ಜಿ.ಎಸ್.ಬಸವರಾಜ್ ಸಂದರ್ಶನ: ‘ತುಮಕೂರನ್ನು ದೇಶದ ಮಾದರಿ ಜಿಲ್ಲೆ ಮಾಡುವೆ’

ಮಂಗಳವಾರ, ಏಪ್ರಿಲ್ 23, 2019
27 °C
ದೂರದೃಷ್ಟಿಯುಳ್ಳ ಯೋಜನೆಗಳಿಗೆ ನನ್ನ ಆದ್ಯತೆ; ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು

ಜಿ.ಎಸ್.ಬಸವರಾಜ್ ಸಂದರ್ಶನ: ‘ತುಮಕೂರನ್ನು ದೇಶದ ಮಾದರಿ ಜಿಲ್ಲೆ ಮಾಡುವೆ’

Published:
Updated:

ತುಮಕೂರು: ‘ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ನನ್ನ ಮೊದಲ ಆದ್ಯತೆ. ಅದರ ಜತೆಗೆ ಪಶ್ಚಿಮಮುಖಿ ನದಿ ಪಾತ್ರದಿಂದ ಒಟ್ಟು 160 ಟಿಎಂಸಿ ನೀರನ್ನು ತುಮಕೂರು ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕಕ್ಕೆ ತರುವುದು ನನ್ನ ಗುರಿ...’

–ಹೀಗೆ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಮ್ಮ ಆದ್ಯತೆಯನ್ನು ಹೇಳಿಕೊಂಡವರು ಜಿ.ಎಸ್‌.ಬಸವರಾಜು. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಹಿಂದೆ ಇದೇ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಬಿರುಸಿನ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಇದನ್ನೂ ಓದಿ: ಅಖಾಡದಲ್ಲೊಂದು ಸುತ್ತು– ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ

ಹಿಂದೆ ನಾಲ್ಕು ಬಾರಿ ಸಂಸದರಾಗಿದ್ದಾಗಲೇ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬಹುದಿತ್ತಲ್ಲವೇ?

ನಾನು ಎಂದಿಗೂ ಬಣ್ಣದ ಮಾತುಗಳಿಗೆ, ಅಲ್ಪಕಾಲೀನ ಜನಪ್ರಿಯ ಯೋಜನೆಗಳಿಗೆ ಮಹತ್ವ ಕೊಟ್ಟವನಲ್ಲ. ನನ್ನದೇನಿದ್ದರೂ ಶಾಶ್ವತ ಕೆಲಸಗಳ ಬಗ್ಗೆ ಮಾತ್ರ ಗಮನ. ಶಾಶ್ವತ ನೀರಾವರಿ ಸೌಕರ್ಯ, ಉನ್ನತ ಶಿಕ್ಷಣ, ಸಾರಿಗೆ ಮತ್ತು ಕೈಗಾರಿಕೆಗಳ ಸ್ಥಾಪನೆ– ಇಂತಹ ದೂರದೃಷ್ಟಿಯ ಕಾರ್ಯಯೋಜನೆಗಳಿಂದ ಮಾತ್ರವೇ ಜಿಲ್ಲೆ ಭವಿಷ್ಯದಲ್ಲೂ ಯಾವುದೇ ಸಂಕಷ್ಟಕ್ಕೆ ಗುರಿಯಾಗದೇ ಇರಬಲ್ಲದು ಎಂಬುದು ನನ್ನ ದೃಢವಾದ ನಂಬಿಕೆ.

ನೀವು ಯಾವ ಯಾವ ಯೋಜನೆಗಳನ್ನು ತಂದಿದ್ದಿರಿ?

ವಸಂತನರಸಾಪುರದಲ್ಲಿ 16 ಸಾವಿರ ಎಕರೆ ಪ್ರದೇಶದಲ್ಲಿ ‘ನಿಮ್ಜ್‌’ ಸ್ಥಾಪನೆ, ಸ್ಮಾರ್ಟ್‌ ಸಿಟಿ, ಎರಡು ಕೈಗಾರಿಕಾ ಕಾರಿಡಾರ್‌, ವಿದ್ಯುತ್‌ ಗ್ರಿಡ್‌, ಫುಡ್‌ ಪಾರ್ಕ್‌, ಮೆಷಿನ್‌ ಟೂಲ್‌ ಪಾರ್ಕ್‌– ಇಂತಹ ಹತ್ತಾರು ಬೃಹತ್‌ ಯೋಜನೆಗಳ ಮಂಜೂರು ಮತ್ತು ಅನುಷ್ಠಾನದಲ್ಲಿ ನನ್ನ ಶ್ರಮವಿದೆ. ಪ್ರತಿಯೊಂದು ಯೋಜನೆಗೂ ಆರಂಭದಲ್ಲಿ ಬರೆದ ಪತ್ರದಿಂದ ಹಿಡಿದು ಯೋಜನೆಯ ಜಾರಿವರೆಗೂ ನನ್ನ ಬಳಿ ದಾಖಲೆ ಇದೆ. ಈ ಅಭಿವೃದ್ಧಿ ಯೋಜನೆಗಳ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ.

ಹೇಮಾವತಿ ನದಿ ನೀರು ವಿಚಾರದಲ್ಲಿ ನ್ಯಾಯ ಪಡೆಯಲು ನಿಮ್ಮ ಅಧಿಕಾರವಾಧಿಯಲ್ಲಿ ಯಾಕೆ ಪ್ರಯತ್ನಿಸಲಿಲ್ಲ?

ಮೂರು ದಶಕಗಳಿಂದಲೂ ನಾನು ಹೋರಾಡುತ್ತಿದ್ದೇನೆ. ನನ್ನ ಸಲಹೆ, ಒತ್ತಾಯದಂತೆ ಸರ್ಕಾರಗಳು ನಡೆದುಕೊಂಡಿದ್ದರೆ ಜಿಲ್ಲೆಗೆ ಅನ್ಯಾಯವಾಗುತ್ತಿರಲಿಲ್ಲ.

ನಿಮ್ಮ ಪ್ರಕಾರ ಜಿಲ್ಲೆಗೆ ಯಾವ ರೀತಿ ಸಮರ್ಪಕವಾಗಿ ನೀರಾವರಿ ವ್ಯವಸ್ಥೆ ಕಲ್ಪಿಸಬಹುದು?

ನನ್ನ ಚಿಂತನೆ ಪ್ರಕಾರ ಯೋಜನೆ ಕಾರ್ಯಗತವಾದರೆ ತುಮಕೂರು ಜಿಲ್ಲೆಗೆ ಮಾತ್ರವಲ್ಲ; ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಭಾಗಶಃ ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಮಧ್ಯ ಕರ್ನಾಟಕಕ್ಕೆ 160 ಟಿಎಂಸಿ ನೀರು ತರಬಹುದು.

ವಿದ್ಯುತ್‌ ಉತ್ಪಾದನೆಗಾಗಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯವನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ವಿದ್ಯುತ್‌ ಅನ್ನು ಸೌರ ಮತ್ತು ಪವನ ವ್ಯವಸ್ಥೆಯಿಂದ ಉತ್ಪಾದಿಸಬಹುದು. ಈಗ ಎಲ್ಲ ಕಡೆಗೂ ಜೀವ ಜಲ ಬೇಕು. ಸದ್ಯ ಜಾರಿಯಲ್ಲಿರುವ ಎತ್ತಿನಹೊಳೆ ನಾಲೆ ಮತ್ತು ಪೈಪ್‌ಲೈನ್‌ ವ್ಯವಸ್ಥೆಯನ್ನೇ ನೀರಿನ ಗ್ರಿಡ್‌ ಆಗಿ ಬಳಸಿಕೊಂಡು ಲಿಂಗನಮಕ್ಕಿ ಜಲಾಶಯದಿಂದ ನೀರು ತರಬಹುದು.

ಹೇಮಾವತಿ ನದಿ ನೀರಿನ ಸಮರ್ಪಕ ಹಂಚಿಕೆಗೆ ಏನು ಪರಿಹಾರ?

ಜಿಲ್ಲೆಯಲ್ಲಿ ನಾಲಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸುವುದೇ ಏಕೈಕ ಪರಿಹಾರ. ಮಳೆಗಾಲದಲ್ಲಿ ಸಮುದ್ರ ಪಾಲಾಗುವು ಹೇಮಾವತಿ ಪ್ರವಾಹದ ನೀರನ್ನು (ಫ್ಲಡ್‌ ಫ್ಲೋ) ಉಪಯೋಗಿಸಿಕೊಳ್ಳಲು ಸೂಕ್ತ ಯೋಜನೆ ರೂಪಿಸಬೇಕಾದ ಅಗತ್ಯ ಇದೆ.

ಮೈತ್ರಿ ಪಕ್ಷಗಳಲ್ಲಿರುವ ಅತೃಪ್ತರನ್ನು ಸಂಪರ್ಕಿಸಿದ್ದೀರಾ? ಅವರ ಬೆಂಬಲ ತೆಗೆದುಕೊಳ್ಳುವಿರಾ?

ಇಲ್ಲ. ಇದುವರೆಗೆ ಯಾರನ್ನೂ ಸಂಪರ್ಕಿಸಿಲ್ಲ. ಮೈತ್ರಿ ಪಕ್ಷಗಳ ವರಿಷ್ಠರ ನಡೆವಳಿಕೆಯಿಂದ ಬೇಸತ್ತ ಸಾವಿರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ನನ್ನನ್ನ ಬೆಂಬಲಿಸಲು ಮುಂದೆ ಬಂದಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸ್ಪರ್ಧೆ ಸವಾಲು ಎನಿಸಿದೆಯೇ?

ಇಲ್ಲ. ನಾನು ಸ್ಥಳೀಯ. ಕ್ಷೇತ್ರದ ಜನರು ನನ್ನನ್ನೇ ಬೆಂಬಲಿಸುವ ವಿಶ್ವಾಸ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !