ಸರ್ವ ಋತು ಅವರೆ ಬೆಳೆ ಅಭಿವೃದ್ಧಿ!

7
ಕೃಷಿ ವಿಜ್ಞಾನಿಗಳಿಂದ ಐದು ವಿಶಿಷ್ಟ ತಳಿಗಳ ಪರಿಚಯ

ಸರ್ವ ಋತು ಅವರೆ ಬೆಳೆ ಅಭಿವೃದ್ಧಿ!

Published:
Updated:
Deccan Herald

ಬೆಂಗಳೂರು: ಇನ್ನು ಮುಂದೆ ಅವರೆ ಬೆಳೆ ಚಳಿಗಾಲಕ್ಕೆ ಮಾತ್ರ ಸೀಮಿತವಲ್ಲ. ಅದೇ ಸ್ವಾದ, ಪರಿಮಳದ ಅವರೆ ಬೆಳೆ ಯನ್ನು ಎಲ್ಲ ಋತುವಿನಲ್ಲೂ ಪಡೆಯಲು ಸಾಧ್ಯ.

ಬೆಂಗಳೂರಿನ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿ, ಅಧ್ಯಯನಕ್ಕೊಳಪಡಿಸಿರುವ 10 ಬಗೆಯ ತಳಿಗಳಲ್ಲಿ ಐದು ತಳಿಯ ಅವರೆ ಬೆಳೆಯನ್ನು ಚಳಿಗಾಲವಲ್ಲದೆ ಎಲ್ಲ ಋತುಗಳಲ್ಲೂ ಬೆಳೆದು ಫಸಲು ಪಡೆಯಬಹುದಾಗಿದೆ.

ನಿರ್ದಿಷ್ಟ ತಳಿಯ ಅವರೆ ಗಿಡಗಳು ಹೂವು ಬಿಡುವುದಕ್ಕೆ ಬೇಕಾಗುವ ಸಮಯ ಮತ್ತು ತಾಪಮಾನದ ಹದವನ್ನು ಅಂದಾಜು ಮಾಡಿ, ಬಿತ್ತನೆ ಮಾಡಿದರೆ ಇದು ಸಾಧ್ಯ ಎಂಬುದನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ಇದಕ್ಕೊಂದು ಗಣಿತ ಮಾದರಿ ಸಿದ್ಧ ಪಡಿಸಿದ್ದಾರೆ.

ಚಳಿಗಾಲದಲ್ಲೇ ಏಕೆ ಹೂ ಬಿಡುತ್ತವೆ?: ಅವರೆ ಗಿಡಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೂ ಬಿಡುತ್ತವೆ. ಇದೇ ಋತುವಿನಲ್ಲಿ ಹೂವು ಏಕೆ ಬಿಡುತ್ತವೆ ಎಂಬುದನ್ನು ವಿಜ್ಞಾನಿಗಳು ಈಗ ಪತ್ತೆ ಮಾಡಿದ್ದಾರೆ. ಚಳಿಗಾಲದಲ್ಲಿ ಹಗಲಿನ ಬೆಳಕಿಗಿಂತ, ಬಿಸಿಲಿನ ತಾಪಮಾನ ಹೂವು ಬಿಡುವುದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ ಒಂದು ಸಲ ಮಾತ್ರ ಇವು ಹೂವು ಬಿಡುತ್ತವೆ. ಹಗಲಿನ ಉದ್ದ ಮತ್ತು ಬೆಳಗಿನ ತಾಪಮಾನ ಇದಕ್ಕೆ ಕಾರಣ ಎಂದು ನಂಬಲಾಗಿತ್ತು. ಇದರಲ್ಲಿ ಹಗಲಿನ ಅವಧಿಯೇ (ಫೋಟೊಪಿರಿಯೇಡ್‌ ಎನ್ನುತ್ತಾರೆ.) ಪ್ರಧಾನ ಎಂಬ ನಂಬಿಕೆ ಇತ್ತು.

 ಅವರೆ ಗಿಡ ಹೂವು ಬಿಟ್ಟು ಕಾಳು ಕಟ್ಟಲು ಬೆಳಕಿನ ಅವಧಿ ಮತ್ತು ತಾಪಮಾನ ಎರಡೂ ಮುಖ್ಯ. ಆದರೆ, ತಾಪಮಾನವೇ ಇದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಒಟ್ಟು ಹತ್ತು ಬಗೆಯ ತಳಿಗಳಲ್ಲಿ ಐದು ತಳಿಗಳು ದ್ಯುತಿ
ಸೂಕ್ಷ್ಮತೆಯಿಂದಾಗಿ ಚಳಿಗಾಲದಲ್ಲಿ ಹೂವು ಬಿಡುತ್ತವೆ. ಉಳಿದ ತಳಿಗಳಿಗೆ ಈ ಸೂಕ್ಷ್ಮತೆ ಇಲ್ಲ. ಹೀಗಾಗಿ ಯಾವುದೇ ಋತುವಿನಲ್ಲಾದರೂ ಬೆಳೆಯಲು ಸಾಧ್ಯ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ.ಕೆ.ಎಂ.ಕೀರ್ತಿ, ಎಸ್‌.ರಮೇಶ್‌, ಎಂ.ಭೈರೇಗೌಡ, ಎ.ಮೋಹನ್ ರಾವ್‌ ಮತ್ತು ಮೇರಿ ರೀನಾ ಅವರು ಈ ಸಂಶೋಧನೆ ನಡೆಸಿದ್ದಾರೆ ಎಂದು ‘ಇಂಡಿಯನ್‌ ಸೈನ್ಸ್‌ ವೈರ್‌’ ಸಂಶೋಧನೆಯ ಸಾರಾಂಶ ಪ್ರಕಟಿಸಿದೆ.

**

ಬೆಳಕು ಮತ್ತು ತಾಪಮಾನದ ಲೆಕ್ಕಾಚಾರ

ಯಾವುದೇ ಸಸ್ಯದ ಬೆಳವಣಿಗೆಗೆ ಬೆಳಕು ಮತ್ತು ತಾಪಮಾನ ಮುಖ್ಯ. ಆದರೆ, ಒಂದೊಂದು ಸಸ್ಯಕ್ಕೂ ಅದರ ಪ್ರಮಾಣ ಬೇರೆಯಾಗುತ್ತಾ ಹೋಗುತ್ತದೆ. ತಾಪಮಾನದ ಮಾಪನಕ್ಕೆ ಗ್ರೋಥ್‌ ಡಿಗ್ರಿ ಡೇಸ್‌ (ಜಿಡಿಡಿ) ಎಂಬ ಲೆಕ್ಕವನ್ನು ಬಳಸಿದ್ದಾರೆ. ಬೆಳೆಯಲು ತೆಗೆದುಕೊಂಡ ದಿನಗಳು ಹಾಗೂ ಒಟ್ಟಾರೆ ದೈನಂದಿನ ಹಗಲಿನ ತಾಪಮಾನವನ್ನು ಗಣಿಸಿ ಇದನ್ನು ಲೆಕ್ಕಿಸುತ್ತಾರೆ.

ಸಸ್ಯ ಹೂವು ಬಿಡುವುದಕ್ಕೆ ತೆಗೆದುಕೊಳ್ಳುವ ದಿನಗಳ ಆಧಾರದಲ್ಲಿ ಸೂತ್ರವನ್ನು ರೂಪಿಸಲಾಗಿದೆ. ಅಲ್ಲದೆ, ವಿವಿಧ ಸಸ್ಯಗಳಿಗೆ ಬೇಕಾಗುವ ಕನಿಷ್ಠ, ಗರಿಷ್ಠ ಮತ್ತು ಹದವಾದ ತಾಪಮಾನವನ್ನೂ ಲೆಕ್ಕ ಹಾಕಿದ್ದಾರೆ. ಹದವಾದ ತಾಪಮಾನ ಹೂವು ಬಿಡಲು ಸೂಕ್ತವಾದ ಹವಾಮಾನ. ಗರಿಷ್ಠ ತಾಪಮಾನ ಇದ್ದರೆ ಹೂವು ಬಿಡುವುದಿಲ್ಲ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !