ಮಂಗಳವಾರ, ಏಪ್ರಿಲ್ 20, 2021
32 °C
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಲಯ ಅರಣ್ಯಾಧಿಕಾರಿ ಅನಿತಾ

ಥಳಿತಕ್ಕೊಳಗಾದ ಅಧಿಕಾರಿಗೆ ಜೀವಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಟಿಆರ್‌ಎಸ್‌ ಪಕ್ಷದ ಶಾಸಕ ಕೋನೇರು ಕೋನಪ್ಪ ಅವರ ಸಹೋದರನಿಂದ ಹಲ್ಲೆಗೆ ಒಳಗಾಗಿರುವ ವಲಯ ಅರಣ್ಯಾಧಿಕಾರಿ ಸಿ. ಅನಿತಾ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ‘ಶಾಸಕರ ಕಡೆಯವರು ನನ್ನ ಹತ್ಯೆ ಮಾಡಬಹುದು’ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಗೆ ಸೇರಿದ್ದ ಜಾಗದಲ್ಲಿ ಗಿಡನೆಡಲು ಬಂದಿದ್ದ ಸಿ. ಅನಿತಾ ಅವರ ಮೇಲೆ ಶಾಸಕ ಕೋನೇರು ಕೋನಪ್ಪ ಅವರ ಸಹೋದರ ಕೋನೇರು ಕೃಷ್ಣ ಹಾಗೂ ಸಂಗಡಿಗರು ಭಾನುವಾರ ಹಲ್ಲೆ ನಡೆಸಿದ್ದರು.

ಇಲ್ಲಿನ ‘ಕಿಮ್ಸ್‌’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನಿತಾ, ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡುತ್ತಾ, ‘ಶಾಸಕ ಕೋನಪ್ಪ ಅವರು ಹಿಂದಿನಿಂದಲೂ ಬುಡಕಟ್ಟು ಜನರನ್ನು ಅರಣ್ಯ ಇಲಾಖೆಯ ವಿರುದ್ಧ ಎತ್ತಿಕಟ್ಟಿ ಗಲಭೆ ನಡೆಸುತ್ತಾ ಬಂದಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ನಾನು ಬಡ ಕುಟುಂಬದಲ್ಲಿ ಜನಿಸಿದವಳು. ತುಂಬಾ ಶ್ರಮಪಟ್ಟು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದೇನೆ. ಇಂಥ ಹಲ್ಲೆ ನಡೆದಾಗ ರಾಜಕೀಯ ನಾಯಕರು, ಸಹೋದ್ಯೋಗಿಗಳು ಅಸಹಾಯಕರಾಗಿ ನಿಂತುಬಿಟ್ಟರೆ ಕೆಲವು ಗುರಿಗಳನ್ನಿಟ್ಟುಕೊಂಡು ಕೆಲಸಮಾಡಲು ಬರುವ ನನ್ನಂಥ ಮಹಿಳೆಯರು ನಿರುತ್ಸಾಹಗೊಳ್ಳುತ್ತಾರೆ’ ಎಂದರು.

ಭಾನುವಾರದ ಘಟನೆಯನ್ನು ಸ್ಮರಿಸಿಕೊಂಡ ಅನಿತಾ, ‘ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಸ್ವಚ್ಛಗೊಳಿಸಲು ಮುಂದಾದ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರನ್ನು ಕೃಷ್ಣ ಅವರು ಮೊದಲು ದೂರಕ್ಕೆ ತಳ್ಳಿದರು. ಆ ಸಂದರ್ಭದಲ್ಲಿ ನಾನು ಟ್ರ್ಯಾಕ್ಟರ್‌ ಏರಿ ನಿಂತು ಗಲಭೆಯನ್ನು ನಿಲ್ಲಿಸುವಂತೆ ಮನವಿ ಮಾಡುತ್ತಿದ್ದೆ. ಆದರೆ ಅವರು ನನ್ನನ್ನೆ ಗುರಿಯಾಗಿಸಿ ಹಲ್ಲೆ ನಡೆಸಿದರು’ ಎಂದರು. ಚಿಕಿತ್ಸೆಯ ಬಳಿಕ ಕೆಲಸವನ್ನು ಮುಂದುವರಿಸಲು ಇಚ್ಛಿಸುವುದಾಗಿಯೂ ಅವರು ತಿಳಿಸಿದರು.

ಹಲ್ಲೆಯ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರೂ, ಅಸಿಫಾಬಾದ್‌ ಎಸ್‌ಪಿ ಮಲ್ಲರೆಡ್ಡಿ ಅವರನ್ನು ಬಿಟ್ಟರೆ ಜನಪ್ರತಿನಿಧಿಗಳು ಯಾರೂ ಅನಿತಾ ಅವರನ್ನು ಭೇಟಿಮಾಡಿಲ್ಲ. ಅರಣ್ಯ ಸಚಿವ ಪಿ. ಇಂದ್ರಕರಣ್‌ ರೆಡ್ಡಿ ಅವರು ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಆಡಳಿತಾ
ರೂಢ ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ಅವರು ಘಟನೆಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಕೃಷ್ಣ ಹಾಗೂ ಇತರ ಕೆಲವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಅನಿತಾಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಕೋನಪ್ಪ ಹಾಗೂ ಅವರ ಸಹೋದರನಿಗೆ ಶಿಕ್ಷೆ ನೀಡಬೇಕುಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು