ಅತಿ ನಿರೀಕ್ಷೆ: ನಿರಾಶೆಯಿಂದ ಮನೋರೋಗ

7

ಅತಿ ನಿರೀಕ್ಷೆ: ನಿರಾಶೆಯಿಂದ ಮನೋರೋಗ

Published:
Updated:

ಗುಲ್ಬರ್ಗ: ಅತಿಯಾದ ನಿರೀಕ್ಷೆ ಮತ್ತು ನಿರಾಶೆ ಹಾಗೂ ಛಿದ್ರಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆಯೇ ಮನೋರೋಗ ಹೆಚ್ಚಾಗಲು ಕಾರಣ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ಆಶ್ರಯದಲ್ಲಿ ಗುಲ್ಬರ್ಗದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಲಾದ `ಮಾನಸಿಕ ಆರೋಗ್ಯದ ಅರಿವು~ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವಜನಸಂಖ್ಯೆಯಲ್ಲಿ ಶೇ.10 ಮನೋರೋಗಿಗಳು. ಅಮೆರಿಕದಲ್ಲಿ ಶೇ.30ರಷ್ಟಿದ್ದಾರೆ. ಶೇ.20ರಷ್ಟು ಮಕ್ಕಳೂ ತುತ್ತಾಗಿದ್ದಾರೆ. ಮುಂದೊಂದು ದಿನ ಮನೋರೋಗವೇ ವಿಶ್ವದ ನಂ.1 ರೋಗವಾಗುವ ಸಾಧ್ಯತೆ ಇದೆ ಎಂದ ಅವರು, ನಿಮ್ಮ ಸುತ್ತಲಿನ ಮಾನಸಿಕ ರೋಗಿಗಳ ಬಗ್ಗೆ ಕಾಳಜಿ ವಹಿಸಿ ಆಸ್ಪತ್ರೆಗೆ ದಾಖಲಿಸಿ. ಈ ಜವಾಬ್ದಾರಿಯನ್ನು ಕರ್ತವ್ಯದಂತೆ ಪಾಲಿಸಿ ಎಂದು ಮನವಿ ಮಾಡಿದರು.ಆತ್ಮಹತ್ಯೆ: ವಿಶ್ವದಲ್ಲಿ ವರ್ಷಕ್ಕೆ 8ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಬೆಂಗಳೂರು ನಗರವು ನಂ.1 ಸ್ಥಾನದಲ್ಲಿದೆ. ಅದರಲ್ಲಿಯೂ ವಿದ್ಯಾವಂತರೇ ಅತಿ ಹೆಚ್ಚು ಎಂದ ಅವರು, ಹಿಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಶೇ.90ರಷ್ಟು ಮನೋರೋಗಿಗಳನ್ನು ಮನೆಮಂದಿಯೇ ಆರೈಕೆ ಮಾಡುತ್ತಿದ್ದರು. ಆದರೆ ಮಾಯವಾಗುತ್ತಿರುವ ಮಾನವೀಯತೆ, ಪ್ರೀತಿ, ಸಂಬಂಧ ಹಾಗೂ ಬದಲಾದ ಬದುಕಿನ ಶೈಲಿ, ಅಧಿಕಾರ- ಅಂತಸ್ತು- ಹೆಸರಿನ ಮೋಹವು ಮನೋರೋಗ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಕಾಯಿದೆ: 1987ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಯಾದರೂ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ನೀಡಿದ ನಿರ್ದೇಶನದಂತೆ ಎಲ್ಲ ಜಿಲ್ಲೆಗಳಲ್ಲಿ ಮನೋರೋಗ ಚಿಕಿತ್ಸಾ ಘಟಕ ಸ್ಥಾಪನೆ, ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಬೆಂಗಳೂರಿನ ನಿಮ್ಹೋನ್ಸ್ ಮತ್ತು ಧಾರವಾಡದ ಆಸ್ಪತ್ರೆ ಮಾದರಿಯಾಗಿದೆ ಎಂದರು.ವಿವಾಹ: ಹಿಂದೂ ವಿವಾಹ ಕಾಯಿದೆಯಲ್ಲಿ ವಿಚ್ಛೇಧನಕ್ಕೆ `ಗುಣಮುಖವಾಗದ~ ಮತ್ತು `ನಿರಂತರ ಹಾಗೂ ಆಗ್ಗಾಗ್ಗೆ~ ಕಾಣುವ `ಮಾನಸಿಕ ಅಸ್ವಸ್ಥೆ~ಯೂ ಒಂದು ಕಾರಣ ಎಂದಿದೆ. ಈ ಉಲ್ಲೇಖವನ್ನು ವಕೀಲರು ಸಮಾಜದ ಹಿತದೃಷ್ಟಿಯಿಂದ ಬಳಸಬೇಕು. ಮದುವೆ ಒಂದು ಪವಿತ್ರ ಸಂಬಂಧ. ಅದನ್ನು ಕಾನೂನನ್ನೂ ಮೀರಿದ ಅನುಭವದ ಆಧಾರದಲ್ಲಿ ನಿರ್ವಹಿಸಬೇಕು. ಅಂತಹ ಪ್ರಮಾಣ ಪತ್ರ ನೀಡುವಾಗ ವೈದ್ಯರೂ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಮನೋರೋಗಕ್ಕೆ ಮದ್ದಿದೆ. ಅದು ಅಂಟುರೋಗವಲ್ಲ. ಅಂಥವರಿಗೆ ಮಾಟ, ಮಂತ್ರ, ತಂತ್ರ ಮಾಡುವುದು ಅಥವಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮೂಢನಂಬಿಕೆ ಆಚರಿಸುವುದೂ ಅಪರಾಧ ಎಂದು ಎಚ್ಚರಿಸಿದರು.ಉಪನ್ಯಾಸ ಮಾಲಿಕೆ: ಮನೋರೋಗ ತಜ್ಞರು ಹಾಗೂ ಇತರ ವೈದ್ಯರುಗಳಾದ ಡಾ. ಬಿ.ವಿ. ಕರೂರ, ಡಾ. ಡಿ.ವಿ. ಪತಂಗೆ, ಡಾ. ವಿ.ವಿ. ಮಾಲೀಪಾಟೀಲ್, ಡಾ. ಎನ್.ಜಿ. ಘನಾತೆ, ಡಾ. ಎಚ್. ಚಂದ್ರಶೇಖರ್, ಡಾ. ಮಹೇಶಗೌಡ, ಡಾ. ರಾಜೇಂದ್ರಕುಮಾರ ಕಟ್ಟಿ, ಡಾ. ಶಿವಶಂಕರ ಪೋಳ್ ಅವರು ಮಾನಸಿಕ ಕಾಯಿಲೆ, ಲಕ್ಷಣಗಳು ಮತ್ತು ಚಿಕಿತ್ಸೆ;  ಮದ್ಯಪಾನ ದುಶ್ಚಟದಿಂದಾಗುವ ಪರಿಣಾಮಗಳು ಮತ್ತು ಚಿಕಿತ್ಸೆ; ಮಹಿಳೆಯರ ಮಾನಸಿಕ ಸಮಸ್ಯೆಗಳು ಹಾಗೂ ದಾಂಪತ್ಯ ಸಮಸ್ಯೆಗಳು ಮತ್ತು ವಿವಾಹ ವಿಚ್ಛೇದನ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೊನೆಯಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಜ್ಞ ಸಮಿತಿಯ ಚರ್ಚೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry