ಕಪ್ಪು ಕುಳಿ ಮೊದಲ ಚಿತ್ರ ಅದ್ಭುತ ಸಾಧನೆ: ವಿಜ್ಞಾನಿಗಳ ಬಣ್ಣನೆ

ಬುಧವಾರ, ಏಪ್ರಿಲ್ 24, 2019
33 °C

ಕಪ್ಪು ಕುಳಿ ಮೊದಲ ಚಿತ್ರ ಅದ್ಭುತ ಸಾಧನೆ: ವಿಜ್ಞಾನಿಗಳ ಬಣ್ಣನೆ

Published:
Updated:
Prajavani

ನವದೆಹಲಿ: ಕಪ್ಪು ಕುಳಿಯ ನೈಜ ಚಿತ್ರಗಳು ದೊರೆತಿರುವುದು ಭಾರತೀಯ ವಿಜ್ಞಾನಿಗಳಲ್ಲೂ ಹಲವು ಕುತೂಹಲಗಳನ್ನು ಮೂಡಿಸಿದೆ.

ನಿಗೂಢವಾಗಿರುವ ಅಂಶಗಳು ಮತ್ತು 'ಮಿಲ್ಕಿವೇ'ನಂತಹ ಆಕಾಶಗಂಗೆ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಪೂರಕವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಪ್ಪು ಕುಳಿಯು 55 ಮಿಲಿಯನ್‌ ಜ್ಯೋತಿ ವರ್ಷಗಳಷ್ಟು ಭೂಮಿಯಿಂದ ದೂರದಲ್ಲಿದೆ. ಸೂರ್ಯನಗಿಂತಲೂ 6.5 ಶತಕೋಟಿ ಪಟ್ಟು ಹೆಚ್ಚು ತೂಕ ಹೊಂದಿದೆ.

‘ಕಪ್ಪು ಕುಳಿಯ ಬಗ್ಗೆ ಮೊದಲ ಬಾರಿ ಅಧಿಕೃತವಾದ ಸಾಕ್ಷ್ಯ ದೊರೆತಿದೆ. ಇದರ ಅಸ್ತಿತ್ವದ ಬಗ್ಗೆ ಯಾವುದೇ ರೀತಿಯ ಸಂದೇಹಗಳು ಈಗ ಉಳಿದಿಲ್ಲ. ಈ ಮೊದಲು, ನಮಗೆ ಶೇಕಡ 99ರಷ್ಟು ಸಾಕ್ಷ್ಯಗಳಿದ್ದರೂ ಕೆಲವು ಸಂದೇಹಗಳು ಉಳಿದಿದ್ದವು. ಈಗ ಶೇಕಡ 100ರಷ್ಟು ಖಚಿತವಾಗಿದೆ’ ಎಂದು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ (ಟಿಐಎಫ್‌ಆರ್‌) ಸಹಾಯಕ ಪ್ರಾಧ್ಯಾಪಕ ಸುದೀಪ್‌ ಭಟ್ಟಾಚಾರಾರ್ಯ ವಿವರಿಸಿದ್ದಾರೆ.

'ಎಂ87' ಹೆಸರಿನ ನಕ್ಷತ್ರ ಪುಂಜದಲ್ಲಿ ಈ ದೈತ್ಯ ಗಾತ್ರದ ಕಪ್ಪುಕುಳಿ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ದೊರೆತಿದೆ. ಕಪ್ಪು ಕುಳಿವೊಂದರ ಸುತ್ತಲೂ ಪ್ರಕಾಶಮಾನವಾಗಿ ಕೆಂಪು ಮಿಶ್ರಿತ ಕಿತ್ತಳೆ ಬಣ್ಣದಲ್ಲಿ ಹೊಳೆಯುವ ಬೃಹತ್‌ ಬೆಂಕಿಯ ಬಳೆ ಚಿತ್ರದಲ್ಲಿ ಕಂಡುಬಂದಿದೆ. 

ಜಗತ್ತಿನ ಹಲವೆಡೆ 8 ರೇಡಿಯೊ ಟೆಲಿಸ್ಕೋಪ್‌ಗಳನ್ನು ಏಕಕಾಲಕ್ಕೆ ಬಳಸಿ ಇದುವರೆಗೂ ಚಿದಂಬರ ರಹಸ್ಯವಾಗಿ ಉಳಿದಿದ್ದ ಮತ್ತು ಕೇವಲ ಕಾಲ್ಪನಿಕ ಚಿತ್ರಗಳಿಗಷ್ಟೇ ಸೀಮಿತವಾಗಿದ್ದ ಕಪ್ಪುಕುಳಿಯನ್ನು ಬುಧವಾರ ನೈಜವಾಗಿ ಸೆರೆ ಹಿಡಿಯಲಾಗಿತ್ತು.

 ಬಾಹ್ಯಾಕಾಶ ವಿಜ್ಞಾನ ನಿಯತಕಾಲಿಕೆ 'ಆಸ್ಟ್ರಾಫಿಸಿಕಲ್‌ ಜರ್ನಲ್‌ ಲೆಟರ್ಸ್‌'ನಲ್ಲಿ ಈ ಐತಿಹಾಸಿಕ ಚಿತ್ರವನ್ನು ಪ್ರಕಟಿಸಲಾಗಿದೆ. ಬಲವಾದ ಗುರುತ್ವಾಕರ್ಷಣೆ ಹೊಂದಿರುವ ಕಪ್ಪು ಕುಳಿಯಲ್ಲಿ ಬೆಳಕು ಸಹ ಪಾರಾಗಲು ಸಾಧ್ಯವಿಲ್ಲ. ಹೀಗಾಗಿ, ಕಪ್ಪು ಕುಳಿಗಳು ವಿಶಿಷ್ಟ ಮತ್ತು ವಿಭಿನ್ನವಾಗಿವೆ.

‘ಸುಮಾರು 200ಕ್ಕೂ ಹೆಚ್ಚು ಸಂಶೋಧಕರು ಕಪ್ಪುಕುಳಿಯ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ’ ಎಂದು ಇವೆಂಟ್‌ ಹಾರಿಜಾನ್‌ ಟೆಲಿಸ್ಕೋಪ್‌ನ ಯೋಜನಾ ನಿರ್ದೇಶಕ ಶೆಫರ್ಡ್‌ ಎಸ್‌. ಡೊಲೆಮಾನ್‌ ತಿಳಿಸಿದ್ದಾರೆ.

 'ಎಂ87 ಅನಾವರಣಗೊಳಿಸಿರುವುದು ಅದ್ಭುತ ಸಾಧನೆ. ಇದರಿಂದ, ಕಪ್ಪುಕುಳಿಯ ತೂಕ ಮತ್ತು ಗಾತ್ರವನ್ನು ಅಂದಾಜಿಸಲು ಸಾಧ್ಯವಾಗಿದೆ’ ಎಂದು ಟಿಐಎಫ್‌ಆರ್‌ನ ಇನ್ನೊಬ್ಬ ಸಹಾಯಕ ಪ್ರಾಧ್ಯಾಪಕ ಅಚಮ್‌ವೀಡು ಗೋಪಕುಮಾರ್‌ ವಿಶ್ಲೇಷಿಸಿದ್ದಾರೆ.

‘ಈಗ ದೊರೆತಿರುವ ಚಿತ್ರ ಮಹತ್ವದ್ದು. ಬಹುಕಾಲದವರೆಗೆ ಕಪ್ಪುಕುಳಿ ಅಸ್ತಿತ್ವ ದೃಢಪಟ್ಟಿರಲಿಲ್ಲ. ಪರೋಕ್ಷವಾಗಿಯೇ ವಿವಿಧ ಮೂಲಗಳ ಅನ್ವಯ ಕಪ್ಪುಕುಳಿಗಳ ಅಸ್ತಿತ್ವ ಕಂಡುಕೊಳ್ಳಲಾಗಿತ್ತು’ ಎಂದು ಬೆಂಗಳೂರಿನ ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಥಿಯರಿಟಿಕಲ್‌ ಸೈನ್ಸಸ್‌ನ (ಐಸಿಟಿಎಸ್‌) ನಿರ್ದೇಶಕ ರಾಜೇಶ್‌ ಗೋಪಕುಮಾರ್ ತಿಳಿಸಿದ್ದಾರೆ.     

ಕಪ್ಪುಕುಳಿಯ ಈ ನೈಜಚಿತ್ರದಿಂದ ಬ್ರಹ್ಮಾಂಡದಲ್ಲಿರುವ ಹಲವು ವಸ್ತುಗಳ ಅಧ್ಯಯನಕೈಗೊಳ್ಳಲು ಅನುಕೂಲವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವೈಶಿಷ್ಟ್ಯ 

*ಸೂರ್ಯನಿಗಿಂತ 6.5 ಶತಕೋಟಿ ಪಟ್ಟು ದೈತ್ಯ

*ಭೂಮಿಯಿಂದ ಕಪ್ಪು ಕುಳಿಯು 5.5 ಕೋಟಿ ಜ್ಯೋತಿ ವರ್ಷಗಳಷ್ಟು ದೂರ

*ಎಂ87 ನಕ್ಷತ್ರಪುಂಜದ ಹೃದಯಭಾಗದಲ್ಲಿ ಪತ್ತೆ

*ವಿಶ್ವಾದ್ಯಂತ 8 ಟೆಲಿಸ್ಕೋಪ್‌ಗಳ ಜಾಲದಿಂದ ಒಟ್ಟಿಗೆ ಚಿತ್ರ ಸೆರೆ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !