ಗುರುವಾರ , ಸೆಪ್ಟೆಂಬರ್ 23, 2021
20 °C
ದಡ್ಡಲಕಾಡು: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

1ನೇ ತರಗತಿಗೆ 110 ಮಂದಿ ಸೇರ್ಪಡೆ!

ಮೋಹನ್‌ ಕೆ. ಶ್ರೀಯಾನ್‌ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನು ಕಂಡು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 1,000 ಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದರೆ, ಇಲ್ಲಿನ ಗ್ರಾಮೀಣ ಪ್ರದೇಶ
ವಾದ ದಡ್ಡಲಕಾಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಈ ಬಾರಿ ಒಂದನೇ ತರಗತಿಗೆ 110 ಮಂದಿ
ವಿದ್ಯಾರ್ಥಿಗಳು ಸೇರ್ಪಡೆಯಾಗಿ ಗಮನ ಸೆಳೆದಿದ್ದಾರೆ.

ಪೂರ್ವ ಪ್ರಾಥಮಿಕ ಎರಡು ತರಗತಿ ಮತ್ತು ಒಂದನೇ ತರಗತಿಗೆ ಈ ಸಾಲಿನಲ್ಲಿ ಒಟ್ಟು 285 ಮಂದಿ ಪ್ರವೇಶ ಪಡೆದಿದ್ದಾರೆ. 2016ರಲ್ಲಿ ಕೇವಲ 33 ಮಂದಿ ವಿದ್ಯಾರ್ಥಿಗಳಿದ್ದು ಬಳಿಕ ಮುಚ್ಚುವ ಭೀತಿ ಎದುರಿಸುತ್ತಿದ್ದ ಈ ಶಾಲೆಯನ್ನು ದತ್ತು ಸ್ವೀಕರಿಸುವ ಮೂಲಕ ಸ್ಥಳೀಯ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮರುಜೀವ ನೀಡಿದೆ. ಈಗಾಗಲೇ ಶಾಲೆಗೆ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಇದನ್ನು ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸಿದ್ದರು.

‘ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆ ಮಾದರಿಯಲ್ಲಿ ಆಕರ್ಷಕ ಸಮವಸ್ತ್ರ, ಶಾಲಾ ಬಸ್‌, ಸಮವಸ್ತ್ರಧಾರಿ ಶಿಕ್ಷಕಿಯರ ಸಹಿತ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಮಕ್ಕಳ ಪೋಷಕರು ಶಾಲೆಯ ಆವರಣದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಉತ್ಸಾಹದಿಂದ ಬೆಳೆಯುತ್ತಿದ್ದಾರೆ. ಒಂದನೇ ತರಗತಿಗೆ ಮೂರು ವಿಭಾಗ ತೆರೆಯಲು ನಿರ್ಧರಿಸಲಾಗಿದೆ’ ಎಂದು ಮುಖ್ಯಶಿಕ್ಷಕ ಮೌರೀಸ್ ಡಿಸೋಜಾ ತಿಳಿಸಿದ್ದಾರೆ.

‘ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 650 ಗಡಿ ದಾಟಿದೆ. ಈ ಹಿಂದೆ ಕೇವಲ 33 ಮಂದಿ ವಿದ್ಯಾರ್ಥಿಗಳನ್ನು ಹೊಂದಿದ್ದ ಶಾಲೆಯಲ್ಲಿ ಇದೀಗ ಪೂರ್ವ ಪ್ರಾಥಮಿಕ ಹಂತದಿಂದ 8ನೇ ತರಗತಿ ತನಕ ಒಟ್ಟು 650 ಮಂದಿ ವಿದ್ಯಾರ್ಥಿಗಳು ಇದ್ದಾರೆ. ವಿಶಾಲವಾದ ಮೈದಾನ ಹೊಂದಿರುವ ಇಲ್ಲಿ ಮುಂದಿನ ದಿನಗಳಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜು ಕೂಡ ಆರಂಭಗೊಂಡರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ’ ಎಂಬ ಅಭಿಪ್ರಾಯ ಪೋಷಕರಿಂದ ವ್ಯಕ್ತವಾಗಿದೆ.

ಇದೀಗ ₹1 ಕೋಟಿ ವೆಚ್ಚದಲ್ಲಿ ಮೂರನೇ ಮಹಡಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಹೊಸ ಕೊಠಡಿ, ಆವರಣ ಗೋಡೆ, ಸಭಾಂಗಣ ನಿರ್ಮಾಣಗೊಳ್ಳಲಿದೆ. ಕಳೆದ ಭಾನುವಾರ ಮಹಿಳೆಯರೂ ಸೇರಿದಂತೆ 100ಕ್ಕೂ ಮಿಕ್ಕಿ ಮಕ್ಕಳ ಪೋಷಕರು ಶ್ರಮದಾನ ನಡೆಸಿ ಗಮನ ಸೆಳೆದರು.

‘ಇಲ್ಲಿನ ಶಾಲಾ ಬಸ್ ತನ್ನ ವ್ಯಾಪ್ತಿ ಮೀರಿ ಇತರ ಸರ್ಕಾರಿ ಪ್ರಾಥಮಿಕಶಾಲೆಗಳ ಬಳಿಯೂ ಬರುತ್ತಿದೆ. ಇದರಿಂದಾಗಿ ಆಸುಪಾಸಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಅತಿಯಾಗಿ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿವೆ. ಬೇರೆ ಸರ್ಕಾರಿ ಶಾಲೆ ಮುಚ್ಚಿ ಒಂದು ಸರ್ಕಾರಿ ಶಾಲೆ ಉಳಿಸಿಕೊಂಡರೆ ನಮ್ಮ ಪಾಡೇನು’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

‘ಸಾಮಾಜಿಕ ಸಂಘಟನೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ಇದೇ ಮಾದರಿಯಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಉಳಿಯಬೇಕು. ಜತೆಗೆ ದೇಶದೆಲ್ಲೆಡೆ ಏಕರೂಪ ಶಿಕ್ಷಣ ಸಿಗಬೇಕು ಎಂಬ ಬಗ್ಗೆ ಈಗಾಗಲೇ ಹೋರಾಟ ನಡೆಸ
ಲಾಗುತ್ತಿದೆ’ ಎಂದು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು