ಕನಸಿನಲ್ಲಿ ಕಂಡದ್ದಕ್ಕೆ ಹೋರಾಟ

ಬುಧವಾರ, ಜೂನ್ 19, 2019
29 °C

ಕನಸಿನಲ್ಲಿ ಕಂಡದ್ದಕ್ಕೆ ಹೋರಾಟ

Published:
Updated:
Prajavani

ಧಾತ್ರಿಯನು ಮದುವೆ ಮಂಟಪದವೊಲು ಸಿಂಗರಿಸಿ|
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ||
ಕೃತ್ರಿಮವನೆಡೆಬಿಡದೆ ನಡಸಿ ನಗುವ ವಿಲಾಸಿ|
ಚಿತ್ರಕಾರಿಯೊ ಮಾಯೆ – ಮಂಕುತಿಮ್ಮ || 143 ||

ಪದ-ಅರ್ಥ: ಧಾತ್ರಿ=ಜಗತ್ತು, ಕ್ಷಾತ್ರದಗ್ನಿ=ಕ್ಷಾತ್ರ(ಕ್ರಿಯಾತ್ಮಕವಾದ ಶಕ್ತಿ)+ಅಗ್ನಿ, ನರಹೃದಯಗಳೊಳಿರಿಸಿ=ನರಹೃದಯಗಳೊಳು+ಇರಿಸಿ, ಕೃತ್ರಿಮವನೆಡೆಬಿಡದೆ=ಕೃತ್ರಿಮವನ್ನು(ಸತ್ಯವಲ್ಲದ್ದನ್ನು)+ಎಡೆಬಿಡದೆ, ಚಿತ್ರಕಾರಿ=ಕಲಾವಿದ, ಚಿತ್ರಕಾರ.

ವಾಚ್ಯಾರ್ಥ: ಜಗತ್ತನ್ನು ಮದುವೆಯ ಮಂಟಪದಂತೆ ಸುಂದರವಾಗಿ ಆಕರ್ಷಕವಾಗುವಂತೆ ಅಲಂಕರಿಸಿ, ಮನುಷ್ಯನ ಹೃದಯದಲ್ಲಿ ಸಾಧನೆಯನ್ನು ಮಾಡುವ ರಾಜಸಗುಣವನ್ನಿರಿಸಿ ಸತ್ಯವಲ್ಲದ, ಅಸಹಜವಾದ ದ್ವಂದ್ವಗಳನ್ನು ಅವನಲ್ಲಿ ಹುಟ್ಟಿಸಿ ಸಂತೋಷಪಡುವ ಕಲಾವಿದೆ ಈ ಮಾಯೆ.

ವಿವರಣೆ: ಇಲ್ಲಿ ಕಣ್ಣಮುಂದೆ ಎರಡು ಚಿತ್ರಗಳನ್ನು ಕಗ್ಗ ನೀಡುತ್ತದೆ. ಮೊದಲನೆಯದು ತುಂಬ ಆಕರ್ಷಕವಾಗುವಂತೆ ಅಲಂಕೃತವಾದ ಮದುವೆಯ ಮಂಟಪ. ಎರಡನೆಯದು ಛಲದ, ಹೋರಾಟದ, ವ್ಯವಹಾರವನ್ನು ವ್ಯವಸ್ಥಿತಗೊಳಿಸುವ ಮನುಷ್ಯ. ಒಂದು ಆಕರ್ಷಣೆ ಮತ್ತೊಂದು ಛಲ. ತಾವು ಗಮನಿಸಬೇಕು, ಮದುವೆಯ ಮಂಟಪ ಶಾಶ್ವತವಾಗಿ ಇರುವುದಿಲ್ಲ. ಒಂದು ದಿನವೋ, ಎರಡು ದಿನವೋ ಏನು ಸಂಭ್ರಮ ಅಲ್ಲಿ! ಅಲ್ಲಿಯೇ ಇದ್ದುಬಿಡುವವರಂತೆ ಎಲ್ಲ ವ್ಯವಸ್ಥೆಯಾಗಿದೆ.

ಏನು ಅಲಂಕಾರ, ಏನು ಬಟ್ಟೆಗಳ ಝಗಮಗ, ರಾಶಿರಾಶಿ ಹೂವುಗಳ ಮೆರವಣಿಗೆ, ಸಂತೋಷ ಎಲ್ಲವೂ ಇದೆ. ಆದರೆ ಮದುವೆ ಮುಗಿದ ಮರುದಿನ ಅಲ್ಲಿ ಏನೂ ಇಲ್ಲ. ಮದುವೆಯ ಒಂದೆರಡು ದಿನ ವಧೂವರರು ನಾಯಕಿ-ನಾಯಕರು ಇಡೀ ಉತ್ಸವಕ್ಕೆ. ಮರುದಿನ ಅಲ್ಲಿಗೆ ಹೋದರೆ ಅವರು ಏನೂ ಅಲ್ಲ. ಜಗತ್ತು ಹಾಗೆಯೇ. ಅದರ ಅಲಂಕಾರ, ಆಕರ್ಷಣೆ ಮನವನ್ನು ಸೊರೆಗೊಳ್ಳುತ್ತದೆ, ಹಿಡಿದು ಎಳೆಯುತ್ತದೆ. ಅಲ್ಲಿಯೇ ಇರಬೇಕೆನ್ನಿಸುತ್ತದೆ, ಅದನ್ನು ಗೆಲ್ಲಬೇಕೆನ್ನಿಸುತ್ತದೆ. ಅದಕ್ಕೆ ಪೂರಕವಾಗಿ ಮನುಷ್ಯನಲ್ಲಿ ಕ್ಷಾತ್ರ ಪ್ರಕೃತಿಯನ್ನು ಮಾಯೆ ನಿಲ್ಲಿಸಿದೆ.

ಈ ರಾಜಸ ಪ್ರಕೃತಿಗೆ ಸದಾ ಪಡೆಯುವ, ಸಾಧಿಸುವ ಹುಚ್ಚು. ಅದಕ್ಕೆ ವ್ಯವಹಾರವನ್ನು ನಡೆಸುವ ಶಕ್ತಿಯನ್ನು, ದಕ್ಷತೆಯನ್ನು ಮಾಯೆ ಕೊಟ್ಟಿದೆ. ಆಕರ್ಷಣೆ ಛಲವನ್ನು ಉದ್ದೀಪಿಸುತ್ತದೆ. ಛಲ ಆಕರ್ಷಣೆಯನ್ನು ಪಡೆದೇ ತೀರುವ ಉತ್ಸುಕತೆಯನ್ನು ಹೊಂದಿದೆ.

ಆದರೆ ತಾನು ಪಡೆಯಬೇಕೆಂಬುದು ಮರೀಚಿಕೆ, ಕನಸು ಎಂಬುದು ಅವನಿಗೆ ಹೊಳೆದಿಲ್ಲವಾದ್ದರಿಂದ ಈ ಕೃತ್ರಿಮವನ್ನೇ ಬೆಂಬತ್ತಿ ಒದ್ದಾಡುತ್ತಾನೆ ಮನುಷ್ಯ.
ಭಾಗವತದಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ಹೇಳುತ್ತಾರೆ,

‘ಆತ್ಮಮಾಯಾಮೃತೇ ರಾಜನ್ ಪರಸ್ಯಾನುಭವಾತ್ಮನ: |
ನಘಟೇತಾರ್ಥ ಸಂಬಂಧ: ಸ್ಪಪ್ನದೃಷ್ಟುರಿವಾಂಜಸಾ ||

ಕನಸು ಕಂಡವನಿಗೆ ಆಗ ಅವನು ಕಂಡ ವಸ್ತುಗಳು ಅವನವಲ್ಲ. ಆತನಿಗೂ ಮತ್ತು ಕಂಡ ವಸ್ತುಗಳಿಗೂ ಸಂಬಂಧ ಉಂಟಾಗಿದ್ದು ಸ್ವಪ್ನದಿಂದ ಮಾತ್ರ. ಸ್ವಪ್ನ ಮುಗಿದ ಮೇಲೆ ಅವನಿಗೂ, ವಸ್ತುಗಳಿಗೂ ಯಾವ ಸಂಬಂಧವೂ ಇಲ್ಲ.
ಅಂತೆಯೇ ಕನಸಿನಲ್ಲಿ ಕಂಡ ವಸ್ತುಗಳಿಗೆ ಛಲದಿಂದ ಹೋರಾಡುವುದನ್ನು, ಈ ಕೃತ್ರಿಮವನ್ನು ಕಂಡು, ಇದನ್ನು ವ್ಯವಸ್ಥೆಗೊಳಿಸಿದ ಮಾಯೆ ನಗುತ್ತಾಳಂತೆ. ಇದು ಕನಸಿನಲ್ಲಿ ಕಂಡ ವಸ್ತುವಿಗೆ ಹಗಲು ಹೊಡೆದಾಡಿದಂತೆ. ಸಾಧಿಸಲಾಗದ್ದಕ್ಕೆ, ದು:ಖಕ್ಕೆ, ಕಷ್ಟಕ್ಕೆ ಕಾರಣ ಆಸೆ. ಅದಕ್ಕೇ ಅಲ್ಲಮ ಪ್ರಭು ಹೇಳುತ್ತಾರೆ.
‘ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ’ v

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !