ಗುರುವಾರ , ಜೂನ್ 17, 2021
21 °C

ಮುಖ್ಯಗುರುವಿಗೆ ರೂ. 25,000 ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಹ ಶಿಕ್ಷಕರೊಬ್ಬರ ವೇತನದಲ್ಲಿ ಕಡಿತ ಮಾಡಿದ್ದು, ಆ ಕುರಿತು ಸಂಬಂಧಿಸಿದ ಶಿಕ್ಷಕನಿಗೆ ಮಾಹಿತಿ ನೀಡದ ಮುಖ್ಯಗುರುಗಳಿಗೆ ಕರ್ನಾಟಕ ಮಾಹಿತಿ ಆಯೋಗ ರೂ. 25,000 ದಂಡ ವಿಧಿಸಿದೆ.ದಂಡದ ಮೊತ್ತವನ್ನು ಒಮ್ಮೆ ಇಡಿಯಾಗಿ ಅಥವಾ ತಿಂಗಳಿಗೆ ತಲಾ 5,000 ರೂಪಾಯಿಗಳಂತೆ ಅವರ ವೇತನದಲ್ಲಿ ಐದು ಕಂತುಗಳಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಲು ಗುಲ್ಬರ್ಗ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ಅವರಿಗೆ ಆಯೋಗ ನಿರ್ದೇಶನ ನೀಡಿದೆ.ವಿವರ: ನಗರದ ರಿಂಗ್ ರಸ್ತೆಯ ನೆಹರೂ ನಗರದಲ್ಲಿರುವ ಶ್ರೀಗುರುದೇವ ಶಿಕ್ಷಣ ಸಂಸ್ಥೆಯಡಿ ನಡೆಯುವ ಶ್ರೀ ಶಂಕರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಜಿಲ್ಲಾ ಪಂಚಾಯಿತಿಯಿಂದ ಅನುದಾನಿತ) ಶಿವಯೋಗಿ ನಿಂಗಪ್ಪ ಬಂಡೆ ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಪಾವತಿಯಾಗುವ ವೇತನದಲ್ಲಿ ಮಾರ್ಚ್ 2005ರಿಂದ ಜೂನ್ 2008ರವರೆಗೆ ಸುಮಾರು 500ರಿಂದ 1500 ರೂಪಾಯಿವರೆಗೆ ಕಡಿತ ಮಾಡಲಾಗಿತ್ತು. ವೇತನದಲ್ಲಿ ಕಡಿತ ಮಾಡುವ ಕಾಲಂನಲ್ಲಿ `ತಿಂಗಳ ಕಡಿತ~ ಎಂದಷ್ಟೇ ನಮೂದಿಸಲಾಗಿತ್ತು.ವೇತನ ಕಡಿತದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಶಿವಯೋಗಿ, 22.3.2010ರಂದು ಮುಖ್ಯಗುರುಗಳಿಗೆ ಅರ್ಜಿ ಸಲ್ಲಿಸಿ ವಿವರ ಕೋರಿದ್ದರು. `ನನ್ನ ವೇತನದಲ್ಲಿ ಕಡಿತವಾಗುವ ಹಣ ಯಾರ ಖಾತೆಗೆ, ಯಾವ ಶೀರ್ಷಿಕೆಯಡಿ ಸಂದಾಯವಾಗುತ್ತಿದೆ? ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ಯಾಂಕಿಗೆ ನೀಡಿದ ಅನುಮೋದಿತ ಪೇ ಲಿಸ್ಟ್ ಹಾಗೂ ಖಜಾನೆಯಿಂದ ಬಂದಿರುವ ಚೆಕ್ ಪ್ರತಿಯನ್ನು ಕೊಡಿ~ ಎಂದು ಮುಖ್ಯಗುರುಗಳನ್ನು ಕೇಳಿದ್ದರು.ಆದರೆ ಮುಖ್ಯಗುರುಗಳಿಂದ ಮಾಹಿತಿ ಬರದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗಕ್ಕೆ 29.9.2010ರಂದು ಮೇಲ್ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಆಯೋಗವು, ಮುಖ್ಯಗುರುಗಳು ಅಗತ್ಯ ಮಾಹಿತಿನೀಡುವಂತೆ ನೋಡಿಕೊಳ್ಳಿ ಎಂದು ಡಿಡಿಪಿಐಗೆ ನಿರ್ದೇಶನ ನೀಡಿತ್ತು. ಡಿಡಿಪಿಐ ಅವರ ಪತ್ರದ (17.8.2011) ಅನುಸಾರ, ಮುಖ್ಯಗುರುಗಳು ಮಾಹಿತಿ ನೀಡಿರಲಿಲ್ಲ.ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ, ಅರ್ಜಿದಾರರು ಮನವಿ ಸಲ್ಲಿಸಿ 19 ತಿಂಗಳು ಕಳೆದರೂ ಎದುರುದಾರರು (ಮುಖ್ಯಗುರು) ಮಾಹಿತಿ ಒದಗಿಸಿಲ್ಲ ಎಂಬುದನ್ನು ಗಮನಿಸಿತು. ಮಾಹಿತಿ ಹಕ್ಕು ಕಾಯ್ದೆಯ 20(1)ನೇ ವಿಭಾಗದ ಅಡಿ, ಮುಖ್ಯಗುರು ಶೈಲಜಾ ಅವರಿಗೆ ರೂ. 25,000 ದಂಡ ವಿಧಿಸಿ, ಡಿಸೆಂಬರ್ 12, 2011ರಂದು ಆದೇಶ ನೀಡಿದೆ.ವೇತನದಲ್ಲಿ ಕಡಿತ: ಮುಖ್ಯಗುರು ಶೈಲಜಾ ಅವರು ತಮ್ಮ ವೇತನದಿಂದ ಇಡಿಯಾಗಿ ಅಥವಾ ತಿಂಗಳಿಗೆ ರೂ. 5000ರಂತೆ ಐದು ಕಂತುಗಳಲ್ಲಿ ಖಜಾನೆಗೆ ದಂಡದ ಹಣ ಪಾವತಿಸಿ, ಆ ಬಗ್ಗೆ ತನಗೆ ಮಾಹಿತಿ ನೀಡುವಂತೆ ಆಯೋಗ ನಿರ್ದೇಶನ ನೀಡಿದೆ. ಆದೇಶದ ಪ್ರತಿಯನ್ನು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐಗೆ ರವಾನಿಸಿದ್ದು, ದಂಡದ ಹಣ ಪಾವತಿಯಾದ ಬಗ್ಗೆ ಗಮನಿಸುವಂತೆ ನಿರ್ದೇಶನ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.