ಸೋಮವಾರ, ಜೂನ್ 1, 2020
27 °C
ಕೃಷಿ ವಿಜ್ಞಾನಿಗಳ ಸಲಹೆ; ಮಳೆ ಕೊರತೆಗೆ ಸಮರ್ಪಕ ಕೃಷಿ ತಾಂತ್ರಿಕತೆ

ಒಣಬೇಸಾಯದಲ್ಲಿ ‘ಬರ ನಿರೋಧಕ’ ತಂತ್ರಜ್ಞಾನ!

ಜೋಮನ್‌ ವರ್ಗಿಸ್‌ Updated:

ಅಕ್ಷರ ಗಾತ್ರ : | |

Deccan Herald

ಗದಗ: ಗದಗ ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳು ಸತತ ಬರ ಮತ್ತು ಮಳೆ ಕೊರತೆ ಎದುರಿಸುತ್ತಿದೆ. ಮಳೆ ಕೊರತೆ ಇರುವೆಡೆ ‘ಬರ ನಿರೋಧಕ ತಂತ್ರಜ್ಞಾನ’ ಬಳಸಿ, ಕಡಿಮೆ ನೀರಿನಲ್ಲೇ ಸಮೃದ್ಧ ಬೆಳೆ ತೆಗೆಯಬಹುದು ಎನ್ನುತ್ತಾರೆ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳು.

ಒಣಬೇಸಾಯ ಆಧಾರಿತ ಕೃಷಿ ಭೂಮಿಯಲ್ಲಿ, ಮಳೆ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡು ಅಂದರೆ, ಭೂಮಿಗೆ ಬೀಳುವ ಪ್ರತಿ ಹನಿ ಮಳೆನೀರು, ಬಿದ್ದ ಸ್ಥಳದಲ್ಲೇ ಇಂಗುವಂತೆ ಮಾಡಿ, ಭೂಮಿಯ ತೇವಾಂಶ ಕಾಯ್ದುಕೊಂಡು, ಬೆಳೆ ಬೆಳೆಯುವುದೇ ಬರ ನಿರೋಧಕ ತಂತ್ರಜ್ಞಾನ.

ಮಳೆ ಕೊರತೆ ಇದ್ದಾಗ ಅಥವಾ ಬಿತ್ತನೆ ನಂತರ ಮಳೆಯಾಗುವುದು ವಿಳಂಬವಾದರೆ, ಈ ತೇವಾಂಶವೇ ಬೆಳೆಯನ್ನು ರಕ್ಷಿಸುತ್ತದೆ. ಅನಾರೋಗ್ಯಪೀಡಿತನಾದ ವ್ಯಕ್ತಿಯಲ್ಲಿ, ರೋಗಪ್ರತಿರೋಧಕ ಶಕ್ತಿಯನ್ನು ತುಂಬುವಂತೆ, ಬರದ ವಿರುದ್ಧ ಹೋರಾಡಲು ಬೆಳೆಗಳನ್ನು ಶಕ್ತಗೊಳಿಸುವ ಪ್ರಕ್ರಿಯೆ ಇದು. ಇದಕ್ಕೆ ಬಿತ್ತನೆಗೆ ಮುನ್ನ ಮತ್ತು ಬಿತ್ತನೆಯ ನಂತರ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮುಂಗಾರಿನ ಬೆಳೆಗಳು ಮತ್ತು ಹಿಂಗಾರು ಬೆಳೆಗಳ ಬೀಜೋಪಚಾರ ಮತ್ತು ಬಿತ್ತನೆ ಪದ್ಧತಿಯಲ್ಲಿ ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಕೊಂಡರೆ ಮಳೆ ಕೊರತೆಯಾದರೂ, ಬೆಳೆಗಳನ್ನು ರಕ್ಷಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕ್ಯಾಲ್ಸಿಯಂ ಕ್ಲೊರೈಡ್‌ ದ್ರಾವಣದಲ್ಲಿ ನೆನೆಸಿ ಬಿತ್ತನೆ:

ಒಣಬೇಸಾಯ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಲ್ಲಿ ಬರ ನಿರೋಧಕ ಶಕ್ತಿ ಬರಲು ಬಿತ್ತನೆ ಬೀಜಗಳನ್ನು ಕ್ಯಾಲ್ಸಿಯಂ ಕ್ಲೊರೈಡ್‌ ದ್ರಾವಣದಲ್ಲಿ ನೆನೆಸಿ ಬಿತ್ತನೆ ಮಾಡಬೇಕು. 20ಗ್ರಾಂ ಕ್ಯಾಲ್ಸಿಯಂ ಕ್ಲೊರೈಡ್‌ ಪುಡಿಯನ್ನು 1ಲೀಟರ್ ನೀರಿನಲ್ಲಿ ಬೆರೆಸಿ, ಈ ದ್ರಾವಣದಲ್ಲಿ 1 ಕೆ.ಜಿ ಬಿತ್ತನೆ ಬೀಜವನ್ನು 1 ಗಂಟೆ ನೆನೆಸಿಡಬೇಕು. ಸೂರ್ಯಕಾಂತಿ ಬೀಜವನ್ನು 4 ರಿಂದ 5 ಗಂಟೆಗಳ ಕಾಲ ನೆನೆಸಿ, ನಂತರ ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಹೀಗೆ ಮಾಡುವುದರಿಂದ ಬೀಜದ ಮೊಳಕೆ ಪ್ರಮಾಣ, ಸಸಿಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಅಂತರ ಸಾಲಿನ ಬಿತ್ತನೆ:

ಒಣಬೇಸಾಯ ಪದ್ಧತಿಯಲ್ಲಿ ಕಪ್ಪು ಮಣ್ಣಿನಲ್ಲಿ ಸೂರ್ಯಕಾಂತಿ ಬೆಳೆ ಬಿತ್ತುವಾಗ ಅಗಲವಾದ ಅಂತರದ ಸಾಲುಗಳಲ್ಲಿ (3 ರಿಂದ 4 ಅಡಿ) ಬಿತ್ತನೆ ಮಾಡಬೇಕು. ಇದರಿಂದ ಸಾಲಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆ ಹೊಡೆಯುವುದು ತಪ್ಪುತ್ತದೆ. ಮಣ್ಣಿನಲ್ಲಿರುವ ತೇವಾಂಶ ಬಹುದಿನಗಳವರೆಗೆ ಉಳಿಯುತ್ತದೆ. ಇಳುವರಿಯೂ ಶೇ 25ರಷ್ಟು ಹೆಚ್ಚುತ್ತದೆ.

ಬರ ನಿರೋಧಕ ತಂತ್ರಜ್ಞಾನದಲ್ಲಿ ಬೆಳೆಯುವ ಬೆಳೆಗಳು:

ಕಪ್ಪು ಭೂಮಿ: ಸೂರ್ಯಕಾಂತಿ, ಔಡಲ, ಎಳ್ಳು, ಸಜ್ಜೆ, ನವಣೆ, ಹುರುಳಿ, ಮಡಕೆ ಕಾಳು ಮತ್ತು ಮೇವಿನ ಬೆಳೆಗಳು.

ಮಸಾರಿ ಭೂಮಿ: ಸಜ್ಜೆ, ನವಣೆ, ಎಳ್ಳು, ಗುರೆಳ್ಳು, ಔಡಲ, ಹುರುಳಿ ಮತ್ತು ಮಡಕಿ ಕಾಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು