ರಾಹುಲ್ –ಹಾರ್ದಿಕ್‌ಗೆ ಕಹಿಯಾದ ‘ಕಾಫಿ’

7
ಮಹಿಳೆಯರ ಕುರಿತ ಕೀಳುಮಟ್ಟದ ಹೇಳಿಕೆ; ಬಿಸಿಸಿಐನಿಂದ ನೋಟಿಸ್

ರಾಹುಲ್ –ಹಾರ್ದಿಕ್‌ಗೆ ಕಹಿಯಾದ ‘ಕಾಫಿ’

Published:
Updated:

ಸಿಡ್ನಿ/ನವದೆಹಲಿ: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರಿಗೆ ಬುಧವಾರ ಕ್ರಿಕೆಟ್ ಆಡಳಿತ ಸಮಿತಿಯು ಶೋಕಾಸ್ ನೋಟಿಸ್ ನೀಡಿದೆ.

ನೋಟಿಸ್ ಕೈಸೇರಿದ 24 ಗಂಟೆಯೊಳಗೆ ಉತ್ತರಿಸುವಂತೆ ತಾಕೀತು ಮಾಡಿದೆ.

ಬಾಲಿವುಡ್ ನಿರ್ದೇಶಕ ಕರಣ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ರಾಹುಲ್ ಮತ್ತು ಹಾರ್ದಿಕ್ ಭಾಗವಹಿಸಿದ್ದರು. ಅದರಲ್ಲಿ ಅವರು ನೀಡಿದ್ದ ಹೇಳಿಕೆಯು ಟೀಕೆಗೊಳಗಾಗಿತ್ತು. ಕಾರ್ಯಕ್ರಮದ ನಂತರ ಹಾರ್ದಿಕ್, ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದರು. ಆದರೆ ರಾಹುಲ್ ಯಾವುದ ಪ್ರತಿಕ್ರಿಯೆ ನೀಡಿರಲಿಲ್ಲ.

‘ಇಬ್ಬರೂ ಆಟಗಾರರಿಗೆ ಶೋಕಾಸ್ ನೋಟಿಸ್ ಕಳಿಸಿದ್ದೇವೆ. ಉತ್ತರ ನೀಡಲು  24 ಗಂಟೆಗಳ ಸಮಯ ನೀಡಲಾಗಿದೆ’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

ಶೋಗಳಲ್ಲಿ ಭಾಗವಹಿಸಲು ನಿರ್ಬಂಧ?
ಕ್ರಿಕೆಟ್‌ ಸಂಬಂಧವಿಲ್ಲದ  ರಿಯಾಲಿಟಿ ಶೋ, ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಆಟಗಾರರಿಗೆ ನಿರ್ಬಂಧ ಹೇರಲು ಬಿಸಿಸಿಐ ಚಿಂತನೆ ನಡೆಸಿದೆ.

‘ರಾಹುಲ್ ಮತ್ತು ಪಾಂಡ್ಯ ಪ್ರಕರಣವನ್ನು ಮಂಡಳಿಯು ಗಂಭೀರವಾಗಿ ಪರಿಗಣಿಸಿದೆ.  ಆಟಗಾರರು ಕ್ರಿಕೆಟ್‌ಗೆ ಸಂಬಂಧವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲವೆಂಬ ನಿಯಮವನ್ನು ತರವುದು ಸೂಕ್ತ ಎನಿಸುತ್ತಿದೆ’ಎಂದು ಮಂಡಳಿಯ ಮೂಲಗಳು ತಿಳಿಸಿವೆ.

 ಗಾಯದ ಕಾರಣದಿಂದ ಹಾರ್ದಿಕ್ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿರಲಿಲ್ಲ. ಚೇತರಿಸಿಕೊಂಡ ನಂತರ ಅವರು ಹೋದ ತಿಂಗಳು ತಂಡಕ್ಕೆ ಮರಳಿದ್ದರು. ಆದರೆ, ಮೆಲ್ಬರ್ನ್‌ ಮತ್ತು ಸಿಡ್ನಿ ಟೆಸ್ಟ್‌ಗಳಲ್ಲಿ ಅವರಿಗೆ  ಆಡುವ ಅವಕಾಶ ಸಿಕ್ಕಿರಲಿಲ್ಲ. ರಾಹುಲ್ ಅವರು ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ, ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಇದೇ 12ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಇಬ್ಬರೂ ಆಡಲಿದ್ದಾರೆ.

ಕಿಡಿ ಹೊತ್ತಿಸಿದ ಮಾತುಗಳ ಸರಣಿ...
ನವದೆಹಲಿ:
‘ನನ್ನ ಮೊದಲ ಲೈಂಗಿಕ ಅನುಭವದ ಕುರಿತು ನನ್ನ ಕುಟುಂಬದೊಂದಿಗೆ ಹೇಳಿಕೊಂಡಿದ್ದೆ. ಇದೆಲ್ಲ ಸಹಜ (ಕೂಲ್). ನನ್ನ ಕುಟುಂಬ ಬಹಳ ಉದಾರ ಮನೋಭಾವದ್ದು. ಒಮ್ಮೆ ಪಾರ್ಟಿಯೊಂದರಲ್ಲಿ ನನ್ನ ನೆಚ್ಚಿನ ಹುಡುಗಿ ಯಾರು ಎಂದು ನನ್ನ ಪಾಲಕರು ಕೇಳಿದ್ದರು. ಆಗ ನಾನು ಆಕೆ, ಆಕೆ, ಆಕೆ.. ಎಂದು ಹೆಣ್ಣುಮಕ್ಕಳನ್ನು ತೋರಿಸಿದ್ದೆ. ಅದಕ್ಕೆ ಅಪ್ಪ–ಅಮ್ಮ ಹೆಮ್ಮೆ ವ್ಯಕ್ತಪಡಿಸಿದ್ದರು’–

ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿರುವ ಈ ಮಾತುಗಳು ಈಗ ವಿವಾದ ರೂಪ ಪಡೆದುಕೊಂಡಿವೆ.

ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಕಾರ್ಯಕ್ರಮವು ಭಾನುವಾರ ಪ್ರಸಾರವಾಗುತ್ತದೆ. ಖ್ಯಾತನಾಮರೊಂದಿಗೆ ಹಗುರ ಮತ್ತು ಸ್ವಾರಸ್ಯಕರ ಚರ್ಚೆಗಳು ನಡೆಯುತ್ತವೆ. ಅದರಲ್ಲಿ ಕರಣ್ ಕೇಳುವ ವೈಯಕ್ತಿಕ ಮತ್ತು ವೃತ್ತಿ ಸಂಬಂಧಿತ ಪ್ರಶ್ನೆಗಳ ಸುತ್ತ ಹರಟೆ ನಡೆಯುತ್ತದೆ.

ಆದರೆ, ಹಾರ್ದಿಕ್ ಮತ್ತು ರಾಹುಲ್ ಅವರು ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಂಡು ಆಡಿರುವ ಮಾತುಗಳು ಈಗ ಟೀಕೆಗೆ ಗುರಿಯಾಗಿವೆ.

ಕಾರ್ಯಕ್ರಮದ ಆರಂಭಿಕ ಭಾಗದಲ್ಲಿ ಕರಣ್ ಅವರು ‘ನೈಟ್ ಕ್ಲಬ್‌ ಮತ್ತು ಪಾರ್ಟಿಗಳಲ್ಲಿ ನಿಮ್ಮನ್ನು ಭೇಟಿಯಾಗುವ ಹೆಣ್ಣುಮಕ್ಕಳ ಹೆಸರು ಕೇಳುವುದಿಲ್ಲವಂತೆ’ ಎಂದು ಹಾರ್ದಿಕ್‌ಗೆ ಕೇಳುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸುವ ಹಾರ್ದಿಕ್, ‘ಗಂಟೆಗಟ್ಟಲೇ ಮಾತನಾಡಿದ ಮೇಲೆ ಹೆಸರು ಕೇಳುವುದು ಹೇಗೆ. ಪರಿಚಯವಾಗುವ ಹೆಣ್ಣುಮಕ್ಕಳು ಯಾವ ರೀತಿ ನಡೆದುಕೊಳ್ಳುತ್ತಾರೆ. ಹೇಗಿರುತ್ತಾರೆ ಎಂಬುದನ್ನು ಗಮನಿಸುತ್ತೇನೆ. ವೆಸ್ಟ್ ಇಂಡೀಸ್ ಕಲ್ಚರ್ ನನಗಿಷ್ಟ. ನಾನು ಸ್ವಲ್ಪ ಬ್ಲ್ಯಾಕ್‌ ಸೈಡ್’ ಎಂದು ಉತ್ತರಿಸುತ್ತಾರೆ.

‘ನಿಮ್ಮ ಸುತ್ತಮುತ್ತ ಯಾವಾಗಲೂ ಹೆಚ್ಚು ಹುಡುಗಿಯರು ಇರುತ್ತಾರೆ. ಡೇಟಿಂಗ್, ರಿಲೇಷನ್‌ಷಿಪ್ ಹೇಗೆ?’ ಎಂದು ಕರಣ್ ಕಾಲೆಳೆಯುತ್ತಾರೆ.

ಆಗ ತಣ್ಣಗೆ ಉತ್ತರಿಸುವ ಹಾರ್ದಿಕ್, ‘ನನ್ನ ಇಷ್ಟು ದಿನದ ಅವಧಿಯಲ್ಲಿ ಮೂರು ಅಂಶಗಳನ್ನು ತಿಳಿದುಕೊಂಡಿದ್ದೇನೆ ಮತ್ತು ಪಾಲಿಸುತ್ತೇನೆ. ಒಂದು ಸೀಯಿಂಗ್ (ನೋಡುವುದು), ಡೇಟಿಂಗ್ ಮತ್ತು ರಿಲೇಷನ್‌ಷಿಪ್ ಆ ಮೂರು ಅಂಶಗಳು. ಅದರಲ್ಲಿ ಸೀಯಿಂಗ್ ಮತ್ತು ಡೇಟಿಂಗ್ ನನಗೆ ಹೆಚ್ಚು ಅಪ್ಯಾಯಮಾನ ’ ಎಂದು ಹೇಳುತ್ತಾರೆ.

ಈ ಸಂದರ್ಭದಲ್ಲಿ ರಾಹುಲ್ ಅವರು ಹಾರ್ದಿಕ್ ತಮ್ಮನ್ನು ನೈಟ್‌ಕ್ಲಬ್‌ಗೆ ಕರೆದುಕೊಂಡು ಹೋದಾಗ ಯಾವ ರೀತಿ ಇರುತ್ತಾರೆ ಎಂದು ಚಟಾಕಿ ಹಾರಿಸುತ್ತಾರೆ.

ಆಗ ಕರಣ್, ‘ಈ ಹಿಂದೆ ನಿಮ್ಮ ಜೇಬಿನಲ್ಲಿ ಕಾಂಡೋಮ್ ಪ್ಯಾಕೆಟ್‌ ಇಟ್ಟುಕೊಂಡಿದ್ದಿರಂತೆ, ಮನೆಯಲ್ಲಿ ಸಿಕ್ಕಿಬಿದ್ದಿದ್ದರಂತೆ’ ಎಂದು ರಾಹುಲ್‌ ಅವರನ್ನು ಪ್ರಶ್ನಿಸುತ್ತಾರೆ.

ಆಗ ಪ್ರತಿಕ್ರಿಯಿಸುವ ರಾಹುಲ್, ‘18 ವರ್ಷದವನಿದ್ದಾಗ ಜೇಬಿನಲ್ಲಿ ಕಾಂಡೋಮ್ ಇಟ್ಟುಕೊಂಡಿದ್ದನ್ನು ಅಮ್ಮ–ಅಪ್ಪ ಪತ್ತೆ ಹಚ್ಚಿದ್ದರು. ಬೈದಿದ್ದರು. ರಾತ್ರಿ ಅಪ್ಪ ನನ್ನ ಬಳಿ ಬಂದು ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಕೊಡು ಎಂದು ಬುದ್ಧಿ ಹೇಳಿದ್ದರು. ಕಾಲೇಜು ಜೀವನದ ನಂತರ ನಾನು ಡೇಟಿಂಗ್ ಮಾಡಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಹಾರ್ದಿಕ್ ತಮ್ಮ ಕುಟುಂಬದವರ ಉದಾರ ಮನೋಭಾವದ ಕುರಿತು ಹೇಳಿದ್ದರು.

ಕಾರ್ಯಕ್ರಮದ ನಂತರ ಟ್ವೀಟರ್‌ನಲ್ಲಿ ಕ್ಷಮೆ ಕೋರಿರುವ ಹಾರ್ದಿಕ್, ‘ಕಾರ್ಯಕ್ರಮದ ಹುರುಪಿನಲ್ಲಿ ಕೊಚ್ಚಿಹೋದೆ. ದಯವಿಟ್ಟು ಕ್ಷಮಿಸಿ. ನನ್ನ ಮಾತುಗಳಿಂದ ನೊಂದವರಲ್ಲಿ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !