ಗುಂಡಿನ ದಾಳಿ: ಆರೋಪಿ ಸಾವು

ಸೋಮವಾರ, ಮೇ 27, 2019
23 °C
ಮೈಸೂರು: ರದ್ದುಗೊಂಡ ನೋಟು ಬದಲಾವಣೆ ಜಾಲ

ಗುಂಡಿನ ದಾಳಿ: ಆರೋಪಿ ಸಾವು

Published:
Updated:

ಮೈಸೂರು: ರದ್ದುಗೊಂಡ ನೋಟುಗಳನ್ನು ಬದಲಿಸಿಕೊಡುತ್ತಿತ್ತು ಎನ್ನಲಾದ ಗುಂಪೊಂದರ ಮೇಲೆ ಮೈಸೂರು ಪೊಲೀಸರು ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಪಂಜಾಬ್‌ನ ಫರೀದಾಕೋಟ್‌ ನಿವಾಸಿ ಸುಖವಿಂದರ್‌ ಸಿಂಗ್ (40) ಮೃತಪಟ್ಟಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಆರೋಪಿ ಬಳಿಯಿದ್ದ ರಿವಾಲ್ವರ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ ಮೋಸ ಹೋದ ವ್ಯಕ್ತಿಯೊಬ್ಬರು, ‘ರದ್ದುಗೊಂಡ ₹500 ಕೋಟಿ ಮೊತ್ತದ ನೋಟುಗಳನ್ನು ಪಡೆಯಲು, ವಿಜಯನಗರದ ಹಿನಕಲ್‌ ರಿಂಗ್‌ ರಸ್ತೆ ಬದಿಯಲ್ಲಿ ವಾಹನವೊಂದರಲ್ಲಿ ಮೂವರು ವ್ಯಕ್ತಿಗಳು ಕಾಯುತ್ತಿದ್ದಾರೆ’ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

‘ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದ ಪೊಲೀಸರು, ಆರೋಪಿಗಳಿದ್ದ ಕಾರನ್ನು ಸುತ್ತುವರಿದರು. ಈ ವೇಳೆಗೆ ಕಾರಿನಿಂದ ಹೊರಬಂದ ಸುಖವಿಂದರ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಇನ್‌ಸ್ಪೆಕ್ಟರ್ ಕುಮಾರ್ ಅವರ ಕೈಯನ್ನು ತಿರುಚಿ ದೂರಕ್ಕೆ ತಳ್ಳಿದ್ದಾನೆ. ನಂತರ, ಎಎಸ್ಐ ವೆಂಕಟೇಶ್‌ ಅವರ ಮುಖ ಮತ್ತು ಎದೆಗೆ ಬಲವಾಗಿ ಗುದ್ದಿದ್ದಾನೆ. ಒಂದು ಕೈಯಲ್ಲಿ ಕಾನ್‌ಸ್ಟೆಬಲ್ ವೀರಭದ್ರಸ್ವಾಮಿ ಕುತ್ತಿಗೆ ಹಿಡಿದ ಆತ ಮತ್ತೊಂದು ಕೈಯಲ್ಲಿ ತನ್ನ ರಿವಾಲ್ವರ್ ತೆಗೆಯಲು ಮುಂದಾದ. ಈ ಸಂದರ್ಭದಲ್ಲಿ, ಕೆಳಗೆ ಬಿದ್ದಿದ್ದ ಕುಮಾರ್ ತಮ್ಮ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡು ಶ್ವಾಸಕೋಶ ಹೊಕ್ಕಿದ್ದರಿಂದ ಸ್ಥಳದಲ್ಲೇ ಆರೋಪಿ ಮೃತಪಟ್ಟಿದ್ದಾನೆ. ಪರಾರಿ ಆಗಿರುವವರ ಪತ್ತೆಗಾಗಿ ಬಲೆ ಬೀಸಲಾಗಿದೆ. ಮೂವರು ಪೊಲೀಸರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯು ಕೇರಳದ ಕೋಯಿಕೋಡ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ. ಅಲ್ಲಿಂದ ಮೈಸೂರಿಗೆ ಬಂದು ಇಲ್ಲಿನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಮಾಹಿತಿ ನೀಡಿದ ವ್ಯಕ್ತಿಯಿಂದ ಆರೋಪಿಗಳು ₹ 10 ಲಕ್ಷ ಪಡೆದು ವಂಚಿಸಿದ್ದರು.ಪರಾರಿಯಾದವರಲ್ಲಿ ಒಬ್ಬಾತನ ಹೆಸರು ಅಗರವಾಲ್‌ ಎಂದು ಮೂಲಗಳು ತಿಳಿಸಿವೆ. ಒಂದೇ ದಿನ 7 ಸರಗಳ್ಳತನ, ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ, ವೃದ್ಧ ದಂಪತಿಯ ಬರ್ಬರ ಹತ್ಯೆ ನಂತರ ಈಗ ಜಾಲ ಬೆಳಕಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !