ಮೋದಿಗಾಗಿ ಸಿಡ್ನಿ ಕೆಲಸ ತ್ಯಜಿಸಿದ ಅಭಿಮಾನಿ

ಶನಿವಾರ, ಏಪ್ರಿಲ್ 20, 2019
27 °C
ವಿಮಾನ ನಿಲ್ದಾಣದಲ್ಲಿ ತಪಾಸಣಾ ಅಧಿಕಾರಿಯಾಗಿದ್ದ ಸುಧೀಂದ್ರ ಹೆಬ್ಬಾರ್‌

ಮೋದಿಗಾಗಿ ಸಿಡ್ನಿ ಕೆಲಸ ತ್ಯಜಿಸಿದ ಅಭಿಮಾನಿ

Published:
Updated:
Prajavani

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಉತ್ಕಟ ಅಭಿಮಾನಿಯಾಗಿರುವ ಸುರತ್ಕಲ್‌ ನಿವಾಸಿ ಸುಧೀಂದ್ರ ಹೆಬ್ಬಾರ್‌ ಆಸ್ಟ್ರೇಲಿಯಾ ವಿಮಾನ ನಿಲ್ದಾಣದಲ್ಲಿನ ಉತ್ತಮ ಕೆಲಸವನ್ನೇ ತ್ಯಜಿಸಿದ್ದಾರೆ.

41ರ ಹರೆಯದ ಸುಧೀಂದ್ರ ಅವರಿಗೆ ಮೋದಿಯವರ ಮೇಲೆ ಎಲ್ಲಿಲ್ಲದ ಅಭಿಮಾನ. ಎಂಬಿಎ ಪದವೀಧರರಾಗಿರುವ ಇವರು ಸದ್ಯ ಸಿಡ್ನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣಾ ಅಧಿಕಾರಿಯಾಗಿದ್ದರು. ಏಪ್ರಿಲ್‌ 5ರಿಂದ ಏ.12ರವರೆಗೆ ರಜೆ ಲಭಿಸಿತ್ತು. ಆದರೆ, ಏ.18ಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದೆ. ರಜೆ ಲಭಿಸದ ಕಾರಣ ಅವರು ಕೆಲಸವನ್ನೇ ತ್ಯಜಿಸಿದ್ದಾರೆ.

‘2014ರ ಏಪ್ರಿಲ್‌ 17ರಂದು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಆಸ್ಟ್ರೇಲಿಯಾಕ್ಕೆ ತೆರಳಿದ್ದೆ. ಈ ಬಾರಿಯೂ ಮತದಾನ ಮಾಡಬೇಕೆಂದು ಬಯಸಿದ್ದೆ. ಆದರೆ, ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಜನವರಿಯಲ್ಲೇ 21 ದಿನಗಳ ರಜೆ ಪಡೆದು ಊರಿಗೆ ಬಂದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಹೋಗಿದ್ದೆ’ ಎಂದು ಸುಧೀಂದ್ರ ತಿಳಿಸಿದರು.

‘ಏ.5ರಿಂದ ಏ.12ರವರೆಗೆ ರಜೆ ದೊರಕಿತ್ತು. ಆದರೆ, ಈಸ್ಟರ್‌ ಮತ್ತು ರಂಜಾನ್‌ ಕಾರಣದಿಂದ ರಜೆ ವಿಸ್ತರಣೆಗೆ ನಿರಾಕರಿಸಲಾಯಿತು. ತಕ್ಷಣವೇ ರಾಜೀನಾಮೆ ಸಲ್ಲಿಸಿದೆ. ಮೋದಿಯವರಿಗಾಗಿ ಮತ ಚಲಾಯಿಸಬೇಕೆಂಬುದು ನನ್ನ ಉದ್ದೇಶ. ಈ ಬಾರಿ ಊರಿನಲ್ಲೇ ಇದ್ದು ಚುನಾವಣಾ ವಿಜಯೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿಂದ ಈ ನಿರ್ಧಾರಕ್ಕೆ ಬಂದೆ’ ಎಂದರು.

ಸುಧೀಂದ್ರ ಅವರ ಪತ್ನಿ ಆಸ್ಟ್ರೇಲಿಯಾದ ಫಿಜಿ ನಿವಾಸಿ. ಹೀಗಾಗಿ ಇವರಿಗೂ ಅಲ್ಲಿನ ಕಾಯಂ ನಿವಾಸಿ ಕಾರ್ಡ್‌ ಲಭಿಸಿದೆ. ಮೊದಲು ಸಿಡ್ನಿಯ ರೈಲ್ವೆಯಲ್ಲಿ ತಪಾಸಣಾ ಅಧಿಕಾರಿಯಾಗಿದ್ದರು. ಈಗ ವಿಮಾನ ನಿಲ್ದಾಣದಲ್ಲಿದ್ದರು. ಪ್ರತಿ ಗಂಟೆಗೆ ₹ 1,500ಕ್ಕಿಂತ ಹೆಚ್ಚು ಸಂಬಳ ದೊರೆಯುತ್ತಿದ್ದ ಕೆಲಸ ತ್ಯಜಿಸಿದ್ದಾರೆ. ಮತ್ತೆ ಕೆಲಸ ಹುಡುಕುವುದು ಕಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ.

ಮೋದಿ ಮತ್ತೊಮ್ಮೆ ಬರಲಿ: ‘ರಜೆ ಮಂಜೂರು ಮಾಡುವುದಿಲ್ಲ ಎಂದು ಹೇಳುತ್ತಿದ್ದಂತೆ ನಾನು ರಾಜೀನಾಮೆ ಪತ್ರ ಕಳುಹಿಸಿದೆ. ಮತದಾನಕ್ಕಾಗಿ ರಜೆ ಕೇಳಿದ್ದರೆ ಮಂಜೂರು ಆಗುವ ಸಾಧ್ಯತೆ ಇತ್ತು. ಆದರೆ, ಆ ಕ್ಷಣಕ್ಕೆ ನನಗೆ ಏನೂ ತೋಚಲಿಲ್ಲ. ಮೋದಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಬಯಕೆ’ ಎಂದು ಹೇಳಿದರು.

ಏ.5ರಿಂದ ನಗರದಲ್ಲೇ ಇರುವ ಸುಧೀಂದ್ರ ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಆಗಾಗ ಬಿಜೆಪಿ ಚುನಾವಣಾ ಕಚೇರಿಗೆ ಬಂದು ಪ್ರಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶನಿವಾರ ನಡೆದ ಬಿಜೆಪಿ ಸಮಾವೇಶದಲ್ಲೂ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !