ಮಂಗಳವಾರ, ಏಪ್ರಿಲ್ 13, 2021
31 °C

ಮಳೆ ನೀರು ಸಂಗ್ರಹ ಕಡ್ಡಾಯ: ಜಲ ಸಂರಕ್ಷಣೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸತತ ಬರಗಾಲಕ್ಕೆ ತುತ್ತಾಗಿ ನೀರಿನ ಹಾಹಾಕಾರ ಹೆಚ್ಚುತ್ತಿರುವ ಜಿಲ್ಲೆಯಲ್ಲಿ ಇವತ್ತು ನೀರು ಸಂರಕ್ಷಣೆ ವಿಚಾರ ಅತ್ಯಂತ ಆದ್ಯತೆ ವಿಚಾರವಾಗಬೇಕಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಕಟ್ಟಡಗಳೂ ಸೇರಿದಂತೆ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸಲೇಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ, ‘ಈ ಹಿಂದೆ ನಡೆಸಿದ ಬಯಲು ಬರ್ಹಿದೆಸೆ ಮುಕ್ತ ಅಭಿಯಾನದ ಮಾದರಿಯಲ್ಲಿಯೇ, ಇವತ್ತು ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಅಭಿಯಾನ ಸಮರೋಪಾದಿಯಲ್ಲಿ ನಡೆಯಬೇಕಿದೆ’ ಎಂದರು.

‘ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ನಾಳೆಯಿಂದಲೇ ತಮ್ಮ ಕ್ಷೇತ್ರ ಕಾರ್ಯ ಸಿಬ್ಬಂದಿಯನ್ನು ಇದೊಂದೇ ಕಾರ್ಯಕ್ಕೆ ನಿಯೋಜಿಸಬೇಕು. ವಾರದ ಒಳಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತಮ್ಮ ಇಲಾಖೆಯ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸುವ ಯೋಜನೆ ರೂಪಿಸಬೇಕು. ಈಗ ನಾವು ಈ ಕೆಲಸ ಆದ್ಯತೆ ಮೆರೆಗೆ ಮಾಡದೆ ಹೋದರೆ ಭವಿಷ್ಯದಲ್ಲಿ ಪರಿತಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಈ ಕೆಲಸದ ಉಸ್ತುವಾರಿ ವಹಿಸಬೇಕು. ಹೋಬಳಿಗೊಬ್ಬ ನೋಡಲ್ ಅಧಿಕಾರಿ ನೇಮಕ ಮಾಡಬೇಕು. ಪ್ರತಿ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಬೇಕು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅವರು ಈ ಅಭಿಯಾನದ ಪ್ರಗತಿ ಮಾಹಿತಿ ನಿಯಮಿತವಾಗಿ ಕಲೆ ಹಾಕುತ್ತಿರಬೇಕು. ಮುಂದಿನ ಪ್ರತಿ ಕೆಡಿಪಿ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ’ ಎಂದು ಹೇಳಿದರು.

‘ಮಳೆ ನೀರು ಸಂಗ್ರಹ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ, ನರೇಗಾ, 14ನೇ ಹಣಕಾಸು ಆಯೋಗ ಹೀಗೆ ಯಾವುದಾದರೂ ಅನುದಾನದಲ್ಲಿ ಬೇಕಾದರೂ ಕೈಗೆತ್ತಿಕೊಳ್ಳಿ. ಆದರೆ ಶಾಸ್ತ್ರಕ್ಕೆಂದು ಮಾಡದೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹಿಂಗಾರು ಮಳೆ ಆರಂಭಕ್ಕೂ ಮುಂಚೆ ಅಂದರೆ ಸೆಪ್ಟೆಂಬರ್ ಒಳಗೆ ಈ ಕಾಮಗಾರಿಗಳು ಮುಗಿಯಬೇಕು’ ಎಂದು ತಾಕೀತು ಮಾಡಿದರು.

‘ಈ ಕಾರ್ಯದ ಜತೆಗೆ ಚೆಕ್‌ಡ್ಯಾಂಗಳ ನಿರ್ಮಾಣ, ನದಿಗಳ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಬೇಕು. ಫ್ಲೋರೈಡ್‌ ಪೀಡಿತ ಗ್ರಾಮಗಳಲ್ಲಿ ಹೆಚ್ಚಿನ ಮುತುವರ್ಜಿಯಿಂದ ಈ ಕೆಲಸಗಳು ನಡೆಯಬೇಕು. ಫ್ಲೋರೈಡ್‌ ಪೀಡಿತ ಗ್ರಾಮಗಳಲ್ಲಿ ಆಸಕ್ತ ನಾಗರಿಕರಿಗೆ ತಮ್ಮ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತದೆ. ಅದಕ್ಕಾಗಿ ಜಿಲ್ಲಾ ಖನಿಜ ನಿಧಿಯಿಂದ ₹20 ಲಕ್ಷ ಅನುದಾನ ಮೀಸಲಿಡಲಾಗಿದೆ’ ಎಂದು ತಿಳಿಸಿದರು.

ಸಭೆಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರು, ‘ಜಿಲ್ಲೆಯಲ್ಲಿ ಈವರೆಗೆ ಶೇ 39 ರಷ್ಟು ಮಳೆ ಕೊರತೆಯಾಗಿದೆ. ಪರಿಣಾಮ, ಶೇ 20 ರಷ್ಟು ಮಾತ್ರ ಬಿತ್ತನೆಯಾಗಿದೆ’ ಎಂದರು.

ಆಗ ಅಧ್ಯಕ್ಷರು, ‘ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯವರು ಸಹ ಮಧ್ಯಮ ಮತ್ತು ದೊಡ್ಡ ಹಿಡುವಳಿ ರೈತರಿಗೆ ಜಮೀನುಗಳಲ್ಲಿ ಮಳೆ ನೀರು ಸಂರಕ್ಷಿಸುವಂತೆ ಮನವೊಲಿಸುವ ಕೆಲಸ ಮಾಡಬೇಕು. ಜಲ ಸಂರಕ್ಷಣೆ ಮಾಡುವ ರೈತರಿಗೆ ಆದ್ಯತೆ ಮೆರೆಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ರೈತರು ಈ ಕಾರ್ಯಕ್ಕೆ ಮುಂದಾಗುತ್ತಾರೆ’ ಎಂದು ಹೇಳಿದರು.

‘ಪ್ರಸ್ತುತ ಕುಡಿಯುವ ನೀರು ಸಮಸ್ಯೆ ಇರುವ ಕಡೆಗಳಲ್ಲಿ ಆದ್ಯತೆ ಮೆರೆಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಕೊಳವೆಬಾವಿಗಳು ಬತ್ತಿದ ಕಡೆಗಳಲ್ಲಿ ಹೊಸದಾಗಿ ಅಥವಾ ಹಳೆಯ ಬಾವಿಗಳನ್ನು ಮರು ಕೊರೆಯಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಬೇಕು’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ವಿಶ್ವೇಶ್ವರಯ್ಯ ಜಲ ನಿಗಮ ಅಧಿಕಾರಿಗಳನ್ನು ಉದ್ದೇಶಿಸಿ ಅಧ್ಯಕ್ಷರು, ‘ನಿಮ್ಮ ನಿಗಮದ ವತಿಯಿಂದ ಕೈಗೊಳ್ಳುವ ಕಾಮಗಾರಿಗಳು ತೃಪ್ತಿಕರವಾಗಿಲ್ಲ. ಗುತ್ತಿಗೆದಾರರು ಲಾಬಿ ಮಾಡಿ ಕಾಮಗಾರಿಗಳನ್ನು ತಮಗೆ ಬೇಕಾದಲ್ಲಿ ಹಾಕಿಸಿಕೊಂಡು ಬಂದು ಬೇಕಾಬಿಟ್ಟಿ ಮಾಡುತ್ತಿದ್ದಾರೆ. ಕಾಮಗಾರಿ ಗುಣಮಟ್ಟ ಕೂಡ ಸಮಾಧಾನಕರವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಡಿಪಿಐ ಎಸ್‌.ಜಿ.ನಾಗೇಶ್‌ ಅವರನ್ನು ಉದ್ದೇಶಿಸಿ ಮಂಜುನಾಥ್, ‘ಅಂಗವಿಕಲ ವಿದ್ಯಾರ್ಥಿಗಳು ಇರುವ ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಮುಖ್ಯ ಯೋಜನಾಧಿಕಾರಿ ಎನ್.ಮಾಧುರಾಮ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು