. ಅಂಬುಲೆನ್ಸ್‌, ಮೆಟ್ರೊ, ರೈಲು ಎಂದಿನಂತೆ ಇರಲಿದೆ.

ಮುಷ್ಕರಕ್ಕೆ ಆಟೊ ಚಾಲಕರ ಬೆಂಬಲವಿಲ್ಲ

ಮುಷ್ಕರಕ್ಕೆ ಬೆಂಗಳೂರು ಆಟೊ ಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ಬೆಂಬಲ ಸೂಚಿಸಿಲ್ಲ. ಈ ಒಕ್ಕೂಟದಲ್ಲಿ ಒಟ್ಟು 12 ಸಂಘಟನೆಗಳಿದ್ದು, 1 ಲಕ್ಷಕ್ಕೂ ಹೆಚ್ಚು ಆಟೊ ಚಾಲಕರು ಇದ್ದಾರೆ.

‘ಚಾಲಕರ ಬೇಡಿಕೆಗಳನ್ನು ನೆಪ ಮಾಡಿಕೊಂಡು ರಾಜಕೀಯ ದುರುದ್ದೇಶದಿಂದ ಬಂದ್‌ಗೆ ಕರೆ ನೀಡಿದ್ದಾರೆ. ಇದೊಂದು ಕೆಟ್ಟ ಬೆಳವಣಿಗೆ. ಇದರಿಂದ ಚಾಲಕರ ಎರಡು ದಿನದ ದುಡಿಮೆ ಹಾಳಾಗುತ್ತದೆ. ಹಾಗಾಗಿ ಮುಷ್ಕರಕ್ಕೆ ನಾವು ಬೆಂಬಲ ಸೂಚಿಸಿಲ್ಲ. ನಮ್ಮ ಒಕ್ಕೂಟದಲ್ಲಿ ನೋಂದಣಿಯಾಗಿರುವ ಆಟೊ ಚಾಲಕರು ಎಂದಿನಂತೆ ಸೇವೆ ನೀಡಲಿದ್ದಾರೆ. ಕಾರ್ಮಿಕರ ಸಂಘಟನೆಗಳಿಗೂ ನಮಗೂ ಸಂಬಂಧವಿಲ್ಲ. ನಮ್ಮ ಮೇಲೆ ಅಹಿತಕರ ಘಟನೆಗಳು ಸಂಭವಿಸಿದರೆ ಕಾರ್ಮಿಕ ಸಂಘಟನೆಗಳ ಮೇಲೆ ದೂರು ನೀಡುತ್ತೇವೆ’ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಸ್ಪಷ್ಟಪಡಿಸಿದರು.

ಕವಿವಿ ಪರೀಕ್ಷೆಗಳು ಮುಂದಕ್ಕೆ

ಹುಬ್ಬಳ್ಳಿ: ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕ ‌ವಿಶ್ವವಿದ್ಯಾಲಯ ಜ.8 ಮತ್ತು 9ರಂದು ನಡೆಸಬೇಕಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಎಂ.ಎ., ಎಂ.ಎಸ್ಸಿ ಹಾಗೂ ಎಂ.ಕಾಂ. ಪರೀಕ್ಷೆಗಳನ್ನು ಜ.17-18ರಂದು ನಡೆಸಲಾಗುವುದು ಎಂದು ಕರ್ನಾಟಕ ‌ವಿ.ವಿ. ಮೌಲ್ಯಮಾಪನ ‌ಕುಲಸಚಿವ ನಾರಾಯಣ ಸಾಲಿ ಪ್ರಜಾವಾಣಿಗೆ ತಿಳಿಸಿದರು.

ಪರಿಸ್ಥಿತಿ ಅವಲೋಕಿಸಿ ಆಯಾ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.  ಹೋಟೆಲ್‌ ಮಾಲೀಕರ ಸಂಘಟನೆ ತನ್ನ ನಿರ್ಧಾರ ಸ್ಪಷ್ಟಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 26

  Happy
 • 4

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !