ವಿದ್ಯಾರ್ಥಿಗಳ ಕೊರತೆ: ಯೋಧರ ಊರ ಶಾಲೆಗೆ ಬಾಗಿಲು

ಬುಧವಾರ, ಜೂಲೈ 17, 2019
27 °C
ಸಿದ್ದಯ್ಯನಪುರ: 84 ವರ್ಷದ ಅನುದಾನಿತ ಮಿಷನರಿ ಹಿರಿಯ ಪ್ರಾಥಮಿಕ ಶಾಲೆ ಇನ್ನು ನೆನಪು

ವಿದ್ಯಾರ್ಥಿಗಳ ಕೊರತೆ: ಯೋಧರ ಊರ ಶಾಲೆಗೆ ಬಾಗಿಲು

Published:
Updated:
Prajavani

ಕೊಳ್ಳೇಗಾಲ: ಅದು ದೇಶಕ್ಕೆ ಹತ್ತಾರು ಯೋಧರನ್ನು ದೇಶಕ್ಕೆ ಕೊಟ್ಟ ಗ್ರಾಮ. ಗ್ರಾಮದಲ್ಲಿದ್ದುದು ಏಕೈಕ ಶಾಲೆ. ಇಲ್ಲಿ ಓದಿದ ಎಷ್ಟೋ ಮಂದಿ ದೇಶದ ಗಡಿ ಕಾದಿದ್ದಾರೆ. ಈಗಲೂ ಕಾಯುತ್ತಿದ್ದಾರೆ. ಇಲ್ಲಿ ಕಲಿತವರಲ್ಲಿ ಹಲವರು ಸರ್ಕಾರಿ ಹುದ್ದೆ‌ಗಳನ್ನು ಅಲಂಕರಿಸಿದ್ದಾರೆ. ಅಂತಹ ಶಾಲೆ ಇನ್ನು ನೆನಪು ಮಾತ್ರ. ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಶಾಲೆಗೆ ಶಾಶ್ವತವಾಗಿ ಬಾಗಿಲು ಹಾಕಲಾಗಿದೆ. 

ಕೊಳ್ಳೇಗಾಲದ ಅನತಿ ದೂರದಲ್ಲೇ ಇರುವ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಅನುದಾನಿತ ಮಿಷನರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಮಕ್ಕಳ ಕಲರವ ಕೇಳಿ ಬರುತ್ತಿಲ್ಲ. ಶಾಲೆಗೆ ಸೇರಲು ಕಡಿಮೆ ವಿದ್ಯಾರ್ಥಿಗಳು ಬಂದಿರುವುದರಿಂದ ಶಾಲೆಯನ್ನು ಮುಚ್ಚಲಾಗಿದೆ. 84 ವರ್ಷಗಳಿಂದ ನಿರಂತರ ಗ್ರಾಮದ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆದಿದ್ದ ಶಾಲೆ ಮುಚ್ಚಿರುವುದು ಗ್ರಾಮಸ್ಥರಲ್ಲಿ ಬೇಸರ ತರಿಸಿದೆ. 

ಕೊಳ್ಳೇಗಾಲದಿಂದ 2 ಕಿ.ಮೀ ದೂರದಲ್ಲೇ ಈ ಗ್ರಾಮ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ನಗರದ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಿರುವುದರಿಂದ, ಕೆಲವು ವರ್ಷಗಳಿಂದ ಈ ಶಾಲೆಗೆ ಬರುವ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿತ್ತು. 

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸರ್ಕಾರಿ ನೌಕರರನ್ನು ಹಾಗೂ ದೇಶಕ್ಕೆ ಯೋಧರನ್ನು ನೀಡಿರುವ ಗ್ರಾಮ ಎಂಬ ಹೆಗ್ಗಳಿಕೆ ಸಿದ್ದಯ್ಯನಪುರದ್ದು. ಹಾಗೆಯೇ ಸರ್ಕಾರದ ಆಯ ಕಟ್ಟಿನ ಸ್ಥಳಗಳಲ್ಲೂ ಗ್ರಾಮದ ಹಲವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರೆಲ್ಲರೂ ಇದೇ ಶಾಲೆಯಲ್ಲಿ ಓದಿ ಬೆಳೆದಿದ್ದರು. 

ಮಿಷನರಿ ಶಾಲೆ: 1935ರಲ್ಲಿ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದಾಗ ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಗ್ರಾಮದಲ್ಲಿ 1ರಿಂದ 7ನೇ ತರಗತಿಯವರೆಗೆ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು.

‘ಒಂದು ಕಾಲದಲ್ಲಿ 300ರಿಂದ 400 ಮಕ್ಕಳು ಇದ್ದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಾ ಬಂತು. 2016–17ರಲ್ಲಿ 70 ಮಕ್ಕಳಿದ್ದರು. 2017–18ನೇ ಸಾಲಿನಲ್ಲಿ ಕೇವಲ ಹತ್ತಕ್ಕೆ ಇಳಿದಿತ್ತು. ಈ ವರ್ಷವೂ ಅದೇ ಸಂಖ್ಯೆ ಮುಂದುವರಿದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !