ಶುಕ್ರವಾರ, ಏಪ್ರಿಲ್ 16, 2021
31 °C
ಸಕ್ಕರೆ ಸಚಿವರೊಂದಿಗೆ ರೈತ ಮುಖಂಡರ ಸಭೆ: ಸೂಕ್ತ ಪರಿಹಾರ ಕ್ರಮಕ್ಕೆ ಒತ್ತಾಯ

‘ರೈತರು–ಕಾರ್ಖಾನೆ ನಡುವಿನ ಸಂಘರ್ಷ ತಪ್ಪಿಸಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ನಾವು (ಕಬ್ಬು ಬೆಳೆಗಾರರು) ರಸ್ತೆಯಲ್ಲಿ ಕುಳಿತುಕೊಳ್ಳುವುದು. ಅವರು (ಕಾರ್ಖಾನೆ ಮಾಲೀಕರು) ನಮ್ಮ ಕಣ್ತಪ್ಪಿಸಿ ಅಡ್ಡಾಡುವುದು ಬೇಕಿಲ್ಲ. 10 ಪೈಸೆ ಅವರಿಗೆ ಲುಕ್ಸಾನ ಆಗಲಿ, ಇಲ್ಲ ನಮಗೇ ಆಗಲಿ, ನಾವು–ಅವರೂ ಒಟ್ಟಿಗೆ ಅಡ್ಡಾಡುವ ವಾತಾವರಣ ಸೃಷ್ಟಿಸಿ’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ರೈತ ಮುಖಂಡರು ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಚ್‌ ಅಂಡ್ ಟಿ ದರ, ತೂಕದಲ್ಲಿನ ಮೋಸ, ಕಬ್ಬಿನ ಇಳುವರಿ ನಿಗದಿ ಹಾಗೂ ಕಬ್ಬು ಪೂರೈಕೆ ವೇಳೆ ಕಾರ್ಖಾನೆಯವರು ರೈತರೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿನ ಅಂಶಗಳ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ರೈತರು ಸರ್ಕಾರದ ಗಮನ ಸೆಳೆದರು.

‘ರಾಜಕೀಯ ಮಾಡಲು ಕಾರ್ಯಕರ್ತರು ಬೇಕಿರುವಂತೆ ಕಾರ್ಖಾನೆ ನಡೆಸಲು ಕಬ್ಬು ಬೆಳೆಗಾರರು ಬೇಕೇ ಬೇಕು ಎಂಬುದನ್ನು ಸಂಬಂಧಿಸಿದವರಿಗೆ ಮನದಟ್ಟು ಮಾಡಿ’ ಎಂದು ಸಚಿವರಿಗೆ ಒತ್ತಾಯಿಸಿದರು.

ಎಚ್ ಅಂಡ್ ಟಿ ನಿಗದಿ:

ಕಟಾವು ಹಾಗೂ ಸಾಗಣೆ ದರ ನಿಗದಿಯಲ್ಲಿ ಏಕರೂಪತೆ ಇಲ್ಲ. ಒಂದೊಂದು ಕಾರ್ಖಾನೆಗಳು ಒಂದೊಂದು ದರ ವಿಧಿಸುತ್ತಿವೆ. ಇದರಿಂದ ಬೆಳೆಗಾರರ ಶೋಷಣೆ ಆಗುತ್ತಿದೆ. ಎಚ್‌ ಅಂಡ್‌ ಟಿ ನಿಗದಿಗೆ ಯಾವುದೇ ವೈಜ್ಞಾನಿಕ ಮಾನದಂಡವಿಲ್ಲ. ಹಾಗಾಗಿ ಕಟಾವಿನ ದರವನ್ನೇ ಸಾಗಣೆಗೂ ನಿಗದಿಪಡಿಸಿ ಎಂದು ರೈತ ಮುಖಂಡ ಕೆ.ಟಿ.ಪಾಟೀಲ ಒತ್ತಾಯಿಸಿದರು.

ಕಟಾವಿಗೆ ಕೊಡುವ ಕೂಲಿ ಹಾಗೂ ಸಾಗಣೆಗೆ ಬೇಕಿರುವ ಡೀಸೆಲ್ ದರ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುವ ಕಾರಣ ಅವೆರಡರ ನಡುವೆ ಸಮನ್ವಯ ಸಾಧಿಸಿ ಏಕರೂಪದ ಬೆಲೆ ನಿಗದಿ ಮಾಡಲು ಸಮಿತಿಯೊಂದನ್ನು ರಚಿಸಿ. ಅದರಲ್ಲಿ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ರೈತ ಮುಖಂಡರು ಇರಲಿ ಎಂಬ ಬೇಡಿಕೆಯನ್ನು ರೈತರು ಸಚಿವರ ಮುಂದಿಟ್ಟರು.

ತೂಕದಲ್ಲಿ ಮೋಸ ತಪ್ಪಿಸಿ:

ವೇ ಬ್ರಿಜ್‌ಗಳಲ್ಲಿ ಕಬ್ಬಿನ ತೂಕ ಮಾಡುವಾಗ ವ್ಯಾಪಕ ಮೋಸ ಮಾಡಲಾಗುತ್ತಿದೆ. ಇದನ್ನು ತಡೆಯಲು ಎಲ್ಲಾ ಕಾರ್ಖಾನೆಗಳ ಮುಂದೆ ಸರ್ಕಾರದಿಂದಲೇ ವೇ ಬ್ರಿಜ್‌ಗಳನ್ನು ಹಾಕಿಕೊಡಿ. ರೈತರೇ ಸರದಿ ಪ್ರಕಾರ ಅವುಗಳನ್ನು ನಡೆಸಿಕೊಂಡು ಹೋಗುತ್ತೇವೆ. ತೂಕದಲ್ಲಿನ ಮೋಸ ತಡೆಯಲು ಅತ್ಯಾಧುನಿಕ ತಾಂತ್ರಿಕತೆಯನ್ನು ಅಧಿಕಾರಿಗಳ ನಿಗಾದಡಿ ಅಳವಡಿಸುವುದನ್ನು ಫ್ಯಾಕ್ಟರಿಗಳಿಗೆ ಕಡ್ಡಾಯ ಮಾಡುವಂತೆ ರೈತರು ಒತ್ತಾಯಿಸಿದರು.

ಆಯಾ ಪ್ರದೇಶಲ್ಲಿ ಪ್ರತಿ ಮೂರು ವರ್ಷಕ್ಕೆ ಮಾದರಿ ಸಮೀಕ್ಷೆ (ಸ್ಯಾಂಪಲ್ ಸರ್ವೆ) ಮಾಡಿಸಿ ಕಬ್ಬಿನ ಇಳುವರಿ ಪ್ರಮಾಣ ಸರ್ಕಾರವೇ ಗೊತ್ತು ಮಾಡಲಿ. ಅದರ ಅನ್ವಯ ಕಬ್ಬಿಗೆ ಬೆಲೆ ನೀಡುವುದನ್ನು ಕಾರ್ಖಾನೆಗಳಿಗೆ ಕಡ್ಡಾಯಗೊಳಿಸಿ. ಇದರಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಕಡಿಮೆಯಾಗಲಿದೆ ಎಂದರು.

‘ಕಬ್ಬು ಕಳುಹಿಸುವ ವಿಚಾರದಲ್ಲಿ ಕಾರ್ಖಾನೆಗಳೊಂದಿಗೆ ರೈತರು ಮಾಡಿಕೊಳ್ಳುವ ಒಪ್ಪಂದ ಮಹಾರಾಷ್ಟ್ರದ ಮಾದರಿಯಲ್ಲಿ ಇರಲಿ‘ ಎಂದು ರೈತರು ಆಗ್ರಹಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಕೆ.ಟಿ.ಪಾಟೀಲ, ಮಹೇಶ ಪಾಟೀಲ, ಬಾಳು ಹೊಸಮನಿ, ಅಬ್ದುಲ್ ರಶೀದ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು