₹10 ಕೋಟಿ ಪಡೆದಿರುವ ನಾರಾಯಣಗೌಡ: ಕೆ.ಬಿ.ಚಂದ್ರಶೇಖರ್‌ ಆರೋಪ

ಸೋಮವಾರ, ಮೇ 27, 2019
29 °C

₹10 ಕೋಟಿ ಪಡೆದಿರುವ ನಾರಾಯಣಗೌಡ: ಕೆ.ಬಿ.ಚಂದ್ರಶೇಖರ್‌ ಆರೋಪ

Published:
Updated:
Prajavani

ಮಂಡ್ಯ: ಕಾಂಗ್ರೆಸ್‌– ಜೆಡಿಎಸ್‌ ಮುಖಂಡರ ವಾಗ್ಯುದ್ಧ ಮುಂದುವರಿದಿದೆ. ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರ ವಿರುದ್ಧ ಕಾಂಗ್ರೆಸ್‌ ಮುಖಂಡ ಕೆ.ಬಿ.ಚಂದ್ರಶೇಖರ್‌ ಮಂಗಳವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾರಾಯಣಗೌಡ ಹುಟ್ಟು ಗೂಂಡ, ಕ್ರಿಮಿನಲ್‌. ಆಪರೇಷ್‌ ಕಮಲಕ್ಕೆ ಬಲಿಯಾಗಿರುವ ಆತ ಬಿಜೆಪಿ ಮುಖಂಡರಿಂದ ₹ 10 ಕೋಟಿ ಪಡೆದಿದ್ದಾರೆ. ಮೇ 23ರ ನಂತರ ಆತ ಕ್ಷೇತ್ರದಲ್ಲಿ ಇರುವುದಿಲ್ಲ, ಮುಂಬೈಗೆ ತೆರಳುತ್ತಾನೆ. ಈ ಹಿಂದೆ ಆಪರೇಷನ್‌ ಕಮಲಕ್ಕೆ ಭಂಗವಾಗಿದ್ದು ಆಗಲೇ ಹಣ ಪಡೆದಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಲೇ ಬಿಜೆಪಿ ಮುಖಂಡರು ಆತನನ್ನು ಎತ್ತಿ ಹಾಕಿಕೊಂಡು ಹೋಗುತ್ತಾರೆ. ಈ ವಿಷಯ ಜೆಡಿಎಸ್‌ ಮುಖಂಡರಿಗೂ ಗೊತ್ತಿದೆ’ ಎಂದು ಆರೋಪಿಸಿದರು.

‘ನಾರಾಯಣಗೌಡ ಮೇ 29ರಂದು ನಡೆಯುವ ಪುರಸಭೆ ಚುನಾವಣೆಗೂ ಮೊದಲೇ ಕ್ಷೇತ್ರ ತ್ಯಜಿಸುತ್ತಾನೆ. ಕೆ.ಆರ್‌.ಪೇಟೆ ತಾಲ್ಲೂಕಿನ ಜನರ ಮಾನ, ಮರ್ಯಾದೆಯನ್ನು ಹರಾಜು ಹಾಕಿದ್ದಾನೆ. ಅವನ ಚರಿತ್ರೆ ತಿಳಿಯಲು ಮುಂಬೈಗೆ ಹೋಗಬೇಕು. ನೂರಾರು ಕೆಟ್ಟ ಕೆಲಸ ಮಾಡಿದ್ದಾನೆ. ಯಾರದೋ ಜಮೀನನ್ನು ನಾರಾರು ವರ್ಷ ಭೋಗ್ಯಕ್ಕೆ ಹಾಕಿಸಿಕೊಂಡಿದ್ದಾನೆ. ನಮ್ಮ ತಾಲ್ಲೂಕಿನಲ್ಲಿ ಗೂಂಡ ಆಡಳಿತ ನಡೆಯುತ್ತಿದೆ’ ಎಂದು ಹೇಳಿದರು.

‘ಎಚ್‌.ವಿಶ್ವನಾಥ್‌ ಮೊದಲಿನಿಂದಲೂ ತಮಟೆ ಹೊಡೆಯುತ್ತಿದ್ದಾರೆ. ಅವರ ಮಾತಿಗೆ ಮಹತ್ವ ನೀಡಬೇಕಾದ ಅವಶ್ಯಕತೆ ಇಲ್ಲ. ಜೆಡಿಎಸ್‌ ಪಕ್ಷದಲ್ಲಿ ಅವರನ್ನು ಗೊಂಬೆ ಮಾಡಿ ಕೂರಿಸಿದ್ದಾರೆ. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಎಲ್ಲಾ ಉತ್ತಮ ಕೆಲಸ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಅವರು ಮುಂದೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವುದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !